Advertisement

ಹೆಣ್ಣುಮಕ್ಕಳಿಗೆ ಆತ್ಮರಕ್ಷಣೆಗೆ ಅಲ್ಪಾವಧಿ ಕೋರ್ಸುಗಳ ಪ್ರಾರಂಭಕ್ಕೆ ಚಿಂತನೆ: ಸಿಎಂ ಬೊಮ್ಮಾಯಿ

12:29 PM Dec 23, 2022 | Team Udayavani |

ಬೆಳಗಾವಿ: ಮುಂದಿನ ಶೈಕ್ಷಣಿಕ ವರ್ಷದಿಂದ ಯೋಗದೊಂದಿಗೆ ಹೆಣ್ಣುಮಕ್ಕಳಿಗೆ ಆತ್ಮರಕ್ಷಣೆಗೆ ಅಲ್ಪಾವಧಿ ಕೋರ್ಸುಗಳ ಪ್ರಾರಂಭಕ್ಕೆ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

Advertisement

ಅವರು ಇಂದು ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಓಬವ್ವ ಆತ್ಮರಕ್ಷಣಾ ಕಲೆ ಕರಾಟೆ ಪ್ರದರ್ಶನ ವೀಕ್ಷಿಸಿ ಮಾತನಾಡಿದರು.

ಎಲ್ಲಾ ಶಿಕ್ಷಣ ಸಂಸ್ಥೆಗಳು ಅಲ್ಪಾವಧಿ ಕೋರ್ಸುಗಳನ್ನು ಕಲಿಸುವ ಅವಶ್ಯಕತೆ ಇದೆ.  ಮುಂದಿನ ಶೈಕ್ಷಣಿಕ ವರ್ಷದಿಂದ ಯೋಗದೊಂದಿಗೆ ಹೆಣ್ಣುಮಕ್ಕಳಿಗೆ ಆತ್ಮರಕ್ಷಣೆಗೆ ಅಲ್ಪಾವಧಿ ಕೋರ್ಸುಗಳನ್ನು ಕೂಡ ಪಿಯುಸಿ ಹಂತದಿಂತ ತರಬೇತಿ ನೀಡುವುದು ಸೂಕ್ತ. ಅದರ ಬಗ್ಗೆ ಒಂದು ನಿರ್ಧಾರಕ್ಕೆ ಬರಲಾಗುವುದು ಎಂದರು.

ಆತ್ಮರಕ್ಷಣೆ ಪ್ರತಿ ನಾಗರಿಕನಿಗೆ ಅಗತ್ಯ. ನಾನು ಗೃಹ ಸಚಿವನಿದ್ದ ಸಂದರ್ಭದಲ್ಲಿ ಕೆಲವು ನಿರ್ಧಾರಗಳನ್ನು ತೆಗೆದುಕೊಂಡಿದ್ದು, ಆತ್ಮರಕ್ಷಣೆಗಾಗಿ ಕರಾಟೆ ತರಬೇತಿಯನ್ನು ಹೆಣ್ಣುಮಕ್ಕಳಿಗೆ ನೀಡಬೇಕೆಂದು ತೀರ್ಮಾನಿಸಲಾಗಿತ್ತು. ವಸತಿ ಶಿಕ್ಷಣ ಸಂಸ್ಥೆ ಇದನ್ನು ಅಳವಡಿಸಿಕೊಂಡು ದೊಡ್ಡ ಪ್ರಮಾಣದಲ್ಲಿ ಕಳೆದ ಒಂದು ವರ್ಷದಲ್ಲಿ ತರಬೇತಿ ನೀಡಿರುವುದು ಶ್ಲಾಘನೀಯ ಎಂದರು.

ಆತ್ಮರಕ್ಷಣಾ ಕಲೆ ಕಲಿತವರು ಇತರ ಹೆಣ್ಣುಮಕ್ಕಳಿಗೆ ಈ ತರಬೇತಿ ನೀಡಬೇಕು. ಗ್ರಾಮೀಣ ಮಹಿಳೆಯರು, ದುಡಿಯುವ ಮಹಿಳೆಯರು, ಶಾಲಾ ಕಾಲೇಜುಗಳ ವಿದ್ಯಾರ್ಥಿನಿಯರು, ಸಹೋದರಿ ಯರಿಗೆ ಈ ವಿದ್ಯೆ ಕಲಿಸಿದರೆ, ದೊಡ್ಡ ಪ್ರಮಾಣದಲ್ಲಿ ಇದನ್ನು ವಿಸ್ತರಿಸಬಹುದು. ಹೆಣ್ಣುಮಕ್ಕಳಿಗೆ ಆತ್ಮರಕ್ಷಣೆ ಕಲೆ ತಿಳಿದಿದ್ದರೆ, ಹೆಣ್ಣು ಮಕ್ಕಳಿಗೆ ಹಾಗೂ ಸಮಾಜಕ್ಕೂ ಸುರಕ್ಷತೆ ನೀಡುತ್ತದೆ. ಸುರಕ್ಷಿತ ಸಮಾಜ ನಿರ್ಮಾಣವಾಗಲು ಇದು ಅಗತ್ಯ. ಸರ್ಕಾರ ಈ ಕಾರ್ಯಕ್ರಮ ವಿಸ್ತರಿಸಿ ಹೆಣ್ಣುಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಿದೆ. ನಿರ್ಭಯ ಯೋಜನೆಯನ್ನು 700 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೊಳ್ಳಲಾಗಿದೆ. ಇದನ್ನು ಎಲ್ಲಾ ನಗರಗಳಲ್ಲಿ ವಿಸ್ತರಣೆ ಮಾಡಲು ತೀರ್ಮಾನಿಸಲಾಗಿದೆ.ಈ ನಿಟ್ಟಿನಲ್ಲಿ ಎಲ್ಲಾ  ಕ್ರಮ ಕೈಗೊಳ್ಳಲಾಗುವುದು ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next