Advertisement

ನಾರಂಕೋಡಿ: ಬುಟ್ಟಿ ಹೆಣೆಯಲು ಶೆಡ್‌ ನಿರ್ಮಾಣಕ್ಕೆ ಅಸ್ತು

10:18 AM Aug 07, 2022 | Team Udayavani |

ಬಂಟ್ವಾಳ: ಬೋಳಂತೂರಿನ ನಾರಂಕೋಡಿಯ ಕಾಲನಿಯ ಆದಿವಾಸಿ ಕೊರಗ ಕುಟುಂಬಗಳು ತಮಗೆ ಬುಟ್ಟಿ ಹೆಣೆಯುವುದಕ್ಕೆ ಶೆಡ್‌ವೊಂದನ್ನು ನಿರ್ಮಿಸುವಂತೆ ಬೇಡಿಕೆ ಸಲ್ಲಿಸಿದ್ದು, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್‌(ಎನ್‌ಆರ್‌ಎಲ್‌ಎಂ) ಮೂಲಕ ಶೆಡ್‌ ನಿರ್ಮಾಣಕ್ಕೆ ಅಧಿಕಾರಿಗಳು ನಿರ್ಧರಿಸಿದ್ದಾರೆ. ಅದರ ನಿರ್ಮಾಣಕ್ಕೆ ಸೂಕ್ತ ಜಾಗ ಗುರುತಿಸಿ ಶೆಡ್‌ ನಿರ್ಮಿಸಲು ಪ್ರಯತ್ನಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

ಇಲ್ಲಿನ ಕೊರಗ ಕುಟುಂಬಗಳಿಗೆ ಬುಟ್ಟಿ ತಯಾರಿಯೇ ಜೀವನಾಧಾರವಾಗಿದ್ದು, ಚಿಕ್ಕದಾದ ಮನೆಗಳಲ್ಲಿ ವಾಸಿಸುವ ಅವರಿಗೆ ಮನೆಯಲ್ಲೇ ಬುಟ್ಟಿ ತಯಾರಿಸುವುದು ಸಮಸ್ಯೆಯಾಗುತ್ತಿದೆ. ಬೇಸಗೆಯಲ್ಲಾದರೆ ಹೊರಗೆ ಕುಳಿತು ಬುಟ್ಟಿ ಹೆಣೆಯಬಹುದಾಗಿದ್ದು, ಮಳೆಗಾಲದಲ್ಲಿ ಅದು ಸಾಧ್ಯವಿಲ್ಲ. ಕಾಡಿನಿಂದ ಹೊತ್ತು ತಂದ ಬಳ್ಳಿ ಗಳಿಗೆ ಸ್ವಲ್ಪ ನೀರು ಬಿದ್ದು ಕಪ್ಪಾದರೂ, ಮುಂದೆ ಅದರಿಂದ ಹೆಣೆದ ಬುಟ್ಟಿಗಳಿಗೆ ಬೇಡಿಕೆಯೇ ಇರುವುದಿಲ್ಲ.

ನಾರಂಕೋಡಿ ಕೊರಗ ಕಾಲನಿಯಲ್ಲಿ ಕಳೆದ 20 ವರ್ಷಗಳಿಂದ ಕೊರಗರು ವಾಸವಾಗಿದ್ದು, ಒಟ್ಟು 6 ಮನೆಗಳಲ್ಲಿ 13 ಮಂದಿ ವಾಸಿಸುತ್ತಿದ್ದಾರೆ. ಕಾಲನಿಯ ನಿವಾಸಿಗಳಾದ ಮೈರೆ, ಬಲ್ಲು, ಅಂಗಾರೆ, ಸುಜಿತ್‌ಕುಮಾರ್‌ ಅವರ ಕುಟುಂಬಗಳು ಬುಟ್ಟಿ ಹೆಣೆಯುವ ಕಾಯಕವನ್ನೇ ಮಾಡುತ್ತಿದೆ. ಹೀಗಾಗಿ ಎಲ್ಲರಿಗೂ ಅನುಕೂಲವಾಗುವಂತೆ ಶೆಡ್‌ ನಿರ್ಮಿಸಲು ಬೇಡಿಕೆಯನ್ನಿಟ್ಟಿದ್ದರು.

ʼಉದಯವಾಣಿ ಸುದಿನ’ದಲ್ಲಿ ವರದಿ

ಅವರ ಸಮಸ್ಯೆಗಳು ಸೇರಿದಂತೆ ಬುಟ್ಟಿ ಹೆಣೆಯುವುದಕ್ಕೆ ಶೆಡ್‌ ಬೇಡಿಕೆಯ ಕುರಿತು “ಉದಯವಾಣಿ ಸುದಿನ’ದಲ್ಲಿ ಜೂ. 15ರಂದು “ನಾರಂಕೋಡಿ ಕೊರಗ ಕಾಲನಿಗೆ ಬೇಕಿದೆ ಸೌಲಭ್ಯ; ಬುಟ್ಟಿ ಹೆಣೆಯಲು ಶೆಡ್‌ ಜತೆಗೆ ಹಲವು ಬೇಡಿಕೆ’ ಎಂಬ ಶೀರ್ಷಿಕೆಯಲ್ಲಿ ಸಚಿತ್ರ ವಿಶೇಷ ವರದಿ ಪ್ರಕಟಿಸಲಾಗಿತ್ತು.

Advertisement

ಈ ವರದಿಗೆ ಸ್ಪಂದನೆ ಎಂಬಂತೆ ಶೆಡ್‌ ನಿರ್ಮಾಣಕ್ಕೆ ಜಾಗ ಗುರುತಿಸುವಂತೆ ಅಂದಿನ ದ.ಕ.ಜಿಲ್ಲಾ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ (ಐಟಿಡಿಪಿ)ಯ ಅಧಿಕ ಯೋಜನಾ ಸಮನ್ವಯಾಧಿಕಾರಿ ಗಾಯತ್ರಿ ಬಂಟ್ವಾಳ ಸಮಾಜ ಕಲ್ಯಾಣ ಇಲಾಖೆಯ ಅಂದಿನ ಸಹಾಯಕ ನಿರ್ದೇಶಕಿ ಜಯಶ್ರೀ ಅವರಿಗೆ ಆದೇಶಿಸಿದ್ದರು. ಅದರಂತೆ ಜಯಶ್ರೀ ಅವರು ಸ್ಥಳಕ್ಕೆ ಭೇಟಿ ನೀಡಿ ಗುರುತಿಸಿರುವ ಸ್ಥಳ ಸರಕಾರಿ ಅಥವಾ ಅರಣ್ಯ ಇಲಾಖೆಗೆ ಸೇರುತ್ತದೆಯೇ ಎಂದು ವರದಿ ನೀಡುವಂತೆ ಸ್ಥಳೀಯ ಗ್ರಾಮಕರಣಿಕರಿಗೆ ಸೂಚಿಸಿದ್ದರು. ಆದರೆ ಬಳಿಕ ಐಟಿಡಿಪಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಎರಡೂ ಅಧಿಕಾರಿಗಳು ವರ್ಗಾವಣೆಗೊಂಡಿದ್ದರು.

ಸೂಕ್ತ ಸ್ಥಳ ನಿಗದಿ ಮಾಡಿ ಶೆಡ್‌

ಪ್ರಸ್ತುತ ಐಟಿಡಿಪಿಯ ಪ್ರಭಾರ ಯೋಜನಾ ಸಮನ್ವಯಾಧಿಕಾರಿಯಾಗಿರುವ ರಶ್ಮಿ ಎಸ್‌.ಆರ್‌. ಅವರು ಶೆಡ್‌ ನಿರ್ಮಾಣದ ಕುರಿತು ದ.ಕ.ಜಿ.ಪಂ. ಮುಖ್ಯಕಾರ್ಯ ನಿರ್ವಹಣಾಧಿಕಾರಿ ಡಾ| ಕುಮಾರ್‌ ಅವರ ಜತೆ ಚರ್ಚೆ ನಡೆಸಿದ್ದು, ಅವರು ಎನ್‌ಆರ್‌ಎಲ್‌ಎಂ ಮೂಲಕ ಶೆಡ್‌ ನಿರ್ಮಿಸುವ ಕುರಿತು ಸೂಚಿಸಿದ್ದಾರೆ. ಹೀಗಾಗಿ ಮುಂದೆ ಸೂಕ್ತ ಸ್ಥಳ ನಿಗದಿ ಮಾಡಿ ಶೆಡ್‌ ನಿರ್ಮಿಸುವುದಾಗಿ ರಶ್ಮಿ ಎಸ್‌.ಆರ್‌.ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next