ಹೊಳಲ್ಕೆರೆ: ತಾಲೂಕಿನ ತಾಳಿಕಟ್ಟೆ ಗ್ರಾಮದ ಯುವತಿಗೆ ಕೋವಿಡ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಯುವತಿ ಮನೆಯಿಂದ ಒಂದು ಕಿಮೀ ಪ್ರದೇಶವನ್ನು ತಾಲೂಕು ಆಡಳಿತ ಕಂಟೇನ್ಮೆಂಟ್ ಝೋನ್ ಆಗಿ ಘೋಷಣೆ ಮಾಡಿದೆ. ಇದರಿಂದ ಗ್ರಾಮ ಹಾಗೂ ತಾಲೂಕಿನ ಜನರಲ್ಲಿ ಆತಂಕ ಮೂಡಿದೆ.
ಸೋಂಕಿತ ಯುವತಿಯ ಮನೆ ಹೊಸದುರ್ಗ ಮತ್ತು ಚನ್ನಗಿರಿ ಮಾರ್ಗದ ಮುಖ್ಯ ರಸ್ತೆಯಲ್ಲಿದೆ. ಹಾಗಾಗಿ ಮನೆಯ ಮುಂದಿರುವ ರಸ್ತೆಯನ್ನು ಬ್ಯಾರಿಕೇಡ್ ಗಳಿಂದ ಲಾಕ್ ಮಾಡಲಾಗಿದೆ. ಮನೆಯ ಸುತ್ತಮುತ್ತ ಯಾರೂ ತಿರುಗಾಡದಂತೆ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಿ ಪೊಲೀಸ್ ಪಹರೆ ಹಾಕಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ಇಲಾಖೆ ಹಾಗೂ ಗ್ರಾಮ ಪಂಚಾಯತ್ ವತಿಯಿಂದ 100 ಮೀಟರ್ ಅಂತರದಲ್ಲಿ ಹೈಪೋಕ್ಲೋರೈಡ್ ದ್ರಾವಣ ಸಿಂಪಡಣೆ ಮಾಡಲಾಗಿದೆ.
ಯುವತಿ ಮನೆಯಿಂದ ಒಂದು ಕಿಮೀ ವ್ಯಾಪ್ತಿಯನ್ನ ಕಂಟೇನ್ಮೆಂಟ್ ಝೋನ್ ಆಗಿ ಪರಿವರ್ತಿಸಲಾಗಿದ್ದು, ಇಲ್ಲಿರುವ ಹೋಟೆಲ್, ಬೇಕರಿ, ಅಂಗಡಿಗಳನ್ನು ಮುಚ್ಚಿಸಲಾಗಿದೆ. ಈ ಭಾಗದ ಜನರು ಅನಗತ್ಯವಾಗಿ ಹೊರಬರದಂತೆ ಸೂಚಿಸಲಾಗಿದೆ. ಅಗತ್ಯ ವಸ್ತುಗಳನ್ನು ಖರೀದಿಸುವುದಾದರೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಅನ್ಯ ಗ್ರಾಮಗಳ ಜನರು ತಾಳಿಕಟ್ಟೆ ಮೇಲೆ ಸಂಚರಿಸದಂತೆ ಪೊಲೀಸ್ ಇಲಾಖೆ ಮಾರ್ಗ ಬದಲಾವಣೆ ಮಾಡಿದೆ. ಯುವತಿಯಲ್ಲಿ ಸೋಂಕು ಇರುವ ಬಗ್ಗೆ ವರದಿ ಬರುತ್ತಿದ್ದಂತೆಯೇ ಯುವತಿಯ ಪ್ರಾಥಮಿಕ ಸಂಪರ್ಕದಲ್ಲಿದ್ದ ಆಕೆಯ ಅಜ್ಜ, ಅಜ್ಜಿ, ಮಾವ, ಅತ್ತೆ, ಇಬ್ಬರು ತಂಗಿಯರು, ಆಸ್ಪತ್ರೆಗೆ ಕರೆದೊಯ್ದಿದ್ದ ಕಾರು ಚಾಲಕ ಹಾಗೂ ಪ್ರಾಥಮಿಕ ಹಂತದಲ್ಲಿ ಚಿಕಿತ್ಸೆ ನೀಡಿದ್ದ ಆರೋಗ್ಯ ಇಲಾಖೆಯ ನಾಲ್ವರು ಸಿಬ್ಬಂದಿಯನ್ನು ತಾಲೂಕಿನ ಬೊಮ್ಮನಕಟ್ಟೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ.
ದ್ವಿತೀಯ ಹಂತದ ಸಂಪರ್ಕದಲ್ಲಿದ್ದ ಯುವತಿಯ ಅತ್ತೆ, ಮಕ್ಕಳು, ಅತ್ತಿಗೆ, ತಂದೆ, ತಾಯಿ, ಹಾಗೂ ಚಾಲಕನ ಪತ್ನಿಯನ್ನು ಸ್ಕ್ರೀನಿಂಗ್‌ಗೆ ಒಳಪಡಿಸಿ ಹೋಂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಚಾಲಕನ ಪತ್ನಿ ಗರ್ಭಿಣಿಯಾಗಿದ್ದು, ಆಕೆಯ ಆರೈಕೆ ಬಗ್ಗೆ ಆರೋಗ್ಯ ಇಲಾಖೆ ಕಾಳಜಿ ವಹಿಸಿದೆ.