ಉಡುಪಿ: ನಗರದಲ್ಲಿ ಕಲುಷಿತಗೊಂಡು ಹರಿಯುತ್ತಿರುವ ಇಂದ್ರಾಣಿ ನದಿ ಮತ್ತು ಮಳೆ ನೀರು ಸಂಪರ್ಕ ತೋಡುಗಳಿಂದ ಹಲವಾರು ಬಾವಿಗಳು ಉಪಯೋಗ ಶೂನ್ಯವಾಗಿದೆ. ಈಗ ಮತ್ತೂಂದು ಅವಾಂತರವಾಗಿದ್ದು, ಮಠದಬೆಟ್ಟು ಸಮೀಪ ನಡೆಯುತ್ತಿರುವ ಸಣ್ಣ ನೀರಾವರಿ ಇಲಾಖೆಯ ಕಿಂಡಿ ಅಣೆಕಟ್ಟಿನ ಕಾಮಗಾರಿ ವೇಳೆ ಬ್ಲಾಕ್ ಆಗಿ ಕೆಲವು ಮನೆಗಳ ಬಾವಿಗಳಿಗೆ ಕಲುಷಿತ ನೀರು ಸೇರಿಕೊಂಡಿದೆ.
ಇಂದ್ರಾಣಿ ನದಿ ಹಾಳಾದ ಬಳಿಕ ನಗರದಲ್ಲಿ ನೂರಾರು ಬಾವಿಗಳು ಪಾಳು ಬೀಳುತ್ತಿವೆ. ಇದೀಗ ಗುಂಡಿಬೈಲು ವಿಜಯತಾರಾ ಹೊಟೇಲ್ ಹಿಂಬದಿ ಪರಿಸರದ ಸರದಿಯಾಗಿದೆ. ಇಲ್ಲಿನ ಸಾರ್ವಜನಿಕರು ತಮ್ಮ ಬಾವಿ ಕಲುಷಿತವಾಗಿರುವುದನ್ನು ಕಂಡು ಒಮ್ಮೆಲೆ ಆತಂಕಗೊಂಡಿದ್ದಾರೆ. ಬಾವಿ ನೀರು ಕಲುಷಿತಗೊಂಡಿರುವ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಜನರು ನಗರಸಭೆಗೆ ಮೊರೆ ಹೋಗಿದ್ದಾರೆ.
ನೀರು ನಿಂತು ದುರ್ವಾಸನೆ
ಮಠದಬೆಟ್ಟುವಿನಲ್ಲಿ ಡ್ಯಾಂ ಕಾಮಗಾರಿ ವೇಳೆ ಮಣ್ಣು ಹಾಕಿದ್ದರು. ಇಲ್ಲಿನ ಗುಂಡಿಬೈಲು ಮಳೆ ನೀರಿನ ತೋಡು ಇಂದ್ರಾಣಿ ನದಿಗೆ ಸಂಪರ್ಕವಿದ್ದು, ಕಾಮಗಾರಿ ಪರಿಣಾಮ ನೀರು ಸರಾಗವಾಗಿ ಸಾಗದೆ ಒಂದೆಡೆ ನಿಂತು, ಹಿಮ್ಮುಖವಾಗಿ ನೀರು ಪಸರಿಸಿತು. ಮಂಗಳವಾರ ರಾತ್ರಿಯಿಂದ ನೀರು ಹೆಚ್ಚುತ್ತಿದ್ದಂತೆ ಈ ಭಾಗದಲ್ಲಿ ಬಾವಿಗಳಿಗೆ ನೀರು ಅಂತರ್ಜಲದ ಮೂಲಕ ಪಸರಿಸಿದೆ. ಬಾವಿ ನೀರು ಸಂಪೂರ್ಣ ಕಪ್ಪು ಬಣ್ಣಕ್ಕೆ ತಿರುಗಿ ದುರ್ವಾಸನೆಯಿಂದ ಕೂಡಿದೆ. ಈ ತೋಡಿಗೆ ಎರಡು ಬದಿಯಲ್ಲಿ ಕಾಂಕ್ರೀಟ್ ತಡೆಗೋಡೆಯನ್ನು ನಿರ್ಮಿಸದ ಪರಿಣಾಮದಿಂದ ಬಾವಿ ಕಲುಷಿತವಾಗಿದೆ. ಮಳೆಗಾಲದಲ್ಲಿ ನೆರೆ ಬಂದಾಗಲೂ ಈ ಪರಿಸರದ ಜನರು ಸಂಕಷ್ಟಕ್ಕೆ ಸಿಲುಕುತ್ತಾರೆ. ಈ ಬಗ್ಗೆ ನಗರಸಭೆ, ಸಂಬಂಧಪಟ್ಟ ಇಲಾಖೆಗಳು ಶಾಶ್ವತವಾಗಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಹರಿಯುವ ನೀರಿಗೆ ತಡೆಯಾಗದಂತೆ ಕಾಮಗಾರಿ
ಮಠದಬೆಟ್ಟು ಭಾಗದಲ್ಲಿ ಪ್ರಸ್ತುತ ಸಣ್ಣ ನೀರಾವರಿ ಇಲಾಖೆ ಕಡೆಯಿಂದ ಡ್ಯಾಂ ಕಾಮಗಾರಿ ನಿರ್ವಹಿಸುತ್ತಿದೆ. ಇಂದ್ರಾಣಿಯಲ್ಲಿ ಹರಿಯುವ ನೀರಿಗೆ ತಡೆ ಮಾಡದಂತೆ ತತ್‌ಕ್ಷಣ ಪರಿಶೀಲಿಸಿ ಸರಿಪಡಿಸುವಂತೆ ಇಲಾಖೆ ಎಂಜಿನಿಯರ್‌ಗಳಿಗೆ ನಗರಸಭೆಯಿಂದ ಸೂಚನೆ ನೀಡಿದ್ದೇವೆ.
– ಯಶವಂತ್, ಎಇಇ, ಉಡುಪಿ
ನಗರಸಭೆ ಕಾಮಗಾರಿ ನಿರ್ವಹಿಸಲು ಸೂಚನೆ ಸ್ಥಳೀಯರಿಂದ ಈ ಬಗ್ಗೆ ದೂರು ಕೇಳಿ ಬಂದ ಕೂಡಲೆ ನೀರಿನ ಹರಿವಿಗೆ ತಡೆಯಾಗದಂತೆ ಪೈಪ್ ಅಳವಡಿಸಿಕೊಂಡು ಕಾಮಗಾರಿ ನಿರ್ವಹಿಸಲು ಸೂಚನೆ ನೀಡಿದ್ದೇವೆ.
– ಶೇಷಕೃಷ್ಣ, ಎಇಇ, ಸಣ್ಣ ನೀರಾವರಿ ಇಲಾಖೆ, ಉಡುಪಿ