ಸಿನಿಮಾಗಳಲ್ಲಿ ಹೆಣ್ಣುಮಕ್ಕಳನ್ನು ಬೈದು, ಹುಡುಗರ ಪ್ರೀತಿಯೇ ಗ್ರೇಟ್, ಹುಡುಗಿಯರು ಯಾವತ್ತಿದ್ದರೂ ಮೋಸ ಮಾಡುವವರು ಎಂದು ಸಂಭಾಷಣೆ ಬರೆದು ಶಿಳ್ಳೆ ಗಿಟ್ಟಿಸಿಕೊಂಡ ಸಿನಿಮಾಗಳು ಸಾಕಷ್ಟಿವೆ. ಇವತ್ತು ಪ್ರೀತಿ ವಿಷಯಕ್ಕೆ ಬಂದರೆ ಹೆಣ್ಣು ಮಕ್ಕಳೇ ಮೋಸ ಮಾಡುತ್ತಾರೆಂದು ಹೇಳ್ಳೋದು ಈಗ ಸಿನಿಮಾ ಮಂದಿಗೆ ಟ್ರೆಂಡ್ ಆಗಿ ಬಿಟ್ಟಿದೆ. ಈಗ ಅದನ್ನೇ ಬಂಡವಾಳ ಮಾಡಿಕೊಂಡು ಹೊಸ ಸಿನಿಮಾವೊಂದು ತಯಾರಾಗಿದೆ. ಅದು “ಕಾಲೇಜ್ ಕುಮಾರಿ’. ಈ ಹಿಂದೆ ಕನ್ನಡದಲ್ಲಿ “ಕಾಲೇಜ್ ಕುಮಾರ್’ ಎಂಬ ಸಿನಿಮಾ ಬಂದಿರುವ ವಿಚಾರ ನಿಮಗೆ ಗೊತ್ತಿರಬಹುದು. ಈಗ “ಕಾಲೇಜ್ ಕುಮಾರಿ’. ಹಾಗಂತ ಆ ಚಿತ್ರಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಈ ಹಿಂದೆ “ನಾಗವಲ್ಲಿ ವರ್ಸಸ್ ಆಪ್ತಮಿತ್ರರು’ ಎಂಬ ಸಿನಿಮಾ ಮಾಡಿದ್ದ ಶಂಕರ್ ಅರುಣ್ ಈಗ “ಕಾಲೇಜ್ ಕುಮಾರಿ’ ಹಿಂದೆ ಬಂದಿದ್ದಾರೆ. ಇತ್ತೀಚೆಗೆ ಚಿತ್ರದ ಕೆಲವು ತುಣುಕುಗಳನ್ನು ಮಾಧ್ಯಮ ಮಂದಿಗೆ ತೋರಿಸಲಾಯಿತು. ಅಲ್ಲಿಗೆ ಇದು ಕೂಡಾ ಹೆಣ್ಣು ಮಕ್ಕಳನ್ನು ನೆಗೆಟಿವ್ ಆಗಿ ತೋರಿಸಿ, ಶಿಳ್ಳೆ ಗಿಟ್ಟಿಸಿಕೊಳ್ಳುವ ಪ್ರಯತ್ನ ಎಂಬುದು ಸಾಬೀತಾಯಿತು.
ಹೆಣ್ಣೊಬ್ಬಳು ಹೇಗೆ ಇಬ್ಬಿಬ್ಬರು ಹುಡುಗರಲ್ಲಿ ಪ್ರೀತಿಯ ನಾಟಕವಾಡಿ ಮೋಸ ಮಾಡುತ್ತಾಳೆ ಎಂಬ ಅಂಶದೊಂದಿಗೆ ಸಿನಿಮಾ ಮಾಡಿದ್ದಾಗಿ ಹೇಳಿಕೊಂಡರು ಶಂಕರ್ ಅರುಣ್. ಗಂಡಸಿನ ಯಶಸ್ಸಿನ ಹಿಂದೆ ಹೇಗೆ ಒಬ್ಬ ಮಹಿಳೆ ಇರುತ್ತಾಳ್ಳೋ ಅದೇ ರೀತಿ ಆತನ ತೊಂದರೆಯ ಹಿಂದೆಯೂ ಮಹಿಳೆ ಇರುತ್ತಾಳೆ ಎಂಬುದು ನಿರ್ದೇಶಕರ ವಾದ. ಅದೇ ವಾದದೊಂದಿಗೆ ಸಿನಿಮಾ ಮಾಡಿದ್ದಾರೆ. “ಚಿತ್ರದಲ್ಲಿ ಮಹಿಳೆಯರನ್ನು ಅವಮಾನಿಸಿದಂತಾಗಲ್ಲವೇ’ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುವ ಶಂಕರ್ ಅರುಣ್, “ಚಿತ್ರದಲ್ಲಿ ಕೇವಲ ನೆಗೆಟಿವ್ ಆಗಿ ತೋರಿಸಿಲ್ಲ. ಹೆಣ್ಣೊಬ್ಬಳ ಎರಡು ಮುಖಗಳನ್ನು ತೋರಿಸಿದ್ದೇನೆ’ ಎಂದರು. ಪತ್ರಕರ್ತರ ಮತ್ತೂಂದಿಷ್ಟು ಪ್ರಶ್ನೆಗಳಿಗೆ ಅವರ ಬಳಿ ಉತ್ತರವಿರಲಿಲ್ಲ.
ಚಿತ್ರದಲ್ಲಿ ರುಚಿತಾ ನಾಯಕಿ. ಇಬ್ಬಿಬ್ಬರು ಹುಡುಗರ ಜೊತೆ ಪ್ರೀತಿಯ ನಾಟಕವಾಡುವ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ನಿರ್ದೇಶಕರ ಕಥೆಗೂ ರುಚಿತಾ ಒಂದಷ್ಟು ಸಲಹೆ ಕೊಟ್ಟಿದ್ದಾರಂತೆ. ಕಾಲೇಜಿನಲ್ಲಿದ್ದಾಗ ತಮ್ಮ ಕೆಲವು ಸ್ನೇಹಿತರು ಇದೇ ರೀತಿ ಇಬ್ಬಿಬ್ಬರ ಜೊತೆ ಪ್ರೀತಿಯ ನಾಟಕವಾಡಿದ ಅಂಶವನ್ನು ನಿರ್ದೇಶಕರಿಗೆ ಹೇಳಿ,
ಸ್ಕ್ರಿಪ್ಟ್ ಅನ್ನು ಮತ್ತಷ್ಟು ಬಲಗೊಳಿಸಿದರಂತೆ. ಉಳಿದಂಣತೆ ಚಿತ್ರದಲ್ಲಿ ಜೀವಾ, ಚರಣ್ ರಾಜ್, ವಿಕ್ರಮ್ ಕಾರ್ತಿಕ್ ಸೇರಿದಂತೆ ಅನೇಕರು ನಟಿಸಿದ್ದಾರೆ.