ರಜೌರಿ/ಜಮ್ಮು: ಜಮ್ಮು – ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಬುಧವಾರ ಆರಂಭವಾದ ಎನ್‌ಕೌಂಟರ್ ಗುರುವಾರದ ವರೆಗೆ ಮುಂದುವರಿದಿದ್ದು, ಅಫ್ಘಾನಿಸ್ಥಾನದಲ್ಲಿ ತರಬೇತಿ ಪಡೆದಿದ್ದ ಲಷ್ಕರ್-ಎ-ತಯ್ಯಬಾ ಪ್ರಮುಖ ಉಗ್ರ, ಪಾಕ್ ನಾಗರಿಕ ಕ್ವಾರಿ ಹಾಗೂ ಆತನ ಸಹಚರನನ್ನು ಹೊಡೆದುರುಳಿಸುವಲ್ಲಿ ಭದ್ರತ ಪಡೆಗಳು ಯಶಸ್ವಿಯಾಗಿವೆ. ಇದೇ ಕಾರ್ಯಾಚರಣೆಯಲ್ಲಿ ಬುಧವಾರ ಕರ್ನಾಟಕದ ಕ್ಯಾ| ಪ್ರಾಂಜಲ್ ಸಹಿತ ಇಬ್ಬರು ಸೇನಾಧಿಕಾರಿಗಳು ಮತ್ತು ಇಬ್ಬರು ಯೋಧರು ಹುತಾತ್ಮರಾಗಿದ್ದರು.
ಧರ್ಮಸಾಲ್‌ನ ಬಾಜಿಮಾಲ್ ಪ್ರದೇಶದಲ್ಲಿ ಬುಧವಾರ ಆರಂಭವಾಗಿದ್ದ ಗುಂಡಿನ ಚಕಮಕಿ ರಾತ್ರಿ ಸ್ಥಗಿತಗೊಂಡಿತ್ತು. ಗುರುವಾರ ಸೂರ್ಯ ಉದಯಿಸುತ್ತಿದ್ದಂತೆ ಮತ್ತೆ ಕಾರ್ಯಾಚರಣೆ ಆರಂಭಗೊಂಡಿದ್ದು, ಇಬ್ಬರು ಉಗ್ರರ ಹತ್ಯೆಯಲ್ಲಿ ಪೂರ್ಣಗೊಂಡಿದೆ. ದುರದೃಷ್ಟವಶಾತ್ ಕಾರ್ಯಾಚರಣೆಯಲ್ಲಿ ಮತ್ತೂಬ್ಬ ಯೋಧ ಹುತಾತ್ಮರಾಗಿದ್ದಾರೆ.
ಗುರುವಾರ ಹತನಾದ ಉಗ್ರ ಕ್ವಾರಿ ಸುಧಾರಿತ ಸ್ಫೋಟಕ (ಐಇಡಿ)ಗಳ ತಯಾರಿಯಲ್ಲಿ ನಿಪುಣನಾಗಿದ್ದ. ಗುಹೆಗಳ ಒಳಗೆ ಅಡಗಿ, ಅಲ್ಲಿಂದಲೇ ಕಾರ್ಯಾಚರಣೆ ನಡೆಸುವ ಛಾತಿ ಹೊಂದಿದ್ದ. ಈತ ನುರಿತ ಸ್ನೆ„ಪರ್ ಕೂಡ ಹೌದು ಎಂದು ಭದ್ರತ ಪಡೆಗಳು ತಿಳಿಸಿವೆ. ಈತ ಕಒಂದು ವರ್ಷದಿಂದೀಚೆಗೆ ರಜೌರಿ-ಪೂಂಛ್ ವಲಯದಲ್ಲಿ ಸಕ್ರಿಯನಾಗಿದ್ದ. ಡಾಂಗ್ರಿ ಮತ್ತು ಕಂಡಿಯಲ್ಲಿ ನಡೆದಿದ್ದ ಅವಳಿ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಕೂಡ ಈತನೇ ಆಗಿದ್ದ. ಈ ದಾಳಿಯಲ್ಲಿ 7 ನಾಗರಿಕರು ಮೃತಪಟ್ಟಿದ್ದರು. ರಜೌರಿ-ಪೂಂಛ್ ವಲಯದಲ್ಲಿ ಭಯೋತ್ಪಾದನೆಗೆ ಮರುಜೀವ ನೀಡಲೆಂದೇ ಈತನನ್ನು ನಿಯೋಜಿಸಲಾಗಿತ್ತು.
ಮತ್ತೂಬ್ಬ ಯೋಧ ಹುತಾತ್ಮ
ಗುರುವಾರದ ಕಾರ್ಯಾಚರಣೆ ವೇಳೆ ಮತ್ತೂಬ್ಬ ಯೋಧ ಹುತಾತ್ಮರಾಗಿದ್ದು, ಈ ಎನ್‌ಕೌಂಟರ್‌ನಲ್ಲಿ ಪ್ರಾಣತೆತ್ತ ಯೋಧರ ಸಂಖ್ಯೆ 5ಕ್ಕೇರಿದೆ. ಬುಧವಾರ ವಿಶೇಷ ಪಡೆಗಳ ಇಬ್ಬರು ಕ್ಯಾಪ್ಟನ್‌ಗಳ ಸಹಿತ ನಾಲ್ವರು ವೀರರು ಕೊನೆಯುಸಿರೆಳೆದಿದ್ದರು. ಹುತಾತ್ಮರನ್ನು ಕ್ಯಾ| ಎಂ.ವಿ. ಪ್ರಾಂಜಲ್, ಕ್ಯಾ| ಶುಭಂ ಗುಪ್ತಾ, ಹವಾಲ್ದಾರ್ ಅಬ್ದುಲ್ ಮಜೀದ್, ಲ್ಯಾನ್ಸ್ ನಾಯ್ಕ ಸಂಜಯ್ ಬಿಷ್ಟ್ ಮತ್ತು ಪ್ಯಾರಾಟ್ರೂಪರ್ ಸಚಿನ್ ಲೌರ್ ಎಂದು ಗುರುತಿಸಲಾಗಿದೆ.
ನಾವಿಬ್ಬರೂ ಆತ್ಮೀಯ ಸ್ನೇಹಿತರು. ಮೂರನೇ ತರಗತಿಯಲ್ಲಿದ್ದಾಗ ನಮ್ಮಿಬ್ಬರ ಸ್ನೇಹ ಕುದುರಿತ್ತು. ತನ್ನ ಕೋಣೆಯ ಗೋಡೆಗಳಲ್ಲಿ ಲಘು ಯುದ್ಧ ವಿಮಾನ, ಭಾರತೀಯ ವಾಯುಪಡೆಯ ಸ್ಫೂರ್ತಿದಾಯಕ ಫೋಟೊಗಳನ್ನು ಅಂಟಿಸಿರುತ್ತಿದ್ದ.
ಆದಿತ್ಯ ಸಾಯಿ ಶ್ರೀನಿವಾಸ್, ಕ್ಯಾ| ಪ್ರಾಂಜಲ್‌ರ ಸ್ನೇಹಿತ