Advertisement

ಬ್ಯಾಂಕ್‌ ವಿಧಿಸುವ ಎಸ್‌ಎಂಎಸ್‌ ಸೇವಾ ಶುಲ್ಕ ಸೇವಾ ನ್ಯೂನತೆಯಡಿ ಬಾರದು

12:28 AM Feb 05, 2023 | Team Udayavani |

ಉಡುಪಿ: ರಾಷ್ಟ್ರೀಕೃತ ಬ್ಯಾಂಕ್‌ಗಳು ತನ್ನ ಗ್ರಾಹಕರಿಗೆ ಎಸ್‌.ಎಂ.ಎಸ್‌. ಎಚ್ಚರಿಕೆ ಸಂದೇಶಗಳನ್ನು ಅವರ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಕಳುಹಿಸಿ, ಗ್ರಾಹಕರಿಂದ ಆ ಬಗ್ಗೆ ಅವರ ಖಾತೆಯಿಂದ ಶುಲ್ಕವನ್ನು ಕಡಿತಗೊಳಿಸಿದರೆ ಅದು ಸೇವಾ ನ್ಯೂನತೆಯ ಅಡಿಯಲ್ಲಿ ಬರುವುದಿಲ್ಲವೆಂದು ಉಡುಪಿ ಜಿಲ್ಲಾ ಗ್ರಾಹಕರ ಪರಿಹಾರ ಆಯೋಗ ಪ್ರಕರಣವೊಂದರಲ್ಲಿ ಮಹತ್ತರ ತೀರ್ಪು ನೀಡಿದೆ.

Advertisement

ಉಡುಪಿ ಕುಂಜಿಬೆಟ್ಟುವಿನ ಮಧುಸೂದನ ಪ್ರಭು ಅವರು ಉಡುಪಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮುಂದೆ ಕೆನರಾ ಬ್ಯಾಂಕ್‌ ಕುಂಜಿಬೆಟ್ಟು ಶಾಖೆಯ ವಿರುದ್ಧ ದೂರು ದಾಖಲಿಸಿ, ತಮಗೆ ಬ್ಯಾಂಕಿನಿಂದ ಪ್ರತೀ 3 ತಿಂಗಳಿಗೊಮ್ಮೆ ಎಸ್‌.ಎಂ.ಎಸ್‌. ಕಳುಹಿಸಿದ ಬಗ್ಗೆ ಶುಲ್ಕವನ್ನು ತಮ್ಮ ಎಸ್‌.ಬಿ. ಖಾತೆಯಿಂದ ಕಡಿತಗೊಳಿಸುತ್ತಿದ್ದಾರೆ ಎಂದು ದೂರು ದಾಖಲಿಸಿ ಪರಿಹಾರ ಕೇಳಿದ್ದರು.

ಈ ಬಗ್ಗೆ ಬ್ಯಾಂಕ್‌ ಪರ ವಕೀಲರು ತಮ್ಮ ವಾದದಲ್ಲಿ ಗ್ರಾಹಕರಿಂದ ಪಡೆಯಲಾಗುವ ಸೇವಾ ಶುಲ್ಕಗಳು ಭಾರತೀಯ ರಿಸರ್ವ್‌ ಬ್ಯಾಂಕಿನ ಮಾರ್ಗಸೂಚಿ ಮತ್ತು ನಿಯಮಗಳ ಪ್ರಕಾರ ಗ್ರಾಹಕರ ಸುರಕ್ಷತೆಗಾಗಿ ಗ್ರಾಹಕರಿಗೆ ಯಾವುದೇ ಅನಾನುಕೂಲವಾಗದೆ ಇರಲೆಂದು ಎಸ್‌.ಎಂ.ಎಸ್‌. ಎಚ್ಚರಿಕೆಯ ಸಂದೇಶಗಳನ್ನು ಕಳುಹಿಸುತ್ತಿದ್ದು, ಆ ಬಗ್ಗೆ ಸಂಬಂಧಪಟ್ಟ ಗ್ರಾಹಕರಿಂದ ಶುಲ್ಕವನ್ನು ಕಡಿತಗೊಳಿಸುತ್ತಾರೆ. ಎಸ್‌.ಎಂ.ಎಸ್‌. ಸಂದೇಶಗಳು ಸೈಬರ್‌ ಕ್ರೈಂ ಅನಂತರ ಮೋಸದ ಜಾಲಗಳನ್ನು ತಡೆಯುವುದರಲ್ಲಿಯೂ ಸಹ ಸಹಕಾರಿಯಾಗುತ್ತದೆ. ಅಲ್ಲದೆ ಗ್ರಾಹಕರು ತಮ್ಮ ಖಾತೆಗಳನ್ನು ಬ್ಯಾಂಕ್‌ನಲ್ಲಿ ತೆರೆಯುವಾಗ ಮೊಬೈಲ್‌ ಸಂಖ್ಯೆಯನ್ನು ಅರ್ಜಿಯಲ್ಲಿ ನಮೂದಿಸಿದಾಗ, ಗ್ರಾಹಕರ ವ್ಯವಹಾರಕ್ಕೆ ಸಂಬಂಧಪಟ್ಟ ಎಲ್ಲ ವಿವರಗಳು ನಿರ್ದಿಷ್ಟ ಸಮಯದೊಳಗೆ ಗ್ರಾಹಕರಿಗೆ ತಲುಪುತ್ತದೆ. ಇದರಿಂದ ಗ್ರಾಹಕರಿಗೆ ಅನುಕೂಲವೇ ವಿನಾ ಅನಾನುಕೂಲವಿರುವುದಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಮತ್ತು ರಾಷ್ಟ್ರೀಯ ಗ್ರಾಹಕರ ಆಯೋಗದಲ್ಲಿ ಇತ್ತೀಚಿಗೆ ತೀರ್ಪುಗೊಂಡ ಪ್ರಕರಣಗಳನ್ನು ಆಧರಿಸಿ ವಾದ ಮಂಡಿಸಿದರು. ಬ್ಯಾಂಕಿನ ಪರ ವಾದವನ್ನು ಎತ್ತಿ ಹಿಡಿದ ಆಯೋಗ ಪಿರ್ಯಾದಿದಾರರ ಅರ್ಜಿಯನ್ನು ವಜಾಗೊಳಿಸಿ, ದೂರುದಾರರಿಗೆ ಯಾವುದೇ ಪರಿಹಾರ ಮೊತ್ತವನ್ನು ನೀಡಲು ಬ್ಯಾಂಕ್‌ ಬಾಧ್ಯಸ್ಥವಲ್ಲವೆಂದು ತೀರ್ಪು ನೀಡಿದೆ. ಕೆನರಾ ಬ್ಯಾಂಕಿನ ಪರ ನ್ಯಾಯವಾದಿ ಎಚ್‌. ಆನಂದ ಮಡಿವಾಳ ವಾದಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next