Advertisement

ನಿರಂತರ ಮಳೆ; ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗ ಭೀತಿ

02:44 PM Aug 08, 2022 | Team Udayavani |

ಉಡುಪಿ: ಜಿಲ್ಲಾದ್ಯಂತ ನಿರಂತರ ಮಳೆ ಸುರಿಯುತ್ತಿದ್ದು, ಮತ್ತೆ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ.

Advertisement

ಜಿಲ್ಲೆಯಲ್ಲಿ ಜುಲೈ ತಿಂಗಳಲ್ಲಿ 557 ಅತಿಸಾರಭೇದಿ, 31 ಕರುಳುಬೇನೆ, 7 ವಿಷಮ ಶೀತ ಜ್ವರ, 127 ಡೆಂಗ್ಯೂ, 10 ಚಿಕುನ್‌ಗುನ್ಯ, 40 ಎಚ್‌1ಎನ್‌1 ಪ್ರಕರಣಗಳು ವರದಿಯಾಗಿವೆ. ಈ ಸಂಖ್ಯೆ ಆಗಸ್ಟ್‌ ತಿಂಗಳಲ್ಲಿ ಮತ್ತಷ್ಟು ಹೆಚ್ಚಳವಾಗುವ ಭೀತಿಯೂ ಎದುರಾಗಿದೆ.

ಇದಕ್ಕೆ ಪ್ರಮುಖ ಕಾರಣ ನಿರಂತರ ಸುರಿಯುತ್ತಿರುವ ಮಳೆ.

ಹವಾಮಾನ ವೈಪರೀತ್ಯ

ಮುಖ್ಯವಾಗಿ ಬಿಸಿಲು ಇಲ್ಲದಿರುವುದರಿಂದ ನಿಂತ ನೀರು ಆವಿಯಾಗುತ್ತಿಲ್ಲ. ಇದರಿಂದ ಸೊಳ್ಳೆಗಳು ಉತ್ಪತ್ತಿಯಾಗಿ ಸೋಂಕು ಪ್ರಸರಣಕ್ಕೆ ಕಾರಣವಾಗುತ್ತಿದೆ. ತಂಗಾಳಿಯೂ ಸೋಂಕು ಹರಡಲು ಕಾರಣವಾಗುತ್ತಿದೆ. ರಸ್ತೆಯಲ್ಲಿ ಹರಿಯುವ ಕೊಳಚೆ ನೀರನ್ನು ಸ್ಪರ್ಷಿಸುವುದರಿಂದ ನಮ್ಮ ಕಾಲಿನಲ್ಲಿ ಗಾಯಗಳಿದ್ದರೆ ಆ ಮೂಲಕವೂ ಸೋಂಕು ದೇಹವನ್ನು ಪ್ರವೇಶಿಸುವ ಸಾಧ್ಯತೆಗಳಿರುತ್ತವೆ. ಕೊಳಚೆ ನೀರಿನಲ್ಲಿ ಇಲಿಗಳ ಹಿಕ್ಕೆಗಳಿದ್ದು, ಈ ಮೂಲಕ ಇಲಿಜ್ವರಗಳೂ ಹರಡಬಹುದು.

Advertisement

ಮಾಸ್ಕ್ ಧಾರಣೆಗೆ ಸಲಹೆ

ಸಾಂಕ್ರಾಮಿಕ ರೋಗಗಳು ಮಕ್ಕಳಲ್ಲಿಯೂ ಹೆಚ್ಚಾಗಿ ಕಂಡುಬರುತ್ತಿವೆ. ಜ್ವರ, ಶೀತ, ಕೆಮ್ಮು, ಕಫ‌ಗಳಿಂದ ಮಕ್ಕಳು ಸೋಂಕಿಗೆ ತುತ್ತಾಗುತ್ತಿದ್ದಾರೆ. 10 ವರ್ಷದೊಳಗಿನ ಮಕ್ಕಳಿಗೆ ಶಾಲೆಗಳಲ್ಲಿ ವಿದ್ಯಾರ್ಥಿಗಳಿಂದಲೂ ಹರಡುವ ಸಾಧ್ಯತೆಗಳು ಹೆಚ್ಚಾಗಿವೆ. ಈ ಕಾರಣಕ್ಕೆ ಮಾಸ್ಕ್ಗಳನ್ನು ಧರಿಸಿದರೆ ತಕ್ಕ ಮಟ್ಟಿಗಾದರೂ ಸೋಂಕು ಪ್ರಸರಣ ತಡೆ ಗಟ್ಟಬಹುದು ಎನ್ನುತ್ತಾರೆ ಆರೋಗ್ಯಾಧಿಕಾರಿಗಳು.

ಹಲವು ಜಾಗೃತಿ ಕಾರ್ಯಕ್ರಮ: ಸಾಂಕ್ರಾಮಿಕ ರೋಗ ತಡೆಗಟ್ಟಲು ಸರ್ವೇಕ್ಷಣಾ ಇಲಾಖೆ ಮೂಲಕ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ನಗರ ಹಾಗೂ ಗ್ರಾಮಾಂತರ ಭಾಗಗಳಲ್ಲಿ ವಿಶೇಷ ನಿಗಾ ಇರಿಸಲಾಗಿದೆ. ರೋಗಲಕ್ಷಣಗಳು ಕಂಡುಬಂದರೆ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಕ ಚಿಕಿತ್ಸೆ ಪಡೆದುಕೊಳ್ಳಿ. –ಡಾ| ನಾಗರತ್ನಾ, ಜಿಲ್ಲಾ ಸರ್ವೇಕ್ಷಣಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next