Advertisement

ಬೇಹುಗಾರಿಕೆ ಪ್ರಕರಣ: ಪಾಕಿಸ್ಥಾನಕ್ಕೆ ಕರೆ ಹೋಗಿರುವುದು ಸತ್ಯ

12:33 PM Jun 23, 2022 | Team Udayavani |

ಬೆಂಗಳೂರು: ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಸೇರಿ ವಿದೇಶಗಳಿಂದ ಬರುತ್ತಿದ್ದ ಅಂತಾರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸುತ್ತಿದ್ದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಕೇರಳ ಮೂಲದ ಸರ್ಫೂದ್ದಿನ್‌ನನ್ನು ಸಿಸಿಬಿ ಪೊಲೀಸರು 10 ದಿನಗಳ ಕಾಲ ವಶಕ್ಕೆ ಪಡೆದುಕೊಂಡಿದ್ದಾರೆ.

Advertisement

ಹೆಸರಘಟ್ಟದಲ್ಲಿ ನೆಲೆಸಿದ್ದ ಆರೋಪಿ ಕೇರಳ ಮೂಲದ ವ್ಯಕ್ತಿಯೊಬ್ಬನ ಸೂಚನೆ ಮೇರೆಗೆ ಹೆಸರುಘಟ್ಟದ ಭವನೇಶ್ವರಿನಗರ, ಸಿದ್ದೇಶ್ವರ ಲೇಔಟ್‌, ಚಿಕ್ಕಸಂದ್ರ ಸೇರಿ ನಾಲ್ಕು ಕಡೆ ಕರೆಗಳ ಪರಿವರ್ತನೆಯ ಪರಿಕರಗಳನ್ನು ಇಟ್ಟುಕೊಂಡಿದ್ದ. ಈ ಮೂಲಕ ಭಾರತೀಯ ಸಂಪರ್ಕ ಇಲಾಖೆಗೆ ಕೋಟ್ಯಂತರ ರೂ. ವಂಚಿಸುತ್ತಿದ್ದ. ಭಾರತೀಯ ಸೇನೆಯ ಗುಪ್ತಚರ ಇಲಾಖೆ ಮತ್ತು ಸಿಸಿಬಿ ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿತ್ತು.

ಕರೆಗಳ ಬಗ್ಗೆ ಮಾಹಿತಿ ಸಂಗ್ರಹ

ಪ್ರಾಥಮಿಕ ವಿಚಾರಣೆಯಲ್ಲಿ ಆರೋಪಿಗೆ ಎಲ್ಲಿಂದ ಕರೆಗಳು ಬರುತ್ತಿದ್ದವು? ಯಾರಿಗೆ ಹೋಗುತ್ತಿತ್ತು? ಎಂಬ ಮಾಹಿತಿ ಇಲ್ಲ. ಆದರೆ, ಯಾರ ಸಹಕಾರದಿಂದ ಈ ರೀತಿಯ ಉಪಕರಣಗಳನ್ನು ಅಳವಡಿಸಲಾಗಿದೆ? ಜತೆಗೆ ಸಾವಿರಾರು ರೂ. ಸಿಮ್‌ ಕಾರ್ಡ್‌ಗಳನ್ನು ಯಾರಿಂದ ಪಡೆಯಲಾಗಿದೆ? ಎಂಬ ಮಾಹಿತಿ ಸಂಗ್ರಹಿಸಬೇಕಿದೆ. ಹೀಗಾಗಿ 10 ದಿನಗಳ ಕಾಲ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು.

ಕೇರಳ, ಆಂಧ್ರ, .ನಾಡಿನ ಸಿಮ್ಕಾರ್ಡ್

Advertisement

ಆರೋಪಿ ಬಳಿ ಸಿಕ್ಕಿರುವ 2 ಸಾವಿರಕ್ಕೂ ಅಧಿಕ ಸಿಮ್‌ಕಾರ್ಡ್‌ಗಳ ಬಗ್ಗೆ ಪ್ರಾಥಮಿಕ ಮಾಹಿತಿ ಸಂಗ್ರಹಿಸಿದಾಗ ಅವುಗಳನ್ನು ಕೇರಳ, ಆಂಧ್ರಪ್ರದೇಶ, ತಮಿಳುನಾಡಿನ ಗ್ರಾಮೀಣ ಪ್ರದೇಶದ ವ್ಯಕ್ತಿಗಳಿಗೆ ಹಣದ ಆಮಿಷವೊಡ್ಡಿ ಅವರ ದಾಖಲೆಗಳನ್ನು ಪಡೆದು ಸಿಮ್‌ಕಾರ್ಡ್‌ಗಳನ್ನು ಖರೀದಿಸಲಾಗಿದೆ. ಜತೆಗೆ ಹೆಸರಘಟ್ಟ, ಬೆಂಗಳೂರು ಗ್ರಾಮಾಂತರ ಭಾಗದ ಕೆಲ ವ್ಯಕ್ತಿಗಳ ಹೆಸರಿನಲ್ಲಿ ಸಿಮ್‌ ಕಾರ್ಡ್‌ಗಳನ್ನು ಪಡೆಯಲಾಗಿದೆ ಎಂಬುದು ಗೊತ್ತಾಗಿದೆ. ಆರೋಪಿ ಜತೆ ಕೇರಳ ಮೂಲದ ಕೆಲ ಅನುಮಾನಾಸ್ಪದ ವ್ಯಕ್ತಿಗಳು ನಿರಂತರ ಸಂಪರ್ಕದಲ್ಲಿರುವುದು ಪತ್ತೆಯಾಗಿದೆ. ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದರು.

ಇದನ್ನೂ ಓದಿ:ಕಲ್ಲಡ್ಕ: ಜ್ವರದಿಂದ ಬಳಲುತ್ತಿದ್ದ ಒಂದನೇ ತರಗತಿ ವಿದ್ಯಾರ್ಥಿನಿ ಸಾವು

ಪಾಕ್ಕರೆ ಸತ್ಯ: ಮತ್ತೊಂದೆಡೆ ಆರೋಪಿಯ ಕರೆಗಳ ಪರಿವರ್ತನಾ ಕೇಂದ್ರಕ್ಕೆ ಪಾಕಿಸ್ತಾನದಿಂದ ಕರೆಗಳು ಬರುತ್ತಿರುವುದು ಖಚಿತವಾಗಿದೆ. ಪ್ರಮುಖವಾಗಿ ಪಾಕ್‌ನ ಗುಪ್ತಚರ ಸಂಸ್ಥೆ ಐಎಸ್‌ಐನ ಅಧಿಕಾರಿಗಳ ಕರೆಗಳು ಬೆಂಗಳೂರು, ಮುಂಬೈ, ದೆಹಲಿಗೆ ಹೋಗುತ್ತಿದ್ದವು ಎಂದು ಹೇಳಲಾಗಿದೆ. ಭಾರತೀಯ ಸೇನೆಯ ಗುಪ್ತಚರ ಮಾಹಿತಿ ಪ್ರಕಾರ, ಭಾರತೀಯ ಸೇನೆಯ ಮಾಹಿತಿ ಪಡೆಯಲು ನಿರ್ದಿಷ್ಟ ವ್ಯಕ್ತಿಗಳನ್ನು ಐಎಸ್‌ಐಏಜೆಂಟ್‌ಗಳು ಸಂಪರ್ಕಿಸುತ್ತಿದ್ದರು ಎನ್ನಲಾಗಿದೆ. ಈ ಕುರಿತು ಮಾಹಿತಿ ಪಡೆಯಬೇಕಿದೆ ಎಂದು ಸಿಸಿಬಿ ಮೂಲಗಳು ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next