ಧಾರವಾಡ: ಹೆಬ್ಬಳ್ಳಿ ಅಗಸಿಯಲ್ಲಿ ಆರಂಭಿಸಿರುವ ಆರ್.ಎಸ್. ಪ್ರಭಾಕರ್ ಮಾಲೀಕತ್ವದ ನಟರಾಜ್ ವೈನ್ಸ್ ಶಾಪ್ ಸ್ಥಳಾಂತರ ಮಾಡುವಂತೆ ಆಗ್ರಹಿಸಿ ಸ್ಥಳೀಯರು ನಗರದ ಡಿಸಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಮದ್ಯದಂಗಡಿ ಆರಂಭ ಮಾಡದಂತೆ ಸ್ಥಳೀಯರು ಆಕ್ಷೇಪ ಮಾಡಿದ್ದರೂ ಮತ್ತೆ ಅಂಗಡಿ ಆರಂಭಿಸಲಾಗಿದ್ದು, ಕೂಡಲೇ ಅಂಗಡಿ ಸ್ಥಳಾಂತರ ಮಾಡುವಂತೆ ಆಗ್ರಹಿಸಿದ ಪ್ರತಿಭಟನಾನಿರತರು ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದರು.
ಅಹವಾಲು ಸ್ವೀಕರಿಸಲು ಸ್ವಯಂ ಜಿಲ್ಲಾಧಿಕಾರಿಗಳೇ ಸ್ಥಳಕ್ಕೆ ಆಗಮಿಸುವಂತೆ ಪಟ್ಟು ಹಿಡಿದು ಕುಳಿತ ಪ್ರತಿಭಟನಾಕಾರರು, ಕೊನೆಗೆ ಕಾದು ಕಾದು ಸುಸ್ತಾಗಿ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ಅಪರ ಜಿಲ್ಲಾಧಿಕಾರಿ ಇಟ್ನಾಳ ಮಾತನಾಡಿ, ನ್ಯಾಯಾಲಯದ ಮಧ್ಯಂತರ ತಡೆಯಾಜ್ಞೆ ಇದೆ. ಹೀಗಾಗಿ ನಾವೇನೂ ಮಾಡಲು ಸಾಧ್ಯವಿಲ್ಲ. ನ್ಯಾಯಾಲಯದಲ್ಲಿ ಕಾನೂನು ಹೋರಾಟ ಮುಂದುವರಿಸಿ, ಒಂದು ವೇಳೆ ನ್ಯಾಯಾಲಯ ಸೂಚಿಸಿದರೆ ಸ್ಥಳಾಂತರ ಮಾಡಲಾಗುವುದು ಎಂದು ಭರವಸೆ ನೀಡಿದರು.
ಪಾಲಿಕೆ ಮಾಜಿ ಸದಸ್ಯರಾದ ಸರೋಜಾ ಪಾಟೀಲ, ನಿರ್ಮಲಾ ಜವಳಿ, ಶಂಕರ ಶೆಳಕೆ, ಸುರೇಶ ಪಟ್ಟಣಶೆಟ್ಟಿ, ರವಿ ಯಲಿಗಾರ, ಸಚಿನ್ ಹೆಗ್ಗೆರಿ ಮೊದಲಾದವರಿದ್ದರು.