Advertisement

ಸಂಪರ್ಕ ಸೌಧ ಲೋಕಾರ್ಪಣೆ

11:43 AM Mar 16, 2018 | Team Udayavani |

ಬೆಂಗಳೂರು: ರಾಜಾಜಿನಗರದ ಡಾ.ರಾಜ್‌ಕುಮಾರ್‌ ರಸ್ತೆಯಲ್ಲಿ 40 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ (ಕೆಆರ್‌ಡಿಸಿಎಲ್‌)ದ ನೂತನ ಆಡಳಿತ ಕಚೇರಿ “ಸಂಪರ್ಕ ಸೌಧ’ವನ್ನು ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. 

Advertisement

ಲೋಕೋಪಯೋಗಿ ಇಲಾಖೆಗೆ ಸೇರಿದ 2,985 ಚ.ಮೀ. ಜಾಗವನ್ನು 30 ವರ್ಷಗಳ ಅವಧಿಗೆ ಭೋಗ್ಯಕ್ಕೆ ಪಡೆದ ಕೆಆರ್‌ಡಿಸಿಎಲ್‌, ಎರಡು ತಳಮಹಡಿ ಸೇರಿದಂತೆ ಒಂಬತ್ತು ಅಂತಸ್ತು ಒಳಗೊಂಡ ನೂತನ ಬೃಹತ್‌ ಕಟ್ಟಡ ನಿರ್ಮಿಸಿದೆ.

ಈ ಸಂದರ್ಭದಲ್ಲಿ ಸಚಿವ ಎಚ್‌. ಆಂಜನೇಯ, ಶಾಸಕ ಕೆ. ಗೋಪಾಲಯ್ಯ, ಲೋಕೋಪಯೋಗಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಂ. ಲಕ್ಷ್ಮೀನಾರಾಯಣ, ಕಾರ್ಯದರ್ಶಿ ಎಸ್‌.ಬಿ. ಸಿದ್ದಗಂಗಪ್ಪ, ಕೆಆರ್‌ಡಿಸಿಎಲ್‌ ಅಧ್ಯಕ್ಷ ಸಿ. ಪುಟ್ಟರಂಗಶೆಟ್ಟಿ,  ವ್ಯವಸ್ಥಾಪನ ನಿರ್ದೇಶಕ ಡಾ.ಕೆ.ಎಸ್‌. ಕೃಷ್ಣಾರೆಡ್ಡಿ, ಮುಖ್ಯ ಎಂಜಿನಿಯರ್‌ ಟಿ.ಡಿ. ನಂಜುಂಡಪ್ಪ ಮತ್ತಿತರರು ಉಪಸ್ಥಿತರಿದ್ದರು. 

ಕಟ್ಟಡದ ಒಟ್ಟು ವಿಸ್ತೀರ್ಣ 13,009 ಚ.ಮೀ ಇದ್ದು, ಕಟ್ಟಡದ ಮೊದಲ ಮತ್ತು ಎರಡನೇ ಮಹಡಿಗಳು ಬಾಡಿಗೆಗಾಗಿ ನಿಯೋಜಿಸಲಾಗಿದೆ. 3 ಮತ್ತು 4ನೇ ಮಹಡಿಗಳಲ್ಲಿ ಸಂಸ್ಥೆಯ ಆಡಳಿತ ಕಚೇರಿ, 5 ಮತ್ತು 6 ನೇ ಮಹಡಿಯಲ್ಲಿ ಸಭಾಂಗಣಗಳ ನಿರ್ಮಾಣ ಮಾಡಲಾಗಿದೆ ಎಂದು ಕೆಆರ್‌ಡಿಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಡಾ.ಕೆ.ಎಸ್‌.ಕೃಷ್ಣಾರೆಡ್ಡಿ ತಿಳಿಸಿದರು.

ಸಂಪರ್ಕ ಸೌಧ 500ಕ್ಕೂ ಹೆಚ್ಚು ಜನರಿಗೆ ಆಸನವುಳ್ಳ ಸಭಾಂಗಣ, ತ್ಯಾಜ್ಯನೀರು ಸಂಸ್ಕರಣಾ ಘಟಕ, ಮಳೆನೀರು ಕೊಯ್ಲು ಅಳವಡಿಕೆ, 120 ಕಾರು ನಿಲುಗಡೆ ವ್ಯವಸ್ಥೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒಳಗೊಂಡಿದೆ. ಕಟ್ಟಡದ ಜಾಗಕ್ಕೆ ನಿಗಮವು ಭೋಗ್ಯದ ಆಧಾರದಲ್ಲಿ ಪ್ರತಿ ವರ್ಷ 14.75 ಲಕ್ಷ ರೂ. ಸರ್ಕಾರಕ್ಕೆ ಪಾವತಿಸಲು ಅನುಮೋದನೆ ನೀಡಲಾಗಿದೆ ಎಂದರು.  

Advertisement

ಅಲ್ಲದೆ, ಕಟ್ಟಡದಲ್ಲಿ ಮಳೆನೀರು ಕೊಯ್ಲು ಪದ್ಧತಿ ಅಳವಡಿಸಿ ನೀರು ಸಂಗ್ರಹಣೆಗೆ ಮತ್ತು ಕೊಳವೆಬಾವಿ ಮರುಪೂರಣ ಮಾಡಲು ಯೋಜನೆ, ಜತೆಗೆ ಪ್ರತಿದಿನ 40 ಕಿ.ಲೀ. ಸಾಮರ್ಥ್ಯದ ತ್ಯಾಜ್ಯನೀರು ಸಂಸ್ಕರಣಾ ಘಟಕ ಸ್ಥಾಪನೆ ಹಾಗೂ ಸಂಸ್ಕರಿಸಿದ ನೀರನ್ನು ಉದ್ಯಾನ ಮತ್ತು ಶೌಚಾಲಯಗಳಿಗೆ ಬಳಸಲು ವ್ಯವಸ್ಥೆ ಮಾಡಲಾಗಿದೆ ಎಂದು ಸುದ್ದಿಗಾರರಿಗೆ ವಿವರಿಸಿದರು.

217 ಸೇತುವೆಗಳ ನಿರ್ಮಾಣ: ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮವು ಸುಗಮ ರಸ್ತೆ ಸಂಚಾರಕ್ಕಾಗಿ ರಾಜ್ಯಾದ ವಿವಿಧೆಡೆ 1,395 ಕೋಟಿ ವೆಚ್ಚದಲ್ಲಿ 217 ಸೇತುವೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಅದೇ ರೀತಿ, ಬೆಂಗಳೂರಿನಲ್ಲಿ ಸಂಚಾರದಟ್ಟಣೆ ಸಮಸ್ಯೆ ನಿಯಂತ್ರಿಸಲು ನಗರದ ಸುತ್ತ 150 ಕಿ.ಮೀ. ಉದ್ದದ 4 ರಸ್ತೆಗಳನ್ನು 2,095 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಈಗಾಗಲೇ ಟೆಂಡರ್‌ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next