ಸಾಗರ: ರಾಜ್ಯದ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆಯಲ್ಲಿ ನೇರ ಪಾವತಿ ಪೌರಕಾರ್ಮಿಕರು ಮತ್ತು ಹೊರಗುತ್ತಿಗೆ ವಿಭಾಗದ ಎಲ್ಲ ಕಾರ್ಮಿಕರನ್ನು ಖಾಯಂಗೊಳಿಸುವಂತೆ ಒತ್ತಾಯಿಸಿ ಜು. 1ರಿಂದ ಕೆಲಸವನ್ನು ಸ್ಥಗಿತಗೊಳಿಸಿ ಅನಿರ್ಧಿಷ್ಟಾವಧಿ ಮುಷ್ಕರವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಸಾಗರ ನಗರಸಭೆ ನೇರ ಪಾವತಿ ಪೌರ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ನಾಗರಾಜ್ ಎಂ. ತಿಳಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸಂಘದ ಸೂಚನೆಯನ್ವಯ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಮುಷ್ಕರದಲ್ಲಿ ನೇರ ಪಾವತಿ ಪೌರ ಕಾರ್ಮಿಕರು, ನೀರು ಸರಬರಾಜು, ಕಸದ ವಾಹನ ಚಾಲಕರು, ಸಹಾಯಕರು, ಲೋಡರ‍್ಸ್, ಒಳಚರಂಡಿ ವಿಭಾಗದ ನೌಕರರು ಹಾಗೂ ಎಲ್ಲ ವಿಭಾಗದ ನೇರಪಾವತಿ ಪೌರ ಕಾರ್ಮಿಕರು ಮತ್ತು ಹೊರಗುತ್ತಿಗೆಯಲ್ಲಿ ಕೆಲಸ ಮಾಡುವ ನೌಕರರು ಪಾಲ್ಗೊಳ್ಳುತ್ತಿದ್ದಾರೆ. ಕಳೆದ ಹದಿನೈದು ಇಪ್ಪತ್ತು ವರ್ಷದಿಂದ ನಾವು ಕೆಲಸ ಮಾಡುತ್ತಿದ್ದರೂ ಸರ್ಕಾರಕ್ಕೆ ನಮ್ಮ ಬಗ್ಗೆ ಕರುಣೆ ಇಲ್ಲದಂತೆ ಆಗಿದೆ ಎಂದು ತಿಳಿಸಿದರು.
ಇದನ್ನೂ ಓದಿ : ಸಾಗರ : ಅಗ್ನಿಪಥ್ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ, 50 ಕ್ಕೂ ಹೆಚ್ಚು ಕಾರ್ಯಕರ್ತರ ಬಂಧನ
ನೇರಪಾವತಿ ಪೌರ ಕಾರ್ಮಿಕರನ್ನು ಮತ್ತು ಹೊರಗುತ್ತಿಗೆಯಲ್ಲಿ ಕೆಲಸ ಮಾಡುತ್ತಿರುವ ನೌಕರರನ್ನು ಖಾಯಂಗೊಳಿಸುವಂತೆ ಸರ್ಕಾರಕ್ಕೆ ಅನೇಕ ಬಾರಿ ಮನವಿ ಸಲ್ಲಿಸಿದ್ದಾಗಲೂ ಯಾವುದೇ ಸ್ಪಂದನೆ ಇಲ್ಲ. ಹಾಲಿ ನೌಕರರಿಗೆ 10 ಸಾವಿರದಿಂದ 14 ಸಾವಿರ ರೂಪಾಯಿವರೆಗೆ ವೇತನ ನೀಡುತ್ತಿದ್ದು, ಬೆಲೆಏರಿಕೆಯ ದಿನಗಳಲ್ಲಿ ನೌಕರರಿಗೆ ಈ ವೇತನದಿಂದ ಜೀವನ ನಿರ್ವಹಣೆ ಸಾಧ್ಯವೇ ಇಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಕನಿಷ್ಠ ವೇತನದಿಂದ ಮಕ್ಕಳಿಗೆ ವಿದ್ಯಾಭ್ಯಾಸ, ಮನೆ ಬಾಡಿಗೆ, ಕುಟುಂಬ ನಿರ್ವಹಣೆ, ಆರೋಗ್ಯ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. ಜೀವನ ಭದ್ರತೆ ಇಲ್ಲದೆ ಕೆಲಸ ಮಾಡುತ್ತಿರುವ ನೇರ ನೇಮಕಾತಿ ಪೌರ ಕಾರ್ಮಿಕರನ್ನು ಮತ್ತು ಹೊರಗುತ್ತಿಗೆ ಕಾರ್ಮಿಕರನ್ನು ತಕ್ಷಣ ಖಾಯಂಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ ಹಮ್ಮಿಕೊಂಡಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಕಾಮರಾಜ ಎ., ಸಂಚಾಲಕ ವೀರಾ ಆರ್., ಸದಸ್ಯರಾದ ಸಿ.ಮೂರ್ತಿ, ರಾಜೇಂದ್ರ ಎ., ಮಹೇಶ್ ಎಂ., ರವಿ ಆರ್. ಮಂಜುನಾಥ್, ಸತೀಶ್ ಇನ್ನಿತರರು ಹಾಜರಿದ್ದರು.