Advertisement

ಡಿಕೆಶಿಗೆ ಆರ್‌ಎಂಎಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಕೆ

11:18 PM Sep 17, 2019 | Lakshmi GovindaRaju |

ಬೆಂಗಳೂರು: ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವ ಡಿ.ಕೆ.ಶಿವಕುಮಾರ್‌ ಅವರಿಗೆ ರಾಮ್‌ ಮನೋಹರ್‌ ಲೋಹಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ಬಿ.ಪಿ., ಶುಗರ್‌ ಹಾಗೂ ಎದೆ ನೋವಿನಿಂದ ಬಳಲುತ್ತಿರುವ ಶಿವಕುಮಾರ್‌ ಅವರಿಗೆ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Advertisement

ಅಣ್ಣನಿಗೆ ಜಾಮೀನು ಸಿಗುವ ವಿಶ್ವಾಸವಿದೆ: ಡಿ.ಕೆ.ಶಿವಕುಮಾರ್‌ ವಿರುದ್ಧ ಇ.ಡಿ ಅಧಿಕಾರಿಗಳು ಆಧಾರ ರಹಿತ ಆರೋಪ ಮಾಡಿ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಈ ಪ್ರಕರಣದಲ್ಲಿ ಬುಧವಾರ ಜಾಮೀನು ಸಿಗುವ ಭರವಸೆ ಇದೆ ಎಂದು ಸಂಸದ ಡಿ.ಕೆ.ಸುರೇಶ್‌ ಹೇಳಿದ್ದಾರೆ. ವಿಶೇಷ ಕೋರ್ಟ್‌ನಲ್ಲಿ ತಮ್ಮ ಸಹೋದರ ಡಿ.ಕೆ.ಶಿವಕುಮಾರ್‌ ಅವರ ವಿಚಾರಣೆ ಮುಂದೂಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.

ಯಾರದೋ ಆಸ್ತಿಯನ್ನು ಯಾರದೋ ಮನೆಯಲ್ಲಿ ದಾಳಿ ಮಾಡಿ, ಅದು ಡಿ.ಕೆ.ಶಿವಕುಮಾರ್‌ ಆಸ್ತಿ ಎಂದು ತೋರಿಸುತ್ತಿದ್ದಾರೆ. ಆದಾಯದ ಮೂಲ ಇಲ್ಲದೇ ಯಾರೂ ವ್ಯಾಪಾರ ಮಾಡುವುದಿಲ್ಲ. ಎಲ್ಲ ವ್ಯವಹಾರಗಳಿಗೂ ನಾವು ದಾಖಲೆಗಳನ್ನು ಸಲ್ಲಿಸಿದ್ದೇವೆ. 30 ವರ್ಷದ ರಾಜಕಾರಣದಲ್ಲಿ ಡಿ.ಕೆ.ಶಿವಕುಮಾರ್‌ ವಿರುದ್ಧ ಯಾವುದೇ ಕ್ರಿಮಿನಲ್‌ ಪ್ರಕರಣಗಳು ದಾಖಲಾಗಿಲ್ಲ. ಎಲ್ಲದಕ್ಕೂ ದಾಖಲೆ ಇದೆ. ಹೀಗಾಗಿ, ಜಾಮೀನು ಸಿಗುವ ವಿಶ್ವಾಸ ಇದೆ. ಆದರೆ, ಇ.ಡಿಯವರಿಗೆ ಒತ್ತಡ ಇರಬಹುದು ಎಂದು ಹೇಳಿದರು.

ಡಿ.ಕೆ.ಶಿವಕುಮಾರ್‌ ಪುತ್ರಿ ಐಶ್ವರ್ಯ ಎಂಜಿನಿಯರ್‌ ಪದವೀಧರೆಯಾಗಿದ್ದಾಳೆ. ಅವಳು ಬಿಜಿನೆಸ್‌ ಮಾಡಬೇಕೆಂದು ಆಸೆ ಪಟ್ಟಿದ್ದಳು. ನಾನು ಅವಳಿಗೆ 7 ಕೋಟಿ ರೂ.ಸಾಲ ಕೊಟ್ಟಿದ್ದೇನೆ. ಬೇರೆಯವರು ಸಾಲ ಕೊಟ್ಟಿದ್ದಾರೆ. ಬ್ಯಾಂಕ್‌ನವರು 40 ಕೋಟಿ ಸಾಲ ಕೊಟ್ಟಿದ್ದಾರೆ. ಅಪ್ಪನಾಗಿ ಡಿ.ಕೆ.ಶಿವಕುಮಾರ್‌ ಬೆಂಬಲ ಕೊಟ್ಟಿದ್ದಾರೆ. ಅವಳು ಒಂದೇ ಒಂದು ರೂಪಾಯಿ ಅವ್ಯವಹಾರ ನಡೆಸಿಲ್ಲ.

ನಮ್ಮ ಕುಟುಂಬದ ಎಲ್ಲ ಆಸ್ತಿಯ ದಾಖಲೆಗಳನ್ನು ಕೋರ್ಟ್‌ ಮುಂದೆ ಇಟ್ಟಿದ್ದೇವೆ. ನಮ್ಮ ಬ್ಯಾಂಕ್‌ ಅಕೌಂಟ್‌ಗಳು ಎಷ್ಟಿವೆ ಎಂದು ಕೋರ್ಟ್‌ ಮುಂದೆ ಹೇಳಿದ್ದೇವೆ. ಇ.ಡಿ ಅಧಿಕಾರಿಗಳು ಹೇಳಿದ ಮಾತ್ರಕ್ಕೆ ಎಲ್ಲವೂ ಸತ್ಯವಾಗುವು ದಿಲ್ಲ. ಡಿ.ಕೆ.ಶಿವಕುಮಾರ್‌ ಆರೋಪ ಮುಕ್ತರಾಗುತ್ತಾರೆ ಎನ್ನುವ ವಿಶ್ವಾಸ ಇದೆ ಎಂದು ಹೇಳಿದರು.

Advertisement

ಕುರ್ಚಿಯಲ್ಲಿ ಕೂಡಲು ಅವಕಾಶ ನೀಡಿದ ಜಡ್ಜ್: ಡಿ.ಕೆ.ಶಿವಕುಮಾರ್‌ ಅವರು ಆರೋಗ್ಯದ ಸಮಸ್ಯೆ ಎದುರಿಸುತ್ತಿರುವುದರಿಂದ ವಿಚಾರಣೆ ಸಂದರ್ಭದಲ್ಲಿ ನಿಂತುಕೊಳ್ಳಲು ಆಗುತ್ತಿಲ್ಲ ಎಂದು ನ್ಯಾಯಾಧೀಶರಿಗೆ ಮನವಿ ಮಾಡಿದರು. ಈ ಹಿನ್ನೆಲೆಯಲ್ಲಿ ಅಲ್ಲಿಯೇ ಕುರ್ಚಿಯಲ್ಲಿ ಕುಳಿತುಕೊಳ್ಳಲು ನ್ಯಾಯಾಧೀಶರು ಅವಕಾಶ ನೀಡಿದರು.

ದೆಹಲಿಗೆ ತೆರಳಿದ ಅಭಿಮಾನಿಗಳು: ವಿಚಾರಣೆ ಸಂದರ್ಭದಲ್ಲಿ ದೆಹಲಿಗೆ ಬರಬೇಡಿ ಎಂದು ಸಂಸದ ಡಿ.ಕೆ.ಸುರೇಶ್‌ ಮನವಿ ಮಾಡಿಕೊಂಡಿದ್ದರೂ, ಡಿ.ಕೆ.ಶಿವಕುಮಾರ್‌ ಅಭಿಮಾನಿಗಳು ದೆಹಲಿಗೆ ತೆರಳಿದ್ದರು. ವಿಚಾರಣೆ ಸಂದರ್ಭದಲ್ಲಿ ಯಾರೂ ಕೋರ್ಟ್‌ ಹಾಲ್‌ಗೆ ಬರದಂತೆ ಡಿ.ಕೆ.ಸುರೇಶ್‌ ಸೂಚನೆ ನೀಡಿದ್ದರು. ಹೀಗಾಗಿ, ಅಭಿಮಾನಿಗಳು ಕೋರ್ಟ್‌ ಮುಂದೆಯೇ ವಿಚಾರಣೆ ಮುಗಿಯುವವರೆಗೂ ಕಾಯ್ದು ನಿಂತಿದ್ದರು.

ಅಲ್ಲದೆ, ಯಾವುದೇ ರೀತಿಯ ಗಲಾಟೆ ಮಾಡುವುದಿಲ್ಲ ಎಂದು ಭರವಸೆ ನೀಡಿ, ಶಾಂತ ರೀತಿಯಿಂದ ಕಾಯ್ದರು. ಡಿ.ಕೆ.ಶಿವಕುಮಾರ್‌ ಅವರನ್ನು ವಿಚಾರಣೆಗೆ ಕೋರ್ಟ್‌ ಹಾಲ್‌ಗೆ ಕರೆದುಕೊಂಡು ಹೋಗುವಾಗ, “ಆಲ್‌ ದಿ ಬೆಸ್ಟ್‌ ಅಣ್ಣಾ, ಧೈರ್ಯವಾಗಿರಿ’ ಎಂದು ಅಭಿಮಾನಿ ವಿಶ್‌ ಮಾಡಿದ.

Advertisement

Udayavani is now on Telegram. Click here to join our channel and stay updated with the latest news.

Next