Advertisement

ಗುತ್ತಿಗಾರು ಮಾದರಿ ಹಿ.ಪ್ರಾ. ಶಾಲೆಯಲ್ಲಿಲ್ಲ ಸುಸಜ್ಜಿತ ಶೌಚಾಲಯ

01:26 AM Jun 09, 2019 | Team Udayavani |

ಗುತ್ತಿಗಾರು: ಎಲ್ಲೆಡೆ ಸ್ವಚ್ಛತೆಗೆ ಆದ್ಯತೆ ನೀಡುತ್ತಾ ಹೊಸ ಶೌಚಾಲಯಗಳ ನಿರ್ಮಾಣಕ್ಕೆ ಪ್ರೋತ್ಸಾಹ ನೀಡುತ್ತಿದ್ದರೂ ಇಲ್ಲಿನ ಶಾಲೆಯಲ್ಲಿ ಹೊಸ ಶೌಚಾಲಯದ ರಚನೆ ಕಡತದಲ್ಲಿಯೇ ಬಾಕಿಯಾಗಿದೆ. ತಾಲೂಕಿನಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾಗಿರುವ ಗುತ್ತಿಗಾರಿನ ಸರಕಾರಿ ಮಾದರಿ ಹಿ.ಪ್ರಾ. ಶಾಲೆಯಲ್ಲಿ ಸರಿಯಾದ ಶೌಚಾಲಯ ವ್ಯವಸ್ಥೆಯಿಲ್ಲದೆ ಮಕ್ಕಳು ಬವಣೆಪಡುತ್ತಿದ್ದಾರೆ.

Advertisement

ಶತಮಾನ ಕಂಡ ಗುತ್ತಿಗಾರಿನ ಈ ಶಾಲೆಯಲ್ಲಿ 2019-20ನೇ ಸಾಲಿನಲ್ಲಿ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ದಾಖಲಾತಿ ಪಡೆದುಕೊಂಡಿದ್ದಾರೆ. ಆದರೆ ಇಷ್ಟು ಮಕ್ಕಳಿಗೆ ಬಹುಮುಖ್ಯವಾಗಿ ಬೇಕಾಗಿರುವ ಶೌಚಾಲಯದ ಸೌಲಭ್ಯ ಇಲ್ಲಿಲ್ಲ. ಇರುವ ಮುರುಕಲು ಶೌಚಾಲಯದ ಪೈಪ್‌ ಹಾಗೂ ಗುಂಡಿ ಬ್ಲಾಕ್‌ ಆಗಿದೆ. ಸರಿಯಾಗಿ ನೀರು ಹರಿಯದೇ ಮೂಗು ಮುಚ್ಚಿಕೊಂಡೇ ಮಕ್ಕಳು ದೇಹಬಾಧೆ ತೀರಿಸಿಕೊಳ್ಳುತ್ತಿದ್ದಾರೆ.

ಹೆಣ್ಮಕ್ಕಳಿಗೆ ಹೆಚ್ಚಿನ ಸಮಸ್ಯೆ

ಬಹುತೇಕ ಹೆಣ್ಣು ಮಕ್ಕಳೇ ಇರುವ ಈ ಶಾಲೆಯಲ್ಲಿ ಅಗತ್ಯ ಮೂಲಸೌಕರ್ಯ ಇಲ್ಲ. ಹೆಣ್ಣು ಮಕ್ಕಳಿಗೆ ಬಹಳ ತೊಂದರೆಯಾಗುತ್ತಿದೆ. ಇಲ್ಲಿ ಕೆ.ಜಿ. ತರಗತಿ ಮಕ್ಕಳೂ ಸಮಸ್ಯೆಗೆ ಒಳಗಾಗಿದ್ದಾರೆ. ಸಮಸ್ಯೆಯ ತಾತ್ಕಾಲಿಕ ಪರಿಹಾರಕ್ಕಾಗಿ ಶಿಕ್ಷಕರಿಗೆ ಮೀಸಲಾಗಿಟ್ಟಿರುವ ಎರಡು ಪ್ರತ್ಯೇಕ ಶೌಚಾಲಯಗಳನ್ನು ಬಳಸಿಕೊಳ್ಳಲಾಗುತ್ತಿದೆ.

ಅನುದಾನ ಕಡತದಲ್ಲೇ ಬಾಕಿ

Advertisement

ಸುಸಜ್ಜಿತ ಶೌಚಾಲಯ ನಿರ್ಮಾಣಕ್ಕಾಗಿ ಗುತ್ತಿಗಾರು ಗ್ರಾ.ಪಂ. 2 ಲಕ್ಷ ರೂ. ಅನುದಾನವನ್ನು ಮೀಸಲಿಟ್ಟಿದ್ದರೂ ಅದು ಕಡತದಲ್ಲಿಯೇ ಬಾಕಿಯಾಗಿದೆ. ಶೌಚಾಲಯ ನಿರ್ಮಾಣಕ್ಕಾಗಿ ಜಿ.ಪಂ. ಉಪವಿಭಾಗದ ಎಂಜಿನಿಯರ್‌ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಆದರೆ ಅಂದಾಜು ಪಟ್ಟಿ, ಕಾಮಗಾರಿ ತಾಂತ್ರಿಕ ಮಂಜೂರಾತಿ ಮೊದಲಾದ ಪ್ರಕ್ರಿಯೆಗಳು ನಡೆಯದೇ ಕಾಮಗಾರಿ ನನೆಗುದಿಗೆ ಬಿದ್ದಿದೆ.

ಗುತ್ತಿಗೆದಾರರೂ ಸಿಗುತ್ತಿಲ್ಲ

ಕಾಮಗಾರಿ ಪ್ರಾರಂಭಿಸಲು ಗುತ್ತಿಗೆದಾರರೂ ಸಿಗುತ್ತಿಲ್ಲ ಎಂದೂ ಹೇಳಲಾಗುತ್ತಿದೆ. ಹೊರನೋಟಕ್ಕೆ ಶಾಲೆ ಸುಣ್ಣ-ಬಣ್ಣ ಬಳಿದು ಸಿಂಗಾರಗೊಂಡಿದ್ದರೂ ಒಳಗಿನ ಅವ್ಯವಸ್ಥೆ ಮಾರಕವಾಗಿದೆ.

ಪರಿಹಾರ ಶೀಘ್ರ

ಶಾಸಕರು ಹಾಗೂ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಸಮಸ್ಯೆಗೆ ಪ್ರಾಮಾಣಿಕ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತೇವೆ.
– ಎನ್‌.ಟಿ. ಹೊನ್ನಪ್ಪ, ಅಧ್ಯಕ್ಷರು, ಎಸ್‌ಡಿಎಂಸಿ
ಟೆಂಡರ್‌ ಸಮಸ್ಯೆಯಿಂದ ಬಾಕಿ

ಶೌಚಾಲಯ ರಚನೆಗೆ ಅನುದಾನ ಮೀಸಲಿಟ್ಟಿದ್ದು, ಎಪ್ರಿಲ್ ಅನಂತರ ಟೆಂಡರ್‌ ಸಮಸ್ಯೆಯಿಂದ ಬಾಕಿಯಾಗಿದೆ. ಶೀಘ್ರದಲ್ಲಿ ಕಾಮಗಾರಿ ಪ್ರಾರಂಭಗೊಳ್ಳುವ ನಿರೀಕ್ಷೆ ಇರಿಸಿಕೊಳ್ಳಲಾಗಿದೆ.
– ಶ್ಯಾಂಪ್ರಸಾದ್‌ ಎಂ.ಆರ್‌. ಪಿಡಿಒ, ಗುತ್ತಿಗಾರು ಗ್ರಾ.ಪಂ.

– ಕೃಷ್ಣಪ್ರಸಾದ್‌ ಕೋಲ್ಚಾರ್‌

Advertisement

Udayavani is now on Telegram. Click here to join our channel and stay updated with the latest news.

Next