Advertisement

ಭೋಸಗಾ ಕೆರೆ ಪೈಪ್‌ಲೈನ್‌ದಿಂದ ಸತತ ನೀರು ಸೋರಿಕೆ

04:36 PM Jun 06, 2022 | Team Udayavani |

ಕಲಬುರಗಿ: ಮಹಾನಗರಕ್ಕೆ ನೀರು ಪೂರೈಸುತ್ತಿದ್ದ ಭೋಸಗಾ ಕೆರೆಯ ನೀರು ಪೂರೈಕೆ ಪೈಪ್ ಲೈನ್‌ (ಮಾರ್ಗ) ಒಡೆದು ಕೆರೆ ಕೆಳಗಿನ ಪೈಪಲೈನ್‌ ಮಾರ್ಗದುದ್ದಕ್ಕೂ ನೂರಾರು ಎಕರೆ ಭೂಮಿ ನಾಶವಾಗಿದ್ದು, ರೈತ ವರ್ಗ ಕಂಗಾಲಾಗಿದೆ.

Advertisement

ಕಳೆದ ಒಂದುವರೆ ವರ್ಷದಿಂದ ನೀರು ಸೋರಿಕೆಯಾಗಿ ಅಕ್ಕಪಕ್ಕದ ಹೊಲಗಳಲ್ಲಿ ನೀರು ನುಗ್ಗುತ್ತಿದೆ. ಕೆಲವೆಡೆ ನೀರು ನಿಂತು ದನಕರುಗಳಿಗೆ ಸ್ವಲ್ಪ ಅನುಕೂಲವಾಗಿದ್ದರೆ ಇನ್ನೊಂದೆಡೆ ಜಮೀನುಗಳಲ್ಲಿ ನೀರು ನಿಂತು ಹಾಗೂ ನೀರು ಹರಿಯುತ್ತಿರುವುದರಿಂದ ಏನು ಮಾಡೋದು ಎಂದು ಚಿಂತಾಗ್ರತರಾಗಿದ್ದಾರೆ ರೈತರು.

ಯಾವುದೇ ವಿದ್ಯುತ್ಛಕ್ತಿ ಇಲ್ಲದೇ ಭೋಸಗಾ ಕೆರೆ ಜಾಕವೆಲ್‌ ಎತ್ತಿದರೆ ಸಾಕು ನೀರು ಸಲೀಸಾಗಿ ಫಿಲ್ಟರ್‌ ಬೆಡ್‌ಗೆ ಬರುವ ನಿಟ್ಟಿನಲ್ಲಿ ಹಲವು ದಶಕಗಳ ಹಿಂದೆಯೇ ತಾಂತ್ರಿಕವಾಗಿ ನಿರ್ಮಿಸಲಾಗಿದೆ. ಮಹನಾಗರದ ಒಂದು ಲಕ್ಷ ಜನಸಂಖ್ಯೆಗೆ ಅನುಣವಾಗಿ ಕೆರೆ ನೀರನ್ನು ಬಳಸಲು ಮಾರ್ಗ (ಪೈಪ್‌ಪೈಲ್‌) ರೂಪಿಸಲಾಗಿದೆ. ಆದರೆ ಕಳೆದ ಹಲವಾರು ವರ್ಷಗಳಿಂದ ಮಹಾನಗರಕ್ಕೆ ನೀರು ಬಳಕೆ ನಿಲ್ಲಿಸಲಾಗಿದ್ದರೂ ಸರಳವಾಗಿ ನೀರು ಫಿಲ್ಡರ್‌ ಬೆಡ್‌ಗೆ ಬರುವುದರಿಂದ ಅದನ್ನೇ ಬಳಕೆ ಮಾಡಲಾಗುತ್ತಿದೆ.

ಕೆರೆ ಬೇಸಿಗೆಯಲ್ಲಿ ಒಣಗುತ್ತಿತ್ತು. ಆದರೆ ಕೆರೆಯ ಮಣ್ಣನ್ನು ಎತ್ತುವಳಿ ಮಾಡಿದ್ದರಿಂದ ಜತೆಗೆ ಮಳೆ ಹೆಚ್ಚಾಗಿದ್ದರಿಂದ ಕಳೆದೆರಡು ವರ್ಷದಿಂದ ಬೇಸಿಗೆಯಲ್ಲೂ ಕೆರೆ ಒಣಗಿಲ್ಲ. ಹೀಗಾಗಿ ಪೈಪಲೈನ್‌ದಿಂದ ನೀರು ಸದಾ ಸೋರುತ್ತಿದೆ. ಸೋರಿಕೆಯಾದ ನೀರಿನಿಂದ ಹೊಲಗಳಲ್ಲಿ ಹಳ್ಳವೇ ನಿರ್ಮಾಣವಾದಂತಾಗಿದೆ. ಭೋಸಗಾ ಕೆರೆ ಕೆಳಗಿನ ಭೋಸಗಾ ಕೆ., ಸೈಯದ್‌ ಚಿಂಚೋಳಿ ಹಾಗೂ ತಾಜಸುಲ್ತಾನಪುರ ನೂರಾರು ರೈತರ ಭೂಮಿ ಕೆಸರಿನ ಗದ್ದೆಯಾಗಿದೆ.

ಮುಂಗಾರು ಪ್ರಾರಂಭವಾದ ನಂತರ ಏನಾದರೂ ಬಿತ್ತನೆ ಮಾಡಬೇಕೆಂದರೆ ಹೊಲದಲ್ಲಿ ನೀರೇ ಹರಿದು ಬರುತ್ತಿದೆ. ಒಂದು ವೇಳೆ ಹರಿದು ಬರುವ ನೀರಿನಿಂದ ಏನಾದರೂ ಕೃಷಿ ಮಾಡಬೇಕೆಂದರೆ ಸಾಧ್ಯವಿಲ್ಲ. ಸತತ ನೀರು ಹರಿಯುವುದರಿಂದ ಹೊಲ ಸಂಪೂರ್ಣ ಕೆಸರಿನ ಗದ್ದೆಯಾಗಿದೆ. ಹೀಗಾಗಿ ಹೊಲ ಸಂಪೂರ್ಣ ನಾಶವಾಗಿದೆ.

Advertisement

ಇಟ್ಟಂಗಿ ಭಟ್ಟಿ ಕೈವಾಡ: ರೈತರು ಪೈಪಲೈನ್‌ ಒಡೆದು ಅಪಾರ ಪ್ರಮಾಣದಲ್ಲಿ ಜಮೀನು ಹಾಳಾಗುತ್ತಿರುವುದನ್ನು ಕಂಡು ರೈತರು ಪಾಲಿಕೆ ಅಧಿಕಾರಿಗಳು ಹಾಗೂ ನೀರು ಸರಬರಾಜು ಮಂಡಳಿಗೆ ಹಲವಾರು ಸಲ ದೂರು ನೀಡಿದ್ದಾರೆ. ಅಧಿಕಾರಿಗಳು ಒಂದೆರಡು ಸಲ ಸ್ಥಳಕ್ಕೆ ಬಂದು ದುರಸ್ಥಿಗೊಳಿಸದೇ ಹಾಗೆ ಸುಮ್ಮನೇ ಹೋಗಿದ್ದಾರೆ. ಇಟ್ಟಂಗಿ ಭಟ್ಟಿ ಹೊಂದಿರುವರೇ ಪೈಪಲೈನ್‌ ದುರಸ್ತಿಯಾಗಂತೆ ನೋಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ಇಟ್ಟಂಗಿ ಭಟ್ಟಿ ಅವರು ನೀರಿಗಾಗಿ ಬೋರವೆಲ್‌ ಕೊರೆದಿಲ್ಲ. ಬದಲಾಗಿ ಇದೇ ಪೈಪ್‌ಲೈನ್‌ದಿಂದ ಒಡೆದು ನೀರು ಪಡೆಯುತ್ತಿರುವುದೇ ರಾದ್ಧಾಂತಕ್ಕೆ ಕಾರಣವಾಗಿದೆ. ನೀರು ಒಡೆದು ಕೆರೆಯಂತಾದ ಸ್ಥಳದಿಂದ ಮೋಟಾರು ಹಚ್ಚಿ ನೀರು ಪಡೆಯಲಾಗುತ್ತದೆ. ಒಟ್ಟಾರೆ ರೈತರು ಏನಾದರೂ ಕೇಳಲು ಹೋದರೆ ಕೈಜೋರು ಮಾಡುತ್ತಿದ್ದಾರೆ. ಕೆಲವೊಮ್ಮೆ ರೈತರ ಮೇಲೆ ಹಲ್ಲೆಗಳು ಆಗಿವೆ. ಒಟ್ಟಾರೆ ಅಧಿಕಾರಿಗಳ ನಿರ್ಲಕ್ಷ$cತನದಿಂದ ಹಾಗೂ ಇಟ್ಟಂಗಿ ಭಟ್ಟಿಯವರಿಂದ ನೂರಾರು ರೈತರ ಕೃಷಿ ಭೂಮಿ ನಾಶವಾಗಲು ಕಾರಣವಾಗಿದೆ. ಪೈಪ್‌ಲೈನ್‌ ದುರಸ್ತಿಗೊಳಿಸುವ ಬಗ್ಗೆ ಕೇಳಿದರೆ ದುಡ್ಡಿಲ್ಲ ಎಂದು ಅಧಿಕಾರಿಗಳು ಹಾರಿಕೆ ಉತ್ತರ ನೀಡುತ್ತಾ ಸಮಯದೂಡುತ್ತಾ ಬರುತ್ತಿದ್ದಾರೆ. ರೈತರ ತಾಳ್ಮೆ ಶಕ್ತಿ ಮೀರಿದ್ದು, ಆಕ್ರೋಶದಿಂದ ಆಗುವ ಅನಾಹುತಕ್ಕೆ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಪೈಪ್‌ಲೈನ್‌ದಿಂದ ನೀರು ಸೋರಿಕೆ ಆಗುತ್ತಿರುವುದನ್ನು ಅವಲೋಕಿಸಲು ಹಾಗೂ ಮುಂದಿನ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಎಲ್‌ ಆ್ಯಂಡ್‌ ಟಿ ಮತ್ತು ಕರ್ನಾಟಕ ನಗರ ನೀರು ಸರಬರಾಜು ಮಂಡಳಿ ಅಧಿಕಾರಿಗಳನ್ನು ಸೋಮವಾರವೇ (ಜೂನ್‌.6ರಂದು ) ಕಳುಹಿಸಲಾಗುವುದು. -ಆರ್‌.ಪಿ. ಜಾಧವ, ಉಪ ಆಯುಕ್ತ (ಅಭಿವೃದ್ಧಿ), ಮಹಾನಗರ ಪಾಲಿಕೆ

ಪೈಪಲೈನ್‌ ಒಡೆದು ನೀರು ಸೋರಿಕೆಯಾಗಿ ಹೊಲ ಹಾಳಾಗಿರುವುದನ್ನು ಭಾವಚಿತ್ರ ಸಮೇತ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಇಇ, ಜೆಇಇ ಅಧಿಕಾರಿಗಳಂತೂ ಫೋನೇ ಎತ್ತುವುದಿಲ್ಲ. ರೈತರ ಮಾತಿಗೆ ಕಿಮ್ಮತ್ತಿಲ್ಲ ಎನ್ನುವಂತೆ ಮಾತನಾಡುತ್ತಾರೆ. ಜನಪ್ರತಿನಿಧಿಗಳಂತೂ ಈ ಸಮಸ್ಯೆಗೂ ತಮಗೂ ಸಂಬಂಧವಿಲ್ಲ ಎನ್ನುವಂತಿದ್ದಾರೆ. –ಗುರುರಾಜ ನಂದಗಾಂವ, ರೈತ, ತಾಜಸುಲ್ತಾನಪುರ

ನೀರು ಸೋರಿಕೆಯಿಂದ ಕಳೆದ ವರ್ಷ ಬಿತ್ತನೆಯೇ ಮಾಡಿಲ್ಲ. ನೀರು ಸೋರಿಕೆ ತಡೆಗಟ್ಟಿದರೆ ಹೊಲ ಹದ ಮಾಡಿ ಬಿತ್ತನೆ ಮಾಡಬಹುದು. ಕೆಸರಿನಿಂದ ಅರ್ಧ ಹೊಲ ಬಿತ್ತನೆಯನ್ನೇ ಮಾಡಿಲ್ಲ. ಸಣ್ಣದಾಗಿ ಹರಿದು ಬರುವ ನೀರು ಬಳಕೆ ಮಾಡಬೇಕೆಂದರೆ ಮೋಟಾರು ಹಚ್ಚಲು ಸಾಧ್ಯವಿಲ್ಲ. ಒಟ್ಟಾರೆ ತ್ರಿಶಂಕು ಸ್ಥಿತಿಯಲ್ಲಿರುವುದರಿಂದ ಏನು ಮಾಡೋದು ತೋಚುತ್ತಿಲ್ಲ. -ನಾಗಣ್ಣ ದೇವಿಂದ್ರಪ್ಪ ಸಲಗರ, ರೈತ

„ಹಣಮಂತರಾವ ಭೈರಾಮಡಗಿ

Advertisement

Udayavani is now on Telegram. Click here to join our channel and stay updated with the latest news.

Next