Advertisement

ಮುಂದುವರಿದ ಮಳೆ ಆರ್ಭಟ: ಅಪಾರ ಹಾನಿ

03:34 PM Jun 17, 2017 | Team Udayavani |

ಆಳಂದ: ತಾಲೂಕಿನಲ್ಲಿ ಸತತವಾಗಿ ಮಳೆ ಆರ್ಭಟ ಮುಂದುವರಿದಿದ್ದು, ಅಮರ್ಜಾ ಅಣೆಕಟ್ಟೆ ಕೆಳಭಾಗದಲ್ಲಿ ನದಿನೀರು ಉಕ್ಕಿ ಹರಿದ ಪರಿಣಾಮ ಅನೇಕ ರೈತರ ಕಬ್ಬು, ಹೊಲದ ಫಲವತ್ತಾದ ಮಣ್ಣು ಸೇರಿದಂತೆ ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದೆ. ಮತ್ತೂಂದೆಡೆ ಬಿತ್ತನೆಗೆ ಸಜ್ಜಾಗಿ ಕುಳಿತಿರುವ ರೈತರಿಗೆ ಮಳೆ ಬಿಡುವು ಕೊಡುತ್ತಿಲ್ಲ.

Advertisement

ಸತತವಾಗಿ ದಿನಬಿಟ್ಟು ದಿನ ಸುರಿದ ಮಳೆಯಿಂದ ಒಂದಿಲ್ಲೊಂದು ಗ್ರಾಮದಲ್ಲಿ ನೀರಿನ ರಭಸಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಜಮೀನು ಕೊಚ್ಚಿ ಹೋಗುತ್ತಿದೆ. ಹೊಲದಲ್ಲಿ ನೀರು ನಿಂತುಕೊಂಡು ಬಿತ್ತನೆಗೆ ಅಡ್ಡಿಯಾಗಿದೆ. ಗುರುವಾರ ರಾತ್ರಿ ನಿಂಬರಗಾ ವಲಯದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಅಮರ್ಜಾ ಅಣೆಕಟ್ಟೆ ಕೆಳಭಾಗದಲ್ಲಿ ನದಿ ನೀರು ಉಕ್ಕಿಹರಿದ ಪರಿಣಾಮ ಅಪಾರ ಪ್ರಮಾಣದಲ್ಲಿ ಕಬ್ಬು ಕೊಚ್ಚಿಕೊಂಡು ಹೋಗಿದೆ.

ಕೆಲ ಭಾಗದಿಂದ ಮಣ್ಣು, ಕಲ್ಲು ಹರಿದು ಬಂದು ಕೃಷಿಗೆ ತೊಂದರೆಯಾಗಿದೆ. ಅಲ್ಲದೆ, ಹೊಲದ ಬದುಗಳು ಕಿತ್ತಿ ಒಬ್ಬರ ಹೊಲದ ಮಣ್ಣು ಇನ್ನೊಬ್ಬರ ಹೊಲಕ್ಕೆ ಹರಿದು ಹೋಗಿ ರೈತರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಸಂಚಾರ ಕಡಿತ: ಶುಕ್ರವಾರ ರಾತ್ರಿ ಸುರಿದ ಮಳೆಯಿಂದ ತಾಲೂಕಿನ ಬಸವಣ್ಣ ಸಂಗೋಳಗಿ ಗ್ರಾಮದ ರೈತರೊಬ್ಬರು ಬೆಳೆದ 2 ಎಕರೆ ಕಲ್ಲಂಗಡಿ ಬೆಳೆಯಲ್ಲಿ ಒಂದು ಎಕರೆ ಬೆಳೆ ನೀರಿಗೆ ಹರಿದುಹೋಗಿದೆ. ಅಲ್ಲದೆ, ಒಂದು ಎಕರೆ ಕಬ್ಬುಕೊಚ್ಚಿ ನಷ್ಟವಾಗಿದೆ.  

ದೇಗಾಂವ, ಮುನ್ನೊಳ್ಳಿ, ಬಸವಣ್ಣ ಸಂಗೋಳಗಿ ಮುನ್ನೋಳಿ ರಸ್ತೆ ಸಂಪರ್ಕ ಒದಗಿಸುವ ಸೇತುವೆ ಮತ್ತು ರಸ್ತೆ ಕೊಚ್ಚಿಕೊಂಡು ಹೋಗಿದೆ. ಇದರಿಂದ ಪ್ರಯಾಣಿಕರು ಪರದಾಡುವಂತಾಗಿದೆ. ಹಾನಿಯಾದ ಪ್ರದೇಶಗಳಿಗೆ ತಹಶೀಲ್ದಾರ  ಬಸವರಾಜ ಎಂ. ಬೆಣ್ಣೆಶಿರೂರ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Advertisement

ಜೊತೆಯಲ್ಲಿದ್ದ ಕಂದಾಯ ನಿರೀಕ್ಷಕ ಶರಣಬಸಪ್ಪ ಹಕ್ಕಿ ಮತ್ತು ಗ್ರಾಮ ಲೇಖಪಾಲಕ ರಮೇಶ ಮಾಳಿ ಅವರನ್ನು ವ್ಯಾಪ್ತಿಯ ಹಾನಿಯ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ. 

ತುರ್ತು ಸ್ಪಂದನೆ ಇಲ್ಲ: ಮಳೆಯ ಆರ್ಭಟಕ್ಕೆ ತಾಲೂಕಿನ ಅನೇಕ ರಸ್ತೆಗಳ ಸಂಪರ್ಕ ಕಡಿತಗೊಂಡಸಂಚಾರಕ್ಕೆ ತಡೆಯಾದ ಮೇಲೂ ಸಂಬಂ ಧಿತ ಇಲಾಖೆಗಳಿಂದ ತುರ್ತು ಸ್ಪಂದನೆ ಇಲ್ಲವಾಗಿದೆ. ಹೀಗಾಗಿ ಗ್ರಾಮೀಣ ಜನರು ನಗರ ಪಟ್ಟಣಗಳಿಗೆ ಸಂಚರಿಸಲು ಸಂಪರ್ಕ ದೊರೆಯದೆ ತೀವ್ರ ಪರದಾಡುತ್ತಿದ್ದಾರೆ. 

ಮಳೆ ವಿವರ: ಜೂನ್‌ 16ರಂದು ಆಳಂದ ಮಳೆಮಾಪನ ಕೇಂದ್ರದಲ್ಲಿ 12.4 ಮಿ.ಮೀ, ಖಜೂರಿ 54.6 ಮಿ.ಮೀ, ನರೋಣಾ 60 ಮಿ.ಮೀ, ನಿಂಬರಗಾ 98 ಮಿ.ಮೀ, ಮಾದನಹಿಪ್ಪರಗಾ 13.4 ಮಿ.ಮೀ, ಸರಸಂಬಾ 2.4 ಮಿ.ಮೀ. ಕೊರಳ್ಳಿ 80 ಮಿ.ಮೀ ಮಳೆಯಾಗಿದೆ.  

Advertisement

Udayavani is now on Telegram. Click here to join our channel and stay updated with the latest news.

Next