ಸಾಗರ: ತಾಲೂಕಿನ ಎಡಜಿಗಳೇ ಮನೆ ಎಸ್‌ಬಿಐ ಶಾಖೆಯ ವಿರುದ್ಧ ಸೇವಾ ನ್ಯೂನತೆ ಕಾರಣಕ್ಕೆ ದಾಖಲಿಸಿದ್ದ ಪ್ರಕರಣದಲ್ಲಿ ಅರ್ಜಿದಾರರಿಗೆ ಪರಿಹಾರ ಒದಗಿಸುವಂತೆ ಬ್ಯಾಂಕಿನ ವ್ಯವಸ್ಥಾಪಕರಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.
ದೂರುದಾರರಾದ ಆರ್. ಹೇಮಲತಾ ಎಸ್‌ಬಿಐ ಎಡಜಿಗಳೇ ಮನೆ ಶಾಖೆಯಲ್ಲಿ ಉಳಿತಾಯ ಖಾತೆ ಹೊಂದಿದ್ದಾರೆ. ಈ ಖಾತೆಗೆ ಸಂಬಂಧಿಸಿದಂತೆ ಫೋನ್ ಪೇ, ಗೂಗಲ್ ಪೇ ಹೊಂದಿದ್ದರು.
ಹೇಮಲತಾ ಅವರು 2021ರ ಆಗಸ್ಟ್ 21ರಂದು ತಮ್ಮ ಖಾತೆಯಿಂದ ಆನ್‌ಲೈನ್ ಸೇವಾ ಸೌಲಭ್ಯ ಬಳಸಿ ಹಣ ತೆಗೆಯಲು ಪ್ರಯತ್ನಿಸಿದಾಗ, ‘ಒಟಿಪಿ ಸರಿ ಇಲ್ಲ. ಹೀಗಾಗಿ ಮತ್ತೊಮ್ಮೆ ಪ್ರಯತ್ನಿಸಿ’ ಎಂಬ ಸಂದೇಶ ಮೊಬೈಲ್‌ಗೆ ಬಂದಿತ್ತು. ಆ ಸಂದರ್ಭದಲ್ಲಿ ಅವರಿಗೆ ಹಣ ಪಡೆಯಲು ಸಾಧ್ಯವಾಗದಿದ್ದರೂ ಖಾತೆಯಿಂದ 23,900 ರೂ. ಡ್ರಾ ಆಗಿ ಮೊಬೈಲ್‌ಗೆ ಸಂದೇಶ ಬಂದಿತ್ತು.
ಸಂದೇಶ ನೋಡಿ ಗಾಬರಿಗೊಂಡ ಅವರು ತಮ್ಮ ಖಾತೆಯಿಂದ ಹಣ ಡ್ರಾ ಆಗಿರುವ ಬಗ್ಗೆ ಬ್ಯಾಂಕಿನವರಿಗೆ ತಿಳಿಸಿ, ಈ ಬಗ್ಗೆ ತನಿಖೆ ನಡೆಸಿ ತಮ್ಮ ಹಣ ವಾಪಸ್ ಕೊಡಿಸುವಂತೆ ಕೋರಿದ್ದಾರೆ.
ಆದರೆ ಎದುರುದಾರರು ಆ ಬಗ್ಗೆ ನಿರ್ಲಕ್ಷ್ಯ ತೋರಿದ್ದಾರೆ. ‘ಹಣ ಆ ರೀತಿ ತಪ್ಪಾಗಿ ವರ್ಗಾವಣೆಯಾಗಲು ನಾವು ಜವಾಬ್ದಾರರಲ್ಲ’ ಎಂದು ಉತ್ತರಿಸಿದ ಹಿನ್ನೆಲೆಯಲ್ಲಿ ಹೇಮಲತಾ ಸೇವಾ ನ್ಯೂನತೆ ಆರೋಪದ ಮೇಲೆ ಬ್ಯಾಂಕಿನ ವ್ಯವಸ್ಥಾಪಕರ ವಿರುದ್ಧ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಸಾಕ್ಷ್ಯಾಧಾರಗಳು ಮತ್ತು ವಾದ ಪ್ರತಿವಾದಗಳನ್ನು ಆಲಿಸಿ ಪ್ರಕರಣವನ್ನು ಭಾಗಶಃ ಪುರಸ್ಕರಿಸಿದ ಆಯೋಗ, ಬ್ಯಾಂಕ್‌ನವರು ಗ್ರಾಹಕಿ ಹೇಮಲತಾ ಅವರಿಗೆ 23,900 ರೂ.ನ್ನು ವಾರ್ಷಿಕ ಶೇ. 6 ಬಡ್ಡಿಯೊಂದಿಗೆ ಮರುಪಾವತಿಸಬೇಕು. ದೂರುದಾರರಿಗೆ ಆದ ಮಾನಸಿಕ ಹಾನಿಗೆ ಪರಿಹಾರವಾಗಿ 5 ಸಾವಿರ ರೂ. ಹಾಗೂ ವ್ಯಾಜ್ಯದ ಖರ್ಚು ವೆಚ್ಚಗಳ ಬಾಬ್ತು 5 ಸಾವಿರ ರೂ. ಸೇರಿಸಿ 45 ದಿನಗಳೊಳಗಾಗಿ ಹಣ ಪಾವತಿಸಬೇಕು ಎಂದು ಆದೇಶಿಸಿದೆ.
ಶಿವಮೊಗ್ಗ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಟಿ. ಶಿವಣ್ಣ, ಮಹಿಳಾ ಸದಸ್ಯರಾದ ಸವಿತಾ ಬಿ. ಪಟ್ಟಣಶೆಟ್ಟಿ ಮತ್ತು ಬಿ.ಡಿ.ಯೋಗಾನಂದ ಭಾಂಡ್ಯ ಅವರನ್ನೊಳಗೊಂಡ ಪೀಠವು ಈ ಆದೇಶ ನೀಡಿದೆ.