Advertisement

ಸಚಿವ ಸ್ಥಾನಕ್ಕಾಗಿ ಮುಂದುವರಿದ ಲಾಬಿ

10:46 PM Jan 04, 2020 | Lakshmi GovindaRaj |

ಬೆಂಗಳೂರು: ಸಚಿವ ಸ್ಥಾನಕ್ಕಾಗಿ ಶಾಸಕರು, ಮಾಜಿ ಸಚಿವರಿಂದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಭೇಟಿ ನಿರಂತರವಾಗಿ ನಡೆಯುತ್ತಲೇ ಇದೆ. ಶನಿವಾರ ಮಾಜಿ ಸಚಿವರಾದ ಎಚ್‌.ವಿಶ್ವನಾಥ್‌ ಹಾಗೂ ಎಂಟಿಬಿ ನಾಗರಾಜ್‌ ಅವರು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ಸಚಿವ ಸ್ಥಾನದ ವಿಚಾರವಾಗಿ ಚರ್ಚೆ ನಡೆಸಿದ್ದಾರೆ.

Advertisement

ಮುಖ್ಯಮಂತ್ರಿಗಳ ನಿವಾಸಕ್ಕೆ ಭೇಟಿ ನೀಡಿದ ಎಚ್‌.ವಿಶ್ವನಾಥ್‌ ಹಾಗೂ ಎಂಟಿಬಿ ನಾಗರಾಜ್‌ ಅವರು ಕೆಲಕಾಲ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಿ, ಮುಂದೆ ನಡೆಯಲಿರುವ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ತಮಗೂ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್‌ ಮತ್ತು ಜೆಡಿಎಸ್‌ಗೆ ರಾಜೀನಾಮೆ ನೀಡಿ, ಬಿಜೆಪಿಯಿಂದ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಜಯ ಸಾಧಿಸಿದ ಎಲ್ಲ ಶಾಸಕರಿಗೂ ಸಚಿವ ಸ್ಥಾನ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಈಗಾಗಲೇ ಭರವಸೆ ನೀಡಿದ್ದಾರೆ. ಆದರೆ, ಚುನಾವಣೆಯಲ್ಲಿ ಸೋತಿರುವ ವಿಶ್ವನಾಥ್‌ ಹಾಗೂ ಎಂಟಿಬಿ ನಾಗರಾಜ್‌ ಅವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಯಾವುದೇ ಖಚಿತತೆ ಬಿಜೆಪಿ ವಲಯದಿಂದ ಸಿಕ್ಕಿಲ್ಲ. ಹೀಗಾಗಿ, ಸಚಿವ ಸ್ಥಾನ ಪಡೆಯುವುದಕ್ಕಾಗಿ ನಿರಂತರ ಮಾತುಕತೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಶಾಸಕರಿಗೆ ಎಚ್ಚರಿಕೆ: ಉಪಮುಖ್ಯಮಂತ್ರಿ ಹುದ್ದೆ ವಿಚಾರವಾಗಿ ಬಹಿರಂಗವಾಗಿ ಯಾವುದೇ ರೀತಿಯ ಹೇಳಿಕೆ ನೀಡಬಾರದು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ತಮ್ಮ ಆಪ್ತ ವಲಯದ ಶಾಸಕರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಶಾಸಕ ರೇಣುಕಾಚಾರ್ಯ ಸೇರಿ ಹಲವರು ಈಗಾಗಲೇ ಉಪಮುಖ್ಯಮಂತ್ರಿ ವಿಚಾರವಾಗಿ ಹಲವು ರೀತಿಯ ಗೊಂದಲದ ಹೇಳಿಕೆ ನೀಡಿದ್ದರು.

ಸರ್ಕಾರದಲ್ಲಿ ಈಗಾಗಲೇ ಮೂವರು ಉಪಮುಖ್ಯಮಂತ್ರಿಗಳಿದ್ದಾರೆ. ಸಚಿವ ಸಂಪುಟ ವಿಸ್ತರಣೆ ವೇಳೆ ಉಪಮುಖ್ಯಮಂತ್ರಿ ಹುದ್ದೆಯ ಚರ್ಚೆಯೂ ನಡೆಯುತ್ತಿರುವುದರಿಂದ ಈ ಬಗ್ಗೆ ಯಾವುದೇ ರೀತಿಯ ಬಹಿರಂಗ ಹೇಳಿಕೆ ನೀಡದಂತೆ ಶಾಸಕರಿಗೆ ಮುಖ್ಯಮಂತ್ರಿಗಳು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ.

Advertisement

ಉಪಮುಖ್ಯಮಂತ್ರಿ ಸ್ಥಾನಕ್ಕೂ ಪೈಪೋಟಿ
ಬೆಂಗಳೂರು: ಸಚಿವ ಸ್ಥಾನಕ್ಕೆ ಬಿಜೆಪಿಯಲ್ಲಿ ಲಾಬಿ ನಡೆಯುತ್ತಿರುವ ಬೆನ್ನಲ್ಲೆ ಉಪಮುಖ್ಯಮಂತ್ರಿ ಸ್ಥಾನಕ್ಕೂ ಬೇಡಿಕೆ ಹೆಚ್ಚುತ್ತಿದೆ. ಈಗಾಗಲೇ ಬಿಜೆಪಿ ಸರ್ಕಾರದಲ್ಲಿ ಗೋವಿಂದ ಕಾರಜೋಳ, ಡಾ.ಸಿ.ಎನ್‌.ಅಶ್ವತ್ಥನಾರಾಯಣ ಹಾಗೂ ಲಕ್ಷ್ಮಣ ಸವದಿಯವರು ಉಪಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸದ್ಯದಲ್ಲೇ ಸಚಿವ ಸಂಪುಟ ವಿಸ್ತರಣೆ ಇರುವುದರಿಂದ ಉಪಚುನಾವಣೆಯಲ್ಲಿ ಗೆದ್ದ ಹೊಸ ಶಾಸಕರಿಗೆ ಸಚಿವ ಸ್ಥಾನ ದೊರೆಯುವ ಸಾಧ್ಯತೆ ಇದೆ. ಇವರಲ್ಲಿ ಒಬ್ಬರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂಬ ಬೇಡಿಕೆಯೂ ದಿನೇದಿನೇ ಹೆಚ್ಚುತ್ತಿದೆ.

ಹಾಗೆಯೇ, ಮೂಲ ಬಿಜೆಪಿಗರಲ್ಲಿ ಒಬ್ಬರಾದ ಆರೋಗ್ಯ ಸಚಿವ ಶ್ರೀರಾಮುಲು ಕೂಡ ಉಪಮುಖ್ಯಮಂತ್ರಿ ಸ್ಥಾನಕ್ಕೆ ಲಾಬಿ ನಡೆಸುತ್ತಿದ್ದಾರೆ. ಡಿಸಿಎಂ ಸ್ಥಾನಕ್ಕಾಗಿ ಮುಖ್ಯಮಂತ್ರಿಗಳ ಜತೆ ಮಾತುಕತೆ ಮಾಡಿದ್ದು ಮಾತ್ರವಲ್ಲದೆ, ಕೇಂದ್ರ ನಾಯಕರೊಂದಿಗೆ ಮಾತುಕತೆ ನಡೆಸಲು ದೆಹಲಿಗೆ ಹೋಗಿದ್ದಾರೆ. ಹೈಕಮಾಂಡ್‌ ಒಪ್ಪಿಗೆ ನೀಡಿದರೆ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಬಹುದು ಎಂಬ ಉದ್ದೇಶದಿಂದ ಕೇಂದ್ರದ ನಾಯಕರಲ್ಲಿ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಕಪಾಲ ಬೆಟ್ಟಕ್ಕೆ ಮುಂದಿನವಾರ ನಿಯೋಗ: ರಾಮನಗರದ ಕಪಾಲ ಬೆಟ್ಟದ ಪರಿಸ್ಥಿತಿ ಪರಿಶೀಲನೆಗೆ ಭಾನುವಾರ ಬಿಜೆಪಿ ನಿಯೋಗ ಭೇಟಿ ನೀಡಬೇಕಿತ್ತು. ಆದರೆ, ಪೌರತ್ವ ತಿದ್ದುಪಡಿ ಕಾಯ್ದೆ ಕುರಿತಾದ ಜನಜಾಗೃತಿ ಅಭಿಯಾನ ಆರಂಭವೂ ಭಾನುವಾರವೇ ಆಗಿರುವುದರಿಂದ ನಿಯೋಗದ ಭೇಟಿಯ ಕಾರ್ಯ ಕ್ರಮ ಮುಂದೂಡಿದೆ. ಅಲ್ಲದೆ, ಬಿಜೆಪಿ ರಾಜ್ಯಾಧ್ಯಕ್ಷರು ಕಪಾಲ ಬೆಟ್ಟದ ಪರಿಸ್ಥಿತಿ ಪರಿಶೀಲನೆಗೆ ಪ್ರತ್ಯೇಕ ಸಮಿತಿ ರಚನೆ ಮಾಡಲು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಇದಕ್ಕಾಗಿ ಪ್ರತ್ಯೇಕ ಸಮಿತಿ ಮಾಡಿ, ನಂತರ ಪರಿಶೀಲನೆ ನಡೆಸುವ ಸಾಧ್ಯತೆ ಇದೆ. ಈ ಕುರಿತು ಮಾಹಿತಿ ನೀಡಿದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌, ಭಾನುವಾರ ಮನೆ-ಮನೆ ಅಭಿಯಾನ ಕಾರ್ಯ ಇರುವುದರಿಂದ ಬಿಜೆಪಿ ನಿಯೋಗ ಕಪಾಲ ಬೆಟ್ಟಕ್ಕೆ ಹೋಗುವುದಿಲ್ಲ. ಇದಕ್ಕಾಗಿ ಸಮಿತಿಯೊಂದನ್ನು ರಚಿಸಿ ಅತಿ ಶೀಘ್ರದಲ್ಲಿ ಭೇಟಿ ನೀಡಿ, ಪರಿಶೀಲನೆ ನಡೆಸಲಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next