Advertisement

ಗಡಿಕೇಶ್ವಾರದಲ್ಲಿ ತಾತ್ಕಾಲಿಕ ಶೆಡ್‌ ನಿರ್ಮಾಣ

02:29 PM May 14, 2022 | Team Udayavani |

ಚಿಂಚೋಳಿ: ತಾಲೂಕಿನ ಭೂಕಂಪ ಪೀಡಿತ ಗಡಿಕೇಶ್ವಾರ ಗ್ರಾಮದಲ್ಲಿ ಸರ್ಕಾರ ಕಂದಾಯ ಇಲಾಖೆಯಿಂದ ಮಂಜೂರಿಗೊಳಿಸಿದ ತಾತ್ಕಾಲಿಕ ಶೆಡ್‌ ನಿರ್ಮಾಣ ಕಾರ್ಯ ಮನೆಗಳ ಎದುರು ಖಾಲಿ ಇರುವ ಸ್ಥಳದಲ್ಲಿ ನಡೆಯುತ್ತಿದೆ.

Advertisement

ಮೇಲಿಂದ ಮೇಲೆ ಲಘು ಭೂಕಂಪವಾಗಿ ಭಯಭೀತರಾಗಿದ್ದ ಗ್ರಾಮಸ್ಥರಿಗೆ ತಾತ್ಕಾಲಿಕ ಆಶ್ರಯಕ್ಕಾಗಿ ಮನೆಗಳ ಅಕ್ಕಪಕ್ಕದ ಖಾಲಿ ಜಾಗದಲ್ಲಿ 10×10 ಅಳತೆಯ 853 ತಾತ್ಕಾಲಿಕ ಟಿನ್‌ ಶೆಡ್‌ ಗಳನ್ನು ನಿರ್ಮಿಸಲು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಒದಗಿಸಲಾಗಿರುವ 3ಕೋಟಿ ರೂ.ಗಳನ್ನು ಕಂದಾಯ ಇಲಾಖೆಯ ವಿಪತ್ತು ಪರಿಹಾರ ನಿಧಿಗೆ ಜಮೆ ಮಾಡಿದ್ದರಿಂದ ಗ್ರಾಮದಲ್ಲಿ ಶೆಡ್‌ ನಿರ್ಮಾಣ ಕಾರ್ಯ ಭರದಿಂದ ನಡೆಯುತ್ತಿದೆ.

ಪ್ರತಿ ಶೆಡ್‌ಗೆ 23,500ರೂ.ಗಳನ್ನು ಸರ್ಕಾರ ನಿಗದಿಪಡಿಸಿದ್ದರಿಂದ ಮನೆಗಳ ಎದುರು ತೆಗ್ಗು ತೋಡಿಸಲಾಗಿದ್ದು, ಶೆಡ್‌ ಕಾರ್ಯ ಕಳೆದೆರಡು ದಿನಗಳಿಂದ ನಡೆಯುತ್ತಿದೆ. ಸೇಡಂ ಸಹಾಯಕ ಆಯುಕ್ತರ ನೇತೃತ್ವದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಮನೆಗಳ ಸಮೀಕ್ಷೆ ಮಾಡಲಾಗಿದೆ. ಗ್ರಾಮದಲ್ಲಿ ಒಟ್ಟು 1057 ಜನ ವಸತಿ ಮನೆಗಳಿವೆ. ಇವುಗಳ ಪೈಕಿ 853 ಮನೆಗಳ ಎದುರು ಮತ್ತು ಅಕ್ಕಪಕ್ಕದಲ್ಲಿ ಮಾತ್ರ ತಾತ್ಕಾಲಿಕ ಶೆಡ್ಡುಗಳನ್ನು ನಿರ್ಮಿಸಲಾಗುತ್ತಿದೆ. ಆದರೆ ಶೆಡ್‌ ಸುತ್ತ ಟಿನ್‌ ಅಳವಡಿಸಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.

ಗಡಿಕೇಶ್ವಾರ ಗ್ರಾಮದಲ್ಲಿ ಪದೇ ಪದೇ ಭೂಮಿಯಿಂದ ಭಾರಿ ಶಬ್ದ ಉಂಟಾಗಿ, ನಂತರ ಭೂಮಿ ನಡುಗುತ್ತಿತ್ತು. ಹೀಗಾಗಿ ಗ್ರಾಮಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿ ಕಂದಾಯ ಸಚಿವ ಆರ್‌.ಅಶೋಕಗೆ ತಾತ್ಕಾಲಿಕವಾಗಿ ಶೆಡ್‌ಗಳನ್ನು ನಿರ್ಮಿಸಲು ಮನವಿ ಮಾಡಿದ್ದರು. ಆನಂತರ ಕಂದಾಯ ಸಚಿವ ಆರ್‌. ಅಶೋಕ, ಸಂಸದ ಡಾ| ಉಮೇಶ ಜಾಧವ, ಆಗಿನ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ನಾ, ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆಗಳನ್ನು ಖುದ್ದಾಗಿ ಅರಿತು ಸರ್ಕಾರಕ್ಕೆ ಮಾಹಿತಿ ಒದಗಿಸಿದ್ದರಿಂದ ಅನುದಾನ ಮಂಜೂರಿಯಾಗಿ ಶೆಡ್‌ ನಿರ್ಮಾಣ ಕಾರ್ಯ ಆರಂಭವಾಗಿದೆ.

ಗ್ರಾಮದ ಸರ್ಕಾರಿ ಬಾಲಕರ ವಸತಿ ನಿಲಯದ ಆವರಣದಲ್ಲಿ ಶೆಡ್‌ ನಿರ್ಮಾಣಕ್ಕಾಗಿ ಬೇಕಾಗುವ ಕಬ್ಬಿಣದ ಸಲಾಕೆ, ಟಿನ್‌ ಶೆಡ್‌ ಮತ್ತು ಇನ್ನಿತರ ಸಲಕರಣೆಗಳನ್ನು ತಂದಿಡಲಾಗಿದೆ.

Advertisement

ರಾಜ್ಯ ಸರ್ಕಾರದಿಂದ ಗಡಿಕೇಶ್ವಾರ ಗ್ರಾಮದ ಮನೆಗಳ ಎದುರು ನಿರ್ಮಿಸಲಾಗುತ್ತಿರುವ ಶೆಡ್‌ ಕೇವಲ 10×10 ಆಗಿದ್ದರಿಂದ ಭೂಕಂಪದ ಸಂದರ್ಭದಲ್ಲಿ ಯಾವುದಕ್ಕೂ ಉಪಯೋಗ ಬರುವುದಿಲ್ಲ. ಶೆಡ್‌ ಕೇವಲ ಚಪ್ಪರದಂತೆ ನಿರ್ಮಸಲಾಗುತ್ತಿದೆ. ಮಳೆ, ಗಾಳಿ, ಚಳಿ ತಡೆದುಕೊಳ್ಳಲು ಸುತ್ತಲೂ ತಗಡುಗಳಿಲ್ಲದೇ ನಿರ್ಮಾಣ ಮಾಡುತ್ತಿರುವುದರಿಂದ ಗ್ರಾಮಸ್ಥರಿಗೆ ಉಪಯೋಗ ಆಗುವುದಿಲ್ಲವೆಂದು ಹಸರಗುಂಡಗಿ-ಗುರಂಪಳ್ಳಿ ಗ್ರಾಮಸ್ಥರಿಗೆ ನಿರ್ಮಿಸಿಕೊಟ್ಟ ಶೆಡ್‌ ಮಾದರಿಯಂತೆ ಇರಬೇಕು. ಸದ್ಯ ಶೆಡ್‌ ನಿರ್ಮಾಣ ಸರಿಯಾಗುತ್ತಿಲ್ಲ. -ಜಿಶಾನ್‌ ಅಲಿ ಪಟ್ಟೇದಾರ, ಗ್ರಾಪಂ ಉಪಾಧ್ಯಕ್ಷ, ಗಡಿಕೇಶ್ವಾರ

ಗಡಿಕೇಶ್ವಾರ ಗ್ರಾಮಸ್ಥರ ಮನೆ ಎದುರು ಶೆಡ್‌ ನಿರ್ಮಿಸಲು ಸರ್ಕಾರ ಪ್ರತಿ ಮನೆಗೊಂದರಂತೆ 23,500ರೂ. ಅನುದಾನ ನೀಡಿದೆ. ಆದರೆ ಸರ್ಕಾರದ ಅಂದಾಜಿನಂತೆ ಗುತ್ತಿಗೆದಾರ ಶೆಡ್‌ ನಿರ್ಮಿಸಬೇಕಾಗುತ್ತದೆ. ಜನರ ಬೇಡಿಕೆಯಂತೆ ಶೆಡ್‌ ಸುತ್ತ ಟಿನ್‌ ಹಾಕಲು ಇನ್ನು ಹೆಚ್ಚುವರಿಯಾಗಿ ಐದು ಕೋಟಿ ರೂ.ಅನುದಾನ ಬೇಕಾಗುತ್ತದೆ. ಸೇಡಂ ಶಾಸಕ ರಾಜಕುಮಾರ ಪಾಟೀಲ ಜಿಲ್ಲಾಧಿಕಾರಿ ಯಶವಂತ ಗುರುಕರ್‌ ಅವರಿಗೆ ಸೂಚಿಸಿದ್ದರಿಂದ ಹೊಸದಾಗಿ ಅಂದಾಜು ಪತ್ರಿಕೆ ಸಿದ್ಧಪಡಿಸಿ ಮೇ 16ರಂದು (ಸೋಮವಾರ) ಸರ್ಕಾರಕ್ಕೆ ಸಲ್ಲಿಸಲಾಗುವುದು. -ಸಿದ್ರಾಮ ದಂಡಗುಲಕರ, ಎಇಇ, ಲೋಕೋಪಯೋಗಿ ಇಲಾಖೆ, ಕಾಳಗಿ

-ಶಾಮರಾವ ಚಿಂಚೋಳಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next