ಚಾಮರಾಜನಗರ: ಕೋವಿಡ್ ಭತ್ಯೆಯನ್ನು ಕೂಡಲೇ ಪಾವತಿಸಬೇಕು ಹಾಗೂ ಇಂಟರ್ನಿಗಳಿಗೆ ಸಮಯಕ್ಕೆ ಸರಿಯಾಗಿ ಸ್ಟೈಫಂಡ್ ನೀಡಬೇಕೆಂದು ಆಗ್ರಹಿಸಿ ನಗರದ ಸರ್ಕಾರಿ ವೈದ್ಯಕೀಯ ಕಾಲೇಜಿನ (ಸಿಮ್ಸ್) ಕಿರಿಯ ವೈದ್ಯರು ಅನಿದಿ ಮುಷ್ಕರವನ್ನು ಮುಂದುವರಿಸಿದ್ದು, ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. ನಗರದ ಭುವನೇಶ್ವರಿ ವೃತ್ತದ ಬಳಿ ಜಮಾಯಿಸಿದ ವೈದ್ಯರು ಅಲ್ಲಿಂದ ಜಿಲ್ಲಾ ಸ್ಪತ್ರೆಗೆ ತೆರಳಿ ಕೆಲಕಾಲ ಪ್ರತಿಭಟಿಸಿದರು.
ಬಳಿಕ ಮೆರವಣಿಗೆಯಲ್ಲಿ ಬಿ.ರಾಚಯ್ಯ ಜೋಡಿರಸ್ತೆ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಹೆಚ್ಚುವರಿ ಜಿಲ್ಲಾಧಿಕಾರಿ ಕಾತ್ಯಾಯಿನಿದೇವಿ ಅವರಿಗೆ ಮನವಿ ಸಲ್ಲಿಸಿದರು. ಬಳಿಕ ನೂತನ ಆಸ್ಪತ್ರೆಗೆ ತೆರಳಿ ಪ್ರತಿಭಟನೆಯನ್ನು ಮುಂದುವರಿಸಿದರು. ನಗರದ ವೈದ್ಯಕೀಯ ಕಾಲೇಜಿನಲ್ಲಿ 136 ಮಂದಿ ಕಿರಿಯ ವೈದ್ಯರಿದ್ದು, ತುರ್ತು ಚಿಕಿತ್ಸಾ ವಿಭಾಗದವರನ್ನು ಹೊರತುಪಡಿಸಿ ಉಳಿದ ವೈದ್ಯರು ಕರ್ತವ್ಯದಿಂದ ದೂರ ಉಳಿದು ಪ್ರತಿಭಟಿಸಿದರು.
ಇದನ್ನೂ ಓದಿ:- ಸೌಲಭ್ಯ ಕಲ್ಪಿಸಲು ತಾಪಂ ಇಒಗೆ ಮನವಿ
ರಾಜ್ಯ ಸರ್ಕಾರವು ಎಲ್ಲ ನಿವಾಸಿ ವೈದ್ಯರಿಗೆ ಮತ್ತು ಇಂಟರ್ನಿ ವೈದ್ಯರಿಗೆ ಏಪ್ರಿಲ್‌ನಿಂದ ಮಾಸಿಕ 10 ಸಾವಿರ ರೂ. ಕೋವಿಡ್ ಭತ್ಯೆಯನ್ನು ಘೋಷಿಸಿತು. ಆದರೆ, ತಿಂಗಳೂ ಕಳೆದರೂ ಇನ್ನೂ ಹಣ ಬಿಡುಗಡೆ ಮಾಡಿಲ್ಲ. ನಮ್ಮ ಬೇಡಿಕೆ ಈಡೇರುವ ತನಕ ರಾಜ್ಯಾದ್ಯಂತ ಅನಿಧಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದು ಕಿರಿಯ ವೈದ್ಯರು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಸಿಮ್ಸ್ ಕಿರಿಯ ವೈದ್ಯರ ಸಂಘದ ಅಧ್ಯಕ್ಷ ಡಾ.ಧೀಮಂತ್, ಉಪಾಧ್ಯಕ್ಷೆ ಡಾ.ಸಹನಾ, ಪದಾಧಿಕಾರಿಗಳಾದ ಡಾ.ಮೋಹನ್, ಡಾ.ತೇಜಸ್ವಿ ಅರುಣ್, ಡಾ.ಗಣೇಶ್, ಡಾ.ಆಸ್ತಾ, ಡಾ.ಹರ್ಷಿತಾ ಇತರರಿದ್ದರು.