ಚಿತ್ರದುರ್ಗ: ಕಳೆದ ಹತ್ತು, ಹನ್ನೆರಡು ದಿನಗಳಿಂದ ಚಿತ್ರದುರ್ಗ, ದಾವಣಗೆರೆ ಹಾಗೂ ಶಿವಮೊಗ್ಗ ಜಿಲ್ಲೆಯ ಕೆಲ ಭಾಗದ ಜನರ ನಿದ್ದೆಗೆಡಿಸಿರುವ ಕಾಡಾನೆ ತನ್ನ ದಾಂಧಲೆ ಮುಂದುವರಿಸಿದೆ.
ಗುರುವಾರ ದಾವಣಗೆರೆ ಜಿಲ್ಲೆ ಹೊನ್ನಾಳಿ, ಚನ್ನಗಿರಿ ತಾಲೂಕಿನಲ್ಲಿ ಮೂವರನ್ನು ಗಾಯಗೊಳಿಸಿದ್ದ ಆನೆ ಶುಕ್ರವಾರ ಪುನಃ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿಗೆ ಬಂದಿದ್ದು, 6 ಮಂದಿ ಮೇಲೆ ದಾಳಿ ಮಾಡಿದೆ. ಚನ್ನಗಿರಿ ತಾಲೂಕಿನ ಬೆಟ್ಟಕಡೂರಿನ ಮೂಲಕ ಶುಕ್ರವಾರ ಬೆಳಗ್ಗೆ 7:30ರ ಸುಮಾರಿಗೆ ಹೊಳಲ್ಕೆರೆ ತಾಲೂಕಿನ ತಾಳಿಕಟ್ಟೆ ಗ್ರಾಮದ ಕಡೆ ಬಂದ ಆನೆ ಮೂರು ಮಂದಿ ಮೇಲೆ ದಾಳಿ
ಮಾಡಿದೆ. ಗ್ರಾಮದ ಸುರೇಶ್, ಮುದಿಯಪ್ಪ ಹಾಗೂ ಬಸಮ್ಮ ಎಂಬುವವರಿಗೆ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ದಾವಣಗೆರೆ
ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದಲ್ಲದೆ ಜಿಲ್ಲೆಯ ಗಡಿ ಗ್ರಾಮ ದುಮ್ಮಿ ಪ್ರವೇಶಿಸಿದ ಆನೆ ಪುಂಡಾಟ ನಡೆಸಿದ್ದು ಆನೆಪ್ಪ, ಸಿದ್ದೇಶ್, ನಾಗರಾಜ್ ಎಂಬುವವರ ಮೇಲೆ ದಾಳಿ ಮಾಡಿದೆ. ಗಂಭೀರವಾಗಿ ಗಾಯಗೊಂಡ ಇವರನ್ನು ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಲಾಗಿದೆ. ನಂತರ ಹೊಲದಲ್ಲಿದ್ದ ಎರಡು ಎತ್ತುಗಳ ಮೇಲೆ ದಾಳಿ ಮಾಡಿ ಹೊಟ್ಟೆಗೆ ದಂತದಿಂದ ತಿವಿದಿದ್ದು, ಒಂದು ಎತ್ತು ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೂಂದು ಎತ್ತು ಗಂಭೀರವಾಗಿ ಗಾಯಗೊಂಡಿದೆ.
ಚನ್ನಗಿರಿ ಗಡಿ ಭಾಗದಲ್ಲಿ ಕಾಡಾನೆ ಇದೆ ಎಂಬ ಮಾಹಿತಿ ಇದ್ದು, ಭದ್ರಾ ಅರಣ್ಯ ಪ್ರದೇಶದತ್ತ ಅಟ್ಟಲು ಸಿಬ್ಬಂದಿ
ಕಾರ್ಯಾಚರಣೆ ನಡೆಸುತ್ತಿದ್ದಾರೆ.
●ಕೆ.ಆರ್. ಮಂಜುನಾಥ್, ಡಿಎಫ್‌ಒ, ಚಿತ್ರದುರ್ಗ.