Advertisement

ಡಜನ್‌ ಶಾಸಕರಿಗೆ ಟಿಕೆಟಿಲ್ಲ? ಟಿಕೆಟ್‌ ಹಂಚಿಕೆ ಬಗ್ಗೆ ಶಾ ನಿವಾಸದಲ್ಲಿ ಸಮಾಲೋಚನೆ

11:42 PM Mar 14, 2023 | Team Udayavani |

ಬೆಂಗಳೂರು : ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಯಲ್ಲಿ ಒಂದು ಡಜನ್‌ ಮಂದಿ ಶಾಸಕರಿಗೆ ಟಿಕೆಟ್‌ ಕೈ ತಪ್ಪುವ ಸಾಧ್ಯತೆಗಳ ಬಗ್ಗೆ ವರಿಷ್ಠರ ಪಡಸಾಲೆಯಲ್ಲಿ ಗಂಭೀರ ಚರ್ಚೆ ನಡೆದಿದೆ.

Advertisement

ಕೇಂದ್ರ ಗೃಹ ಸಚಿವ ಅಮಿತ್‌ ಶಾ ನೇತೃತ್ವದಲ್ಲಿ ರಾಜ್ಯದಲ್ಲಿ ಟಿಕೆಟ್‌ ಹಂಚಿಕೆ ಕುರಿತು ಈಚೆಗೆ ಮೊದಲ ಹಂತದ ಸಭೆಯೊಂದು ನಡೆದಿದ್ದು, ಇಲ್ಲಿ ಶಾಸಕರ ಕಾರ್ಯನಿರ್ವಹಣೆ ಕುರಿತು ಗಂಭೀರ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ರಾಜ್ಯ ಸರ್ಕಾರದ ವಿರುದ್ಧ ಇರುವ ಆಡಳಿತ ವಿರೋಧಿ ಅಲೆ ಹಾಗೂ ಕ್ಷೇತ್ರವಾರು ಶಾಸಕರ ಬಗ್ಗೆ ಇರುವ ಪ್ರತಿಕೂಲ ಅಭಿಪ್ರಾಯಗಳ ಸಭೆಯಲ್ಲಿ ಸ್ಥೂಲವಾಗಿ ಚರ್ಚೆ ನಡೆಸಲಾಗಿದೆ. ಈ ಹಿನ್ನೆಲೆಯಲ್ಲಿ ಒಂದು ಡಜನ್‌ ಮಂದಿಗೆ ಟಿಕೆಟ್‌ ಕೈತಪ್ಪಿದರೂ ಅಚ್ಚರಿ ಇಲ್ಲ ಎಂದು ಹೇಳಲಾಗುತ್ತಿದೆ. ಹಿಂದುತ್ವದ ಭದ್ರಕೋಟೆಯಾದ ಕರಾವಳಿ ಜಿಲ್ಲೆಗಳಲ್ಲೂ ಕೆಲವರಿಗೆ ಟಿಕೆಟ್‌ ಕೈ ತಪ್ಪುವ ಸಾಧ್ಯತೆ ಎದುರಾಗಿದೆ. ಈ ಅಂಶ ರಾಜ್ಯ ಬಿಜೆಪಿ ಘಟಕದಲ್ಲಿ ಸಂಚಲನ ಮೂಡಿಸಿದೆ. ಈ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌, ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಸೇರಿದಂತೆ ಆಯ್ದ ಕೆಲವೇ ವ್ಯಕ್ತಿಗಳು ಮಾತ್ರ ಭಾಗಿಯಾಗಿದ್ದರು.ಈ ಸಭೆಯಲ್ಲಿ ಪಕ್ಷದ ಇತ್ತೀಚಿನ ವಿದ್ಯಮಾನಗಳು ಹಾಗೂ ಸಮೀಕ್ಷಾ ವರದಿಗಳನ್ನು ಆಧರಿಸಿ ಚರ್ಚೆ ನಡೆದಿದೆ ಎಂದು ತಿಳಿದು ಬಂದಿದೆ. ಇದು ಟಿಕೆಟ್‌ ಹಂಚಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ವರಿಷ್ಠರ ಹಂತದಲ್ಲಿ ನಡೆದ ಮೊದಲ ಸಭೆಯಾಗಿತ್ತು. ಹೀಗಾಗಿ ಈ ಸಭೆಯಲ್ಲಿ ನಡೆದ ಚರ್ಚೆಗಳ ಬಗ್ಗೆ ಪಕ್ಷದ ವಲಯದಲ್ಲಿ ಭಾರಿ ಕುತೂಹಲ ಸೃಷ್ಟಿಯಾಗಿದೆ.

ರಾಜ್ಯದಲ್ಲೂ ಗುಜರಾತ್‌ ಮಾದರಿಯಲ್ಲಿ ಒಂದಿಷ್ಟು ಜನರಿಗೆ ಟಿಕೆಟ್‌ ನಿರಾಕರಿಸಲಾಗುತ್ತದೆ ಎಂಬ ವಿಚಾರ ಐದಾರು ತಿಂಗಳಿಂದ ಚರ್ಚೆಯಾಗುತ್ತಿದೆ. ಹಾಲಿ ಶಾಸಕರೆಲ್ಲರಿಗೂ ಟಿಕೆಟ್‌ ನೀಡಲು ಸಾಧ್ಯವಿಲ್ಲ ಎಂದು ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ, ಸಿಎಂ ಬಸವರಾಜ ಬೊಮ್ಮಾಯಿ ಕೆಲವು ದಿನಗಳ ಹಿಂದೆ ಹೇಳಿದ್ದುಂಟು.

ಪ್ರತಿ ತಿಂಗಳೂ ವರದಿ:
ಬಿಜೆಪಿ ಮೂಲಗಳ ಪ್ರಕಾರ ಪ್ರತಿ ತಿಂಗಳೂ ಅಮಿತ್‌ ಶಾ ರಾಜ್ಯದ ಬೆಳವಣಿಗೆಗೆ ಸಂಬಂಧಪಟ್ಟಂತೆ ವರದಿ ತರಿಸಿಕೊಳ್ಳುತ್ತಿದ್ದಾರೆ. ಎಲ್ಲ ವಿಧಾನಸಭಾ ಕ್ಷೇತ್ರದ ಬಗ್ಗೆಯೂ ಅವರು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಇದರ ಆಧಾರದ ಮೇಲೆ ಶಾಸಕರಿಗೆ ವಿರೋಧಿ ಅಲೆ ಇರುವುದು ದೃಢಪಟ್ಟಿದೆ. ಜತೆಗೆ ವಿಭಾಗೀಯ ಪ್ರಮುಖರಿಂದ ಪ್ರತ್ಯೇಕ ವರದಿ ಸಂಗ್ರಹಕ್ಕೂ ಪಕ್ಷ ಸೂಚನೆ ನೀಡಿದೆ ಎಂದು ತಿಳಿದು ಬಂದಿದೆ.

Advertisement

ಮೂರು ಹಂತದಲ್ಲಿ ಟಿಕೆಟ್‌
ಈ ಬಾರಿಯೂ ಬಿಜೆಪಿ ಒಂದೇ ಹಂತದಲ್ಲಿ ಟಿಕೆಟ್‌ ಹಂಚಿಕೆ ಮಾಡುವ ಸಾಧ್ಯತೆ ಕಡಿಮೆ ಇದೆ. ಕ್ಷೇತ್ರಗಳನ್ನು ಎ,ಬಿ,ಸಿ ಎಂದು ಮೂರು ರೀತಿಯಲ್ಲಿ ವರ್ಗೀಕರಿಸಿ ಅದರ ಆಧಾರದ ಮೇಲೆ ಸಂಸದೀಯ ಮಂಡಳಿ ಸಭೆಯಲ್ಲಿ ಹೆಸರು ಅಂತಿಮಗೊಂಡ ನಂತರವೇ ಬಿಡುಗಡೆಯಾಗಲಿದೆ.

ನಾನು ಬಿಜೆಪಿ ಬಿಡಲ್ಲ: ಸೋಮಣ್ಣ
“ನಾನು ಬಿಜೆಪಿ ಬಿಡುವುದಿಲ್ಲ. ಬಿಜೆಪಿಯಲ್ಲೇ ಇರುತ್ತೇನೆ. ಬಿಜೆಪಿಯಲ್ಲಿ ನನಗೆ ಸಮಾಧಾನವಿದೆ. ಬಿಜೆಪಿಯ ಯಾವ ನಾಯಕರು ನನ್ನ ಗೌರವಕ್ಕೆ ಧಕ್ಕೆ ತಂದಿಲ್ಲ ‘ ಎಂದು ವಸತಿ ಸಚಿವ ವಿ. ಸೋಮಣ್ಣ ಭಾವುಕ ಮಾತುಗಳೊಂದಿಗೆ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಅವರು ಬಿಜೆಪಿ ತೊರೆದು ಕಾಂಗ್ರೆಸ್‌ ಸೇರುತ್ತಾರೆಂದು ಅನೇಕ ದಿನಗಳಿಂದ ಹರಿದಾಡುತ್ತಿದ್ದ ಸುದ್ದಿಗೆ ಅಂತಿಮ ತೆರೆ ಎಳೆದಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮುಂದಿನ ಚುನಾವಣೆಯಲ್ಲಿ ಟಿಕೆಟ್‌ ನೀಡಿದರೆ ಸ್ಪರ್ಧೆ ಮಾಡುತ್ತೇನೆ. ಬೆಂಗಳೂರಿಗೆ ಬಂದ ಆರಂಭದ ದಿನಗಳಲ್ಲಿ ಪಿಗ್ಮಿ ಸಂಗ್ರಹಿಸುತ್ತಿದ್ದೆ. ಈಗ ವಾಪಸ್‌ ಪಿಗ್ನಿ ಸಂಗ್ರಹಿಸಲು ಕೂಡ ಸಿದ್ಧ. ಆದರೆ ಅಲ್ಲಿಂದ, ಇಲ್ಲಿಗೆ ಚಿತಾವಣೆ ಮಾಡುವ ಕೆಲಸ ಮಾಡಿಲ್ಲ ಎಂದರು.

ಸಚಿವ ಸೋಮಣ್ಣ ಸೇರಿದಂತೆ ಪಕ್ಷದ ಯಾವುದೇ ಮುಖಂಡರು ಪಕ್ಷ ಬಿಟ್ಟು ಹೋಗುವುದಿಲ್ಲ. ಈ ಬಗ್ಗೆ ಎದ್ದಿರುವ ಸುದ್ದಿಗಳಿಗೆ ಮಹತ್ವ ಇಲ್ಲ.
-ಬಿ.ಎಸ್‌.ಯಡಿಯೂರಪ್ಪ, ಮಾಜಿ ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next