Advertisement

ಚುನಾವಣೆ ಅಕ್ರಮ ತಡೆಗೆ ಕಂಟ್ರೋಲ್‌ ರೂಂ ಸಂಪರ್ಕಿಸಿ

09:16 PM Nov 11, 2019 | Lakshmi GovindaRaju |

ಹುಣಸೂರು: ಹುಣಸೂರು ಉಪ ಚುನಾವಣಾ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದು, ಪ್ರಚಾರ, ವಾಹನ ಬಳಕೆಗೆ ಅನುಮತಿ ಪಡೆಯದಿದ್ದಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಚುನಾವಣಾಧಿಕಾರಿಯಾದ ಉಪವಿಭಾಗಾಧಿಕಾರಿ ಎಸ್‌.ಪೂವಿತಾ ಎಚ್ಚರಿಕೆ ನೀಡಿದರು.

Advertisement

ಉಪ ಚುನಾವಣೆ ಸಂಬಂಧ ಕೈಗೊಂಡಿರುವ ಕ್ರಮಗಳ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಚುನಾವಣೆ ಅಕ್ರಮ ತಡೆಗೆ ತಾಲೂಕು ಕಚೇರಿಯಲ್ಲಿ ಕಂಟ್ರೋಲ್‌ ರೂಂ (08222-252040) ತೆರೆಯಲಾಗಿದ್ದು, ಯಾವುದೇ ನೀತಿ ಸಂಹಿತೆ ಉಲ್ಲಂಘನೆ ಅಥವಾ ಚುನಾವಣಾ ಅಕ್ರಮ ಕಂಡುಬಂದರೆ ದೂರು ನೀಡಬಹುದು ಎಂದರು.

ಡಿ.11ರ ವರೆಗೆ ನೀತಿ ಸಂಹಿತೆ ಜಾರಿ: ನಾಮಪತ್ರ ಸಲ್ಲಿಕೆ ನ.11ರಿಂದ ಆರಂಭಗೊಂಡಿದ್ದು, ನ.18 ಕೊನೆಯ ದಿನ. ನ.19 ನಾಮಪತ್ರ ಪರಿಶೀಲನೆ, ನ.21 ನಾಮಪತ್ರ ಹಿಂಪಡೆಯಲು ಕೊನೆದಿನ, ಡಿ.5 ರಂದು ಬೆಳಗ್ಗೆ 7 ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದ್ದು, ಡಿ.9 ರಂದು ಮತ ಎಣಿಕೆ ನಡೆಯಲಿದೆ. ಮಾದರಿ ನೀತಿ ಸಂಹಿತೆಯು ಡಿ.11 ರ ವೆರೆಗೆ ಜಾರಿಯಲ್ಲಿರುತ್ತದೆ. ಇದು ಹುಣಸೂರು ವಿಧಾನಸಭಾ ಕ್ಷೇತ್ರಕ್ಕೆ ಮಾತ್ರ ಅನ್ವಯಿಸಲಿದೆ ಎಂದರು.

2,26,920 ಮತದಾರರು: ಕ್ಷೇತ್ರದಲ್ಲಿ ಒಟ್ಟು 2,26,920 ಮತದಾರರಿದ್ದು, ಈ ಪೈಕಿ 1,14,150 ಪುರುಷ ಹಾಗೂ 1,12,770 ಮಹಿಳಾ ಮತದಾರರಿದ್ದಾರೆ. ಒಟ್ಟು 274 ಮತಗಟ್ಟೆ ಸ್ಥಾಪಿಸಲಾಗುವುದು. ತಾಲೂಕಿನ ಆರು ಕಡೆಗಳಲ್ಲಿ ಚೆಕ್‌ಪೋಸ್ಟ್‌ ತೆರೆಯಲಾಗಿದ್ದು, ಐದು ಫ್ಲೆಯಿಂಗ್‌ ಸ್ಕ್ವಾಡ್‌ ಹಾಗೂ 21 ಸೆಕ್ಟರಲ್‌ ಮ್ಯಾಜಿಸ್ಟೇಟರ್‌ಗಳನ್ನು ನೇಮಕ ಮಾಡಲಾಗಿದೆ.

ಐದು ಕಡೆ ಚೆಕ್‌ ಪೋಸ್ಟ್‌: ತಾಲೂಕಿನ‌ ವೀರನಹೊಸಹಳ್ಳಿ, ಮನುಗನಹಳ್ಳಿ, ಚಿಲ್ಕುಂದ, ಗಾವಡಗೆರೆ, ಮುತ್ತುರಾಯನಹೊಸಹಳ್ಳಿ ಹಾಗೂ ತಾಲೂಕಿನ ಗಡಿಯಂಚಿನ ಗ್ರಾಮ ಕೆ.ಆರ್‌.ನಗರ ತಾಲೂಕಿನ ದೊಡ್ಡಕೊಪ್ಪಲು ಗ್ರಾಮದ ಬಳಿ ಚೆಕ್‌ಪೋಸ್ಟ್‌ ತೆರೆಯಲಾಗಿದ್ದು, ಸಾರ್ವಜನಿಕರು, ವಾಹನಗಳವರು ಸಹಕಾರ ನೀಡಬೇಕೆಂದು ಕೋರಿದರು.

Advertisement

ಅನುಮತಿ ಕಡ್ಡಾಯ: ಯಾವುದೇ ಪಕ್ಷದ ಜನಪ್ರತಿನಿಧಿಗಳು ಚುನಾವಣಾ ಪ್ರಚಾರ ನಡೆಸುವುದಾಗಲಿ, ಪ್ರಚಾರಕ್ಕೆ ಬಳಸುವ ವಾಹನಗಳಿಗೆ ಚುನಾವಣಾಧಿಕಾರಿಗಳಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ನಾಟಕ, ಜಾತ್ರೆ, ಉತ್ಸವ ಮತ್ತಿತರ ಕಾರ್ಯಕ್ರಮಗಳಿಗೆ ಸಹ ಚುನಾವಣಾಧಿಕಾರಿಗಳಿಗೆ ಲಿಖೀತವಾಗಿ ಮನವಿ ಸಲ್ಲಿಸಿ ಅನುಮತಿ ಪಡೆಯಬೇಕು.

ರಾತ್ರಿ ಧ್ವನಿವರ್ಧಕ ನಿಷೇಧ: ಪ್ರಚಾರ ಸಭೆಗಳು, ನಾಟಕ ಮತ್ತಿತರ ಕಾರ್ಯಕ್ರಮಗಳಿಗೆ ಧ್ವನಿ ವರ್ಧಕವನ್ನು ರಾತ್ರಿ 10ರ ವರೆಗೆ ಮಾತ್ರ ಬಳಸತಕ್ಕದ್ದು, ರಾತ್ರಿ 10 ರಿಂದ ಬೆಳಗ್ಗೆ 6ರ ವರೆಗೆ ಸಂಪೂರ್ಣ ನಿಷೇಧಿಸಲಾಗಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಹಾಯಕ ಚುನಾವಣಾಧಿಕಾರಿಯಾದ ತಹಶೀಲ್ದಾರ್‌ ಬಸವರಾಜ್‌ ಇದ್ದರು.

ಹಿಂದಿನ 2 ನಾಮಪತ್ರಕ್ಕೆ ಮಾನ್ಯತೆ: ಹುಣಸೂರು ವಿಧಾನಸಭಾ ಚುನಾವಣೆಯ ನಾಮಪತ್ರ ಸಲ್ಲಿಕೆಯ ಮೊದಲ ದಿನ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ, ಈ ಹಿಂದೆ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಮಂಚಬಾಯನಹಳ್ಳಿಯ ದೇವರಾಜು ಹಾಗೂ ಬಿಳಿಕೆರೆಯ ಕರಿಯಪ್ಪ ಅವರ ನಾಮಪತ್ರಗಳನ್ನು ಮಾನ್ಯಗೊಳಿಸಲಾಗುವುದು ಎಂದು ಚುನಾವಣಾಧಿಕಾರಿ ಎಸ್‌.ಪೂವಿಕಾ ತಿಳಿಸಿದರು.

ಎಸ್‌.ಪೂವಿತಾ ನೇಮಕ: ಹುಣಸೂರು ಉಪ ಚುನಾವಣೆಯ ಚುನಾವಣಾಧಿಕಾರಿಯಾಗಿ ಬೆಂಗಳೂರಿನ ಕೆಯುಐಡಿಎಸ್‌ಸಿ ಜಂಟಿ ವ್ಯವಸ್ಥಾಪಕ ನಿರ್ದೇಶಕಿಯಾಗಿದ್ದ 2016ನೇ ಬ್ಯಾಚ್‌ನ ಐಎಎಸ್‌ ಅಧಿಕಾರಿ, ತಮಿಳುನಾಡು ಮೂಲದ ಎಸ್‌.ಪೂವಿತಾ ಅವರನ್ನು ಸರಕಾರ ನೇಮಿಸಿದೆ. ಇಲ್ಲಿ ಉಪವಿಭಾಗಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಬಿ.ಎನ್‌.ವೀಣಾ ಅವರನ್ನು ಉಪ ಚುನಾವಣೆ ಹಿನ್ನೆಲೆಯಲ್ಲಿ ಸ್ಥಳ ನಿಯೋಜಿಸದೆ ವರ್ಗಾವಣೆಗೊಳಿಸಿ ಆದೇಶಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next