Advertisement

ಮತಕ್ಕಾಗಿ ಮುಂದುವರಿದ ಮಾತಿನ ಸಮರ

04:55 AM Apr 11, 2019 | Lakshmi GovindaRaju |

ರಾಜ್ಯದಲ್ಲಿ ಮೊದಲ ಹಂತದಲ್ಲಿ ಮತದಾನ ನಡೆಯುವ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರದ ಕಾವು ಜೋರಾಗಿದ್ದು, ವಿವಿಧ ರಾಜಕೀಯ ಪಕ್ಷಗಳ ನಾಯಕರ ಆರೋಪ-ಪ್ರತ್ಯಾರೋಪಗಳು ಜೋರಾಗಿವೆ. ಬುಧವಾರ ಹಳೆಯ ಮೈಸೂರು ಭಾಗದಲ್ಲಿ ಬಿರುಸಿನ ಪ್ರಚಾರ ಕೈಗೊಂಡ ನಾಯಕರು, ಪಕ್ಷದ ಅಭ್ಯರ್ಥಿಗಳ ಪರ ಮತಯಾಚಿಸಿದರು. ಮಂಡ್ಯದಲ್ಲಿ ಸಿಎಂ ಕುಮಾರಸ್ವಾಮಿ, ಸುಮಲತಾ, ಹಾಸನದಲ್ಲಿ ಯಡಿಯೂರಪ್ಪ, ಮೈಸೂರಿನಲ್ಲಿ ಬಿಎಸ್ಪಿ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಪ್ರಚಾರ ನಡೆಸಿದರೆ, ತುಮಕೂರಿನಲ್ಲಿ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಸಿದ್ದರಾಮಯ್ಯ ಜಂಟಿ ಪ್ರಚಾರ ಕೈಗೊಳ್ಳುವ ಮೂಲಕ ಮೈತ್ರಿ ಅಭ್ಯರ್ಥಿಗಳ ಗೆಲುವಿಗೆ ಯತ್ನ ನಡೆಸಿದರು.

Advertisement

ನಾನು ಅಂಬರೀಶ್‌ ಹೆಂಡ್ತಿ, ಮಂಡ್ಯ ಗೌಡ್ತಿ: ಸುಮಲತಾ
ಪಾಂಡವಪುರ: ಪಾಂಡವಪುರ, ಮದ್ದೂರು ಸೇರಿದಂತೆ ಮಂಡ್ಯ ಜಿಲ್ಲೆಯ ವಿವಿಧೆಡೆ ಸುಮಲತಾ ಅಂಬರೀಶ್‌ ಬಿರುಸಿನ ಪ್ರಚಾರ ನಡೆಸಿದರು. ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿಯಲ್ಲಿ ರೈತ ನಾಯಕ ದಿ.ಕೆ.ಎಸ್‌.ಪುಟ್ಟಣ್ಣಯ್ಯ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಪ್ರಚಾರ ಆರಂಭಿಸಿದ ಸುಮಲತಾ, ಬಳಿಕ, ರೋಡ್‌ ಶೋ ನಡೆಸಿದರು. ರೈತಸಂಘದ ಯುವ ನಾಯಕ ದರ್ಶನ್‌ ಪುಟ್ಟಣ್ಣಯ್ಯ, ಪಾಂಡವಪುರ ತಾಲೂಕು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಹೊನಗಾನಹಳ್ಳಿ ಎಚ್‌.ಕೃಷ್ಣೇಗೌಡ (ಕಿಟ್ಟಿ) ಸಾಥ್‌ ನೀಡಿದರು. ಸುಮಲತಾ ಪ್ರಚಾರದ ವೇಖರಿ ಹೀಗಿತ್ತು:

– ಮಂಡ್ಯದಲ್ಲಿ ನಡೆಯುತ್ತಿರುವ ಚುನಾವಣೆ ಒಂದು ಐತಿಹಾಸಿಕ ಚುನಾವಣೆ. ಪಕ್ಷೇತರ ಅಭ್ಯರ್ಥಿಯಾಗಿ ಅದರಲ್ಲೂ ಒಬ್ಬ ಹೆಣ್ಣು ಮಗಳಾಗಿ ಸಿಎಂ, ಸಚಿವರು, ಶಾಸಕರು ಸೇರಿದಂತೆ ಇಡೀ ಸರ್ಕಾರದ ವಿರೋಧ ಕಟ್ಟಿಕೊಂಡು ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದೇನೆ.

– ನಾನು ನೋವಿನಲ್ಲಿದ್ದಾಗ ನನಗೆ ಧೈರ್ಯ ತುಂಬಿ ನನ್ನ ಬೆನ್ನಿಗೆ ನಿಂತುಕೊಂಡಿರುವ ಮಂಡ್ಯ ಜಿಲ್ಲೆಯ ಜನರ ಪರವಾಗಿ ನಾನು ನಿಲ್ಲಲು ಬಂದಿದ್ದೇನೆ.

– ಅಂಬರೀಶ್‌ ಅವರ ಪಕ್ಷಾತೀತ ಹಾಗೂ ಜಾತ್ಯಾತೀತ ವ್ಯಕ್ತಿತ್ವದ ಆಧಾರದ ಮೇಲೆ ಈ ಚುಣಾವಣೆ ಎದುರಿಸುತ್ತಿದ್ದೇನೆ.

Advertisement

– ಜೆಡಿಎಸ್‌ನ ಕೆಲವರು ನಮ್ಮ ಕುಟುಂಬದ ಬಗ್ಗೆ ಆಧಾರರಹಿತ ಆರೋಪ ಮಾಡಿದ್ದಾರೆ. ಒಬ್ಬ ಮಹಿಳೆಯನ್ನು ಟಾರ್ಗೆಟ್‌ ಮಾಡಿಕೊಂಡು ವೈಯಕ್ತಿಕ ಟೀಕೆ ಮಾಡಿಕೊಂಡು ಬಂದಿದ್ದಾರೆ.

– ದೇಶ, ವಿದೇಶಗಳಲ್ಲಿ ಮನೆ ಮಾತಾಗಿರುವ ಮದ್ದೂರು ವಡೆಯಷ್ಟೇ ಖ್ಯಾತಿ ಹೊಂದಿದವರು ಅಂಬರೀಶ್‌. ನನ್ನ ಗೆಲುವಿನ ಮೂಲಕ ಅಂಬಿ ಅಭಿಮಾನ ಮೆರೆಯಿರಿ.

– ಮಂಡ್ಯದ ಗಂಡು ಅಂಬರೀಶ್‌ ಧರ್ಮಪತ್ನಿ, ಸುಮಲತಾ ಅಂಬರೀಶ್‌ ಮಂಡ್ಯದ ಗೌಡ್ತಿಯಲ್ಲದೆ, ಹೊರಗಿನವರು ಮಂಡ್ಯದ ಗೌಡ್ತಿಯಾಗಲು ಸಾಧ್ಯವೆ?.

Advertisement

Udayavani is now on Telegram. Click here to join our channel and stay updated with the latest news.

Next