ಕುಷ್ಟಗಿ: ಟೋಲ್ಗೇಟ್ ಸಿಬ್ಬಂದಿ ವಜಾ ಖಂಡಿಸಿ ನಡೆಯುತ್ತಿರುವ ನೌಕರರ ಮುಷ್ಕರ 5ನೇ ದಿನಕ್ಕೆ ಮುಂದುವರೆದಿದ್ದು, ಜಿಲ್ಲಾಧಿಕಾರಿಗಳ ಅಂಗಳ ತಲುಪಿದ್ದು, ನ್ಯಾಯದ ನಿರೀಕ್ಷೆಯಲ್ಲಿ ಈ ನೌಕರರು ಧರಣಿ ಮುಂದುವರೆಸಿದ್ದಾರೆ.
ಕಳೆದ ಜೂ. 21ರಂದು ಆರಂಭಗೊಂಡಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಜೂ. 24ರಂದು ತೀವ್ರ ಸ್ವರೂಪ ಪಡೆದ ಹಿನ್ನೆಲೆಯಲ್ಲಿ ಹೆದ್ದಾರಿ ಟೋಲ್ ಶುಲ್ಕ ರಹಿತ ಸಂಚಾರಕ್ಕೆ ಅವಕಾಶ ಕಲ್ಪಿಸಿ ಪ್ರತಿಭಟಿಸಲಾಗಿತ್ತು. ಘಿ
ಈ ಪ್ರತಿಭಟನೆ ಶುಕ್ರವಾರವೂ ಮುಂದುವರೆದಿದ್ದು ಸದರಿ ಪ್ರತಿಭಟನೆ ಸ್ಥಳಕ್ಕೆ ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್ ಆಗಮಿಸಿ ಬೆಂಬಲಿಸಿದರು. ಈ ಸಂದರ್ಭದಲ್ಲಿ ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ ಬಯ್ನಾಪುರ, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ಜಿಪಂ ಸದಸ್ಯರಾದ ಕೆ.ಮಹೇಶ, ವಿಜಯ ನಾಯಕ ಹಾಜರಿದ್ದರು.
ನಿನ್ನೆಯ ವಣಗೇರಿ ಟೋಲ್ ಪ್ಲಾಜಾ ಪ್ರತಿಭಟನೆಯಲ್ಲಿ ವಾಹನಗಳಿಗೆ ಟೋಲ್ ಶುಲ್ಕ ರಹಿತ ಸಂಚಾರ ಕಲ್ಪಿಸಿತ್ತು. ಆದರೆ ಓಎಸ್‌ಇ ಕಂಪನಿ ವಣಗೇರಿ ಟೋಲ್ ಪ್ಲಾಜಾದ ಯಂತ್ರ ದುರಸ್ತಿ ಕಾರಣ ನೀಡಿ, ಇದೇ ಹೆದ್ದಾರಿಯ ಕೊಪ್ಪಳ ತಾಲೂಕಿನ ಹಿಟ್ನಾಳ ಟೋಲ್ಗೇಟ್ ನಲ್ಲಿ ಟೋಲ್ ಶುಲ್ಕ ವಸೂಲಿಗೆ ಮುಂದಾಗಿರುವ ವಿಷಯ ತಿಳಿಯುತ್ತಿದ್ದಂತೆ ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ ಬಯ್ನಾಪುರ, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ದೌಡಾಯಿಸಿ ಹಿಟ್ನಾಳ ಹಾಗೂ ಶಹಾಪುರ ಟೋಲ್ ಮುಚ್ಚಿಸಿ, ವಣಗೇರಿ ಟೋಲ್ ಪ್ಲಾಜಾದಂತೆ ಟೋಲ್ ಶುಲ್ಕ ರಹಿತ ಸಂಚಾರ ಕಲ್ಪಿಸಿ ಅಲ್ಲಿಯೇ ಧರಣಿ ನಡೆಸಿದರು.
ಇತ್ತ ಬೆಳಗ್ಗೆ ಜಿಲ್ಲಾಧಿಕಾರಿಗಳ ನೇತೃತ್ವದ ಸಭೆಗೆ ಓಎಸ್‌ಇ ಕಂಪನಿಯ ಅಕಾರಿಗಳು ಗೈರಾಗಿರುವುದು, ಸದರಿ ಕಂಪನಿ ವಿಚಾರದಲ್ಲಿ ಜಿಲ್ಲಾಧಿಕಾರಿಗಳ ಮೃಧು ಧೋರಣೆಗೆ ಸಾರ್ವಜನಿಕರ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಜಿಲ್ಲಾಧಿಕಾರಿಗಳು ಈ ನೌಕರರ ಪುನರ್ ನಿಯುಕ್ತಿಗೆ ಕ್ರಮ ಕೈಗೊಳ್ಳದೇ ಇದ್ದರೆ ಹೋರಾಟ ತೀವ್ರಗೊಳಿಸುವುದಾಗಿ ರಾಷ್ಟ್ರೀಯ ಮಾನವ ಹಕ್ಕು ಸಂಘಟನೆಯ ಮುರ್ತುಜಾ ಪೇಂಟರ್ ಒತ್ತಾಯಿಸಿದರು.