Advertisement

ಫೆಲೋಶಿಪ್‌ಗಾಗಿ ಮುಂದುವರಿದ ಪ್ರತಿಭಟನೆ

12:59 PM Nov 18, 2021 | Team Udayavani |

ಹೊಸಪೇಟೆ: ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಸಂಶೋಧನಾ ವಿದ್ಯಾರ್ಥಿಗಳಿಗೆ ಫೆಲೋಶಿಪ್‌ (ಸಹಾಯಧನ) ನೀಡ ಬೇಕು ಒತ್ತಾಯಿಸಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಗಳು ವಿಜಯನಗರ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಅಹೋರಾತ್ರಿ ಧರಣಿ ನಡೆಸಿದರು. ಜತೆಗೆ ಈ ಧರಣಿ ಬುಧವಾರ ಕೂಡ ಮುಂದುವರೆಸಿದರು.

Advertisement

ಎಸ್‌ಸಿ, ಎಸ್‌ಟಿ ಸಂಶೋಧನಾ ವಿದ್ಯಾರ್ಥಿಗಳ ಮಾಸಿಕ ಸಹಾಯಧನ ಮತ್ತು ಸಾದಿಲ್ವಾರು ಅನುದಾನವನ್ನು ಕನ್ನಡ ವಿಶ್ವವಿದ್ಯಾಲಯ 34 ತಿಂಗಳು ಬಾಕಿ ಉಳಿಸಿಕೊಂಡಿದೆ. ಪಿಎಚ್‌ಡಿ ನಿಯಮಾಳಿಯಂತೆ ಒಬ್ಬ ಸಂಶೋಧಕ ಪ್ರವೇಶ ಪಡೆದ ದಿನಾಂಕದಿಂದ ಪ್ರತಿ ತಿಂಗಳು 10 ಸಾವಿರ ರು. ಮಾಸಿಕ ಸಹಾಯಧನ ನೀಡಬೇಕು ಎಂಬ ನಿಯಮವನ್ನು ಕಳೆದ ಎರಡು ವರ್ಷದಿಂದ ಕೈಬಿಡಲಾಗಿದೆ. ಶೈಕ್ಷಣಿಕವಾಗಿ ವಿಶ್ವವಿದ್ಯಾಲಯದ ನಿಯಮಗಳ ಪ್ರಕಾರ ಆರು ತಿಂಗಳಿಗೊಮ್ಮ ನಡೆಯುವ ಅರ್ಧವಾರ್ಷಿಕ ಪ್ರಗತಿ ಪರಿಶೀಲನಾ ವರದಿಗಳನ್ನು ಸಲ್ಲಿಸಿ ಅದರ ಜೊತೆಗೆ ಅರ್ಧವಾರ್ಷಿಕ ಪ್ರಗತಿ ವರದಿ ಶುಲ್ಕಗಳನ್ನು ಸಂದಾಯ ಮಾಡಿರುತ್ತೇವೆ. ಆದರೂ ಯಾವುದೇ ಫೆಲೋಶಿಪ್‌ ಇಲ್ಲದೇ ಗುಣಮಟ್ಟದ ಸಂಶೋಧನಾ ಚಟುವಟಿಕೆ ನಡೆಸಲು ಸಾಧ್ಯವಾಗದೇ ಸಂಶೋಧನೆಗಳಿಂದ ಹೊರಗುಳಿಯುವಂತ ಸನ್ನಿವೇಶಗಳನ್ನು ಎದುರಿಸುವಂತಾಗಿದೆ ಎಂದು ದೂರಿದರು.

ಕನ್ನಡ ವಿವಿ ಆಡಳಿತ ಮಂಡಳಿ ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳಿಗೆ ಮಾಸಿಕ 10 ಸಾವಿರ ರೂಗಳಂತೆ ಮೂರು ವರ್ಷದ ಸಹಾಯಧನ ಕೂಡಲೇ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಸಂಶೋಧನಾ ಪೂರ್ವಕವಾಗಿ ಕ್ಷೇತ್ರ ಕಾರ್ಯ, ಪುಸಕ್ತಗಳ ಖರೀದಿ, ಲೇಖನ ಪ್ರಕಟಣೆ, ಸಾರಿಗೆ ವೆಚ್ಚ, ಪೇಪರ್‌ ಖರೀದಿ, ಪ್ರಬಂಧ ಮುದ್ರಣ, ರಾಜ್ಯ ಮತ್ತು ರಾಷ್ಟ್ರೀಯ ಸಂಕಿರಣಗಳು ಸೇರಿದಂತೆ ಇನ್ನಿತರೆ ಶೈಕ್ಷಣಿಕ ಚಟುವಟಿಕೆ ಕೈಗೊಳ್ಳಲು ಹಣಕಾಸಿನ ತೊಂದರೆಯಾಗುತ್ತಿದೆ. ಹಾಗಾಗಿ ಕೂಡಲೇ ವಿವಿಯಿಂದ ಫೆಲೋಶಿಪ್‌ ಒದಗಿಸಬೇಕು ಎಂದು ಒತ್ತಾಯಿಸಿದರು.

ಸಂಶೋಧನಾ ವಿದ್ಯಾರ್ಥಿ ಮುಖಂಡರಾದ ಬಸವರಾಜ, ಮಣಿಕಂಠ, ರಾಜೇಶ್‌ ಮಧು, ನರಸಿಂಹ ರಾಜು, ರಾಗಿಣಿ, ಪಂಪಾಪತಿ ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next