Advertisement
ಮೆಸ್ಕಾಂ ಅಧಿಕಾರಿಗಳೇ ಇದನ್ನು ಖಚಿತಪಡಿಸಿದ್ದು, ಹೊಸ ಡಿಜಿಟಲ್ ಮೀಟರ್ ಅಳವಡಿಕೆಯ ಗುತ್ತಿಗೆಯನ್ನು ಖಾಸಗಿ ಏಜೆನ್ಸಿಗೆ ನೀಡಲಾಗಿದೆ. ಈ ಏಜೆನ್ಸಿಯು ಟೆಂಡರ್ ಮೂಲಕ ಮೀಟರ್ ಜೋಡಣಾ ಕಾಮಗಾರಿ ಗುತ್ತಿಗೆಯನ್ನು ಪಡೆದಿದೆ. ಹಾಗಾಗಿ ಗ್ರಾಹಕರು ಮೀಟರ್ ಅಳವಡಿಸಿದ್ದಕ್ಕೆ ಚಿಕ್ಕಾಸನ್ನೂ ನೀಡಬೇಕಿಲ್ಲ.
ಪ್ರಸ್ತುತ ಸುಳ್ಯ ಮತ್ತು ಪುತ್ತೂರು ತಾಲೂಕಿನ ಹಲವೆಡೆ ಗ್ರಾಹಕರಿಂದ ಹಣ ವಸೂಲು ಮಾಡಿರುವ ಬಗ್ಗೆ ದೂರುಗಳು ಕೇಳಿಬರುತ್ತಿವೆ. ಈಶ್ವರಮಂಗಲ, ಕರ್ನೂರು, ಅಜ್ಜಾವರ ಸಹಿತ ಹಲವೆಡೆ ಮೀಟರ್ ಅಳವಡಿಸಿದ ಬಳಿಕ ಸಂಬಂಧಪಟ್ಟ ಏಜೆನ್ಸಿಯ ಸಿಬಂದಿ ತಮ್ಮಿಂದ 100 ರೂ. ಗಳಿಂದ 500 ರೂ. ಗಳವರೆಗೂ ವಸೂಲಿ ಮಾಡಿದ್ದಾರೆ ಎನ್ನುತ್ತಾರೆ ಕೆಲವು ಗ್ರಾಹಕರು. ಇವರಲ್ಲಿ ಹೆಚ್ಚು ಹೊರಜಿಲ್ಲೆಯವರೇ ಇದ್ದು, ಕಡಿಮೆ ಹಣ ಕೊಟ್ಟರೂ ಬಿಡುವುದಿಲ್ಲ. ಮಾಹಿತಿ ಇದ್ದವರು ಪ್ರಶ್ನಿಸಿದರೆ ಮೀಟರ್ ಉಚಿತ, ಆದರೆ ಜೋಡಣೆಗೆ ಶುಲ್ಕವಿದೆ ಎಂದು ಸಬೂಬು ಹೇಳುತ್ತಿರುವುದೂ ಬೆಳಕಿಗೆ ಬಂದಿದೆ. ಕೇಂದ್ರ ಸರಕಾರದ ಯೋಜನೆ ಅನ್ವಯ ಹೊಸ ಮೀಟರ್ ಅಳವಡಿಕೆ ಉಚಿತ. ಇದಕ್ಕೆ ತಗಲುವ ವೆಚ್ಚದ ಶೇ. 60ರಷ್ಟನ್ನು ಕೇಂದ್ರ ಹಾಗೂ ಉಳಿದದ್ದನ್ನು ಮೆಸ್ಕಾಂ ಭರಿಸುತ್ತವೆ. ಹೀಗಾಗಿ ಇದು ಗ್ರಾಹಕರಿಗೆ ಉಚಿತವಾಗಿ ಲಭ್ಯ. ಅಳವಡಿಕೆ ಕೆಲಸವನ್ನು ಖಾಸಗಿ ಏಜೆನ್ಸಿಗೆ ಟೆಂಡರ್ ಮೂಲಕ ವಹಿಸಲಾಗಿದೆ. ಏಜೆನ್ಸಿಯು ತನ್ನ ಸಿಬಂದಿಗೆ ವೇತನ ನೀಡುವುದರಿಂದ ಗ್ರಾಹಕರು ಹಣ ಪಾವತಿಸಬೇಕಿಲ್ಲ.
Related Articles
Advertisement
ಏನಿದು ಯೋಜನೆ?ಕೇಂದ್ರ ಸರಕಾರದ ಐಪಿಡಿಎಸ್ (ಇಂಟಿಗ್ರೇಟೆಡ್ ಪವರ್ ಡೆವಲಪ್‌ಮೆಂಟ್ ಸ್ಕೀಮ್) ಹಾಗೂ ಡಿಡಿಯುಜಿವೈ (ದೀನ್ ದಯಾಳ್ ಉಪಾಧ್ಯಾಯ ಗ್ರಾಮಜ್ಯೋತಿ ಯೋಜನೆ) ಆಶ್ರಯದಲ್ಲಿ ಡಿಜಿಟಲ್ ರೀಡಿಂಗ್ ಹೊಂದಿರುವ “ಸ್ಟಾಟಿಕ್ ಮೀಟರ್’ ಅಳವಡಿಸಲಾಗುತ್ತದೆ. ಮೆಸ್ಕಾಂ ಅಧೀನದಲ್ಲಿ ಬರುವ ದ.ಕ., ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ವ್ಯಾಪ್ತಿಯಲ್ಲಿ 24 ಲಕ್ಷ ವಿದ್ಯುತ್ ಸಂಪರ್ಕಗಳಿದ್ದು, ಹಂತ ಹಂತವಾಗಿ ಎಲ್ಲೆಡೆ ಅಳವಡಿಸಲಾಗುತ್ತಿದೆ.
ಹೊಸ ಮೀಟರ್‌ನಲ್ಲಿ ಎಲೆಕ್ಟ್ರೋ ಮೆಕ್ಯಾನಿಕಲ್ ಮೀಟರ್ ರೀತಿಯ ಮೆಕ್ಯಾನಿಕಲ್ ಪಾರ್ಟ್ ಇರದು. ಮೀಟರ್‌ನೊಳಗೆ ವೀಲ್ ತಿರುಗದು. ಸ್ವಯಂ ಚಾಲಿತ ಡಿಜಿಟಲ್ ವ್ಯವಸ್ಥೆ ಇದ್ದು, ಬಳಕೆ ವಿದ್ಯುತ್ ಯೂನಿಟ್ ದಾಖಲಾಗಿ ಪ್ರದರ್ಶಿತವಾಗುತ್ತದೆ. ಇದರಿಂದ ವಿದ್ಯುತ್ ದುರ್ಬಳಕೆ ಸಾಧ್ಯವಿಲ್ಲ. ರೀಡಿಂಗ್ ನಕಲಿಗೆ ಅವಕಾಶ ಇಲ್ಲ. ನಗರ ಪ್ರದೇಶ ಮತ್ತು ಗ್ರಾಮೀಣ ಭಾಗಗಳಲ್ಲಿ ತಲಾ 2 ಲಕ್ಷಗಳಂತೆ ಇಂತಹ ಒಟ್ಟು 4 ಲಕ್ಷ ಸ್ಟಾಟಿಕ್ ಮೀಟರ್ ಅಳವಡಿಸುವ ಕಾರ್ಯವನ್ನು 2019ರ ಮಾರ್ಚ್‌ನೊಳಗೆ ಪೂರೈಸುವ ಗುರಿಯನ್ನು ಮೆಸ್ಕಾಂ ಹೊಂದಿದೆ. ಮೆಸ್ಕಾಂ ಕಚೇರಿಗೆ ದೂರು ಸಲ್ಲಿಸಿ
ಡಿಜಿಟಲ್ ಮೀಟರ್ ಅಳವಡಿಸುವ ಸಂಬಂಧ ಶುಲ್ಕ ವಸೂಲು ಮಾಡುತ್ತಿರುವುದು ಬೆಳಕಿಗೆ ಬಂದರೆ ಆಯಾ ವ್ಯಾಪ್ತಿಯ ಮೆಸ್ಕಾಂ ಕಚೇರಿಗೆ ದೂರು ನೀಡಬಹುದು ಎಂದು ಮೆಸ್ಕಾಂ ಮೂಲಗಳು ಹೇಳಿವೆ. ಹಣ ನೀಡಬೇಡಿ
ಮೆಸ್ಕಾಂ ಡಿಜಿಟಲ್ ಮೀಟರ್ ಅಳವಡಿಕೆ ಕಾಮಗಾರಿಯನ್ನು ಖಾಸಗಿ ಏಜೆನ್ಸಿಯು ಟೆಂಡರ್ ಮೂಲಕ ಪಡೆದಿದೆ. ಆ ಸಂಸ್ಥೆ ತನ್ನ ಸಿಬಂದಿ ಮೂಲಕ ಗ್ರಾಹಕರ ಮನೆಗೆ ಉಚಿತವಾಗಿ ಮೀಟರ್ ಅಳವಡಿಸಬೇಕು. ಅಳವಡಿಕೆ ವೇಳೆ ಹಣ ವಸೂಲು ಮಾಡುವ ಬಗ್ಗೆ ಈ ಹಿಂದೆ ದೂರು ಬಂದಾಗ ಎಚ್ಚರಿಸಲಾಗಿತ್ತು. ಯಾವುದೇ ಕಾರಣಕ್ಕೂ ಗ್ರಾಹಕರು ಹಣ ಪಾವತಿಸಬಾರದು.
– ಮಂಜಪ್ಪ, ಅಧೀಕ್ಷಕ ಎಂಜಿನಿಯರ್, ಮೆಸ್ಕಾಂ ಮಂಗಳೂರು ವಲಯ