Advertisement

ಶೃಂಗೇರಿಯಿಂದ ಕಾಶ್ಮೀರದ ತೀತ್ವಾಲ್‌ಗೆ ಶಾರದಾ ಯಾತ್ರೆ!

12:31 AM Jan 21, 2023 | Team Udayavani |

ಬೆಂಗಳೂರು: ಜಮ್ಮು ಕಾಶ್ಮೀರದ ಗಡಿಯಲ್ಲಿನ ತೀತ್ವಾಲ್‌ನಲ್ಲಿ ಹೊಸದಾಗಿ ನಿರ್ಮಿಸಲಾದ ಶಾರದಾಂಬೆಯ ದೇಗುಲಕ್ಕೆ ಶೃಂಗೇರಿಯ ಶ್ರೀಶಾರದಾ ಪೀಠವು ಶಾರದೆಯ ವಿಗ್ರಹವನ್ನು ರೂಪಿಸಿಕೊಟ್ಟಿದ್ದು, ಇದೇ ಮಂಗಳವಾರ ಶೃಂಗೇರಿಯಿಂದ ತೀತ್ವಾಲ್‌ಗೆ ರಥಯಾತ್ರೆ ಮೂಲಕ ಕೊಂಡೊಯ್ಯಲಾಗುತ್ತಿದೆ.

Advertisement

ಈ ವಿಗ್ರಹವನ್ನು ಪಂಚಲೋಹದಿಂದ ತಯಾರಿಸಲಾಗಿದ್ದು, 3 ಅಡಿ ಎತ್ತರ, 100 ಕೆ.ಜಿ. ಭಾರವಿದೆ. ಕಳೆದ ವಿಜಯದಶಮಿಯಂದೇ ಈ ವಿಗ್ರಹವನ್ನು ಸಾಂಕೇತಿಕವಾಗಿ ಶ್ರೀ ಶಾರದಾ ಸಂರಕ್ಷಣ ಸಮಿತಿಗೆ ಶೃಂಗೇರಿ ಮಠದ ಕಡೆಯಿಂದ ಹಸ್ತಾಂತರಿಸಲಾಗಿತ್ತು. ಈಗ ಕಾಶ್ಮೀರದ ತೀತ್ವಾಲ್‌ನಲ್ಲಿ ದೇಗುಲದ ಕೆಲಸವೂ ಮುಗಿಯು ತ್ತಿದ್ದು, ವಿಗ್ರಹವನ್ನು ಕೊಂಡೊಯ್ಯಲಾಗುತ್ತಿದೆ. ಮಾ.22ರಂದು, ಪವಿತ್ರ ಚೈತ್ರ ನವರಾತ್ರಿಯ ದಿನದಂದು ವಿಗ್ರಹವನ್ನು ಪ್ರತಿ ಷ್ಠಾಪಿಸಲಾಗುವುದು. ಇದಕ್ಕೆ ಎಲ್‌ಒಸಿ ಬಳಿ ಇರುವ ನಾಗರಿಕರಿಗೆ ಆಹ್ವಾನ ನೀಡಲಾಗಿದೆ.

ರಥಕ್ಕಾಗಿ ಹೊಸ ವಾಹನ ಖರೀದಿ
ದೇವಿಯ ವಿಗ್ರಹ ಕೊಂಡೊಯ್ಯಲು ಹೊಸ ಬಲೆರೋ ವಾಹನ ಖರೀದಿಸಿ, ರಥ ವಾಗಿ ಮಾರ್ಪಡಿಸಲಾಗಿದೆ. ಒಳಗೆ ವಿನ್ಯಾಸವನ್ನೂ ಬದಲಾಯಿಸಿ, ವಿಗ್ರಹ ಇಡಲು ವ್ಯವಸ್ಥೆ ಮಾಡಲಾಗಿದೆ ಎಂದು ಕಾಶ್ಮೀರದ ಶಾರದಾ ಉಳಿಸಿ ಸಮಿತಿಯ ಸ್ಥಾಪಕ ರವೀಂದರ್‌ ಪಂಡಿತ್‌ ಹೇಳಿದ್ದಾರೆ.

ಮಾರ್ಗ ಯಾವುದು?
ಜ.24 ಕ್ಕೆ ಶೃಂಗೇರಿಯಿಂದ ಹೊರಡುವ ರಥವು, ಬೆಂಗಳೂರನ್ನು ತಲುಪಲಿದೆ. ಬಳಿಕ ಮುಂಬಯಿ, ಪುಣೆ, ಅಹ್ಮದಾಬಾದ್‌, ಜೈಪುರ, ದಿಲ್ಲಿ -ಎನ್‌ಸಿಆರ್‌, ಚಂಡೀಗಢ, ಅಮೃತಸರ, ಜಮ್ಮು ಮಾರ್ಗವಾಗಿ ಫೆಬ್ರವರಿ ಅಂತ್ಯದ ವೇಳೆಗೆ ಕುಪ್ವಾರ ಸೇರಲಿದೆ. ಈ ಎಲ್ಲ ಮಾರ್ಗಗಳಲ್ಲೂ ಇರುವ ಕಾಶ್ಮೀರಿ ಭವನಕ್ಕೆ ಶಾರದಾ ವಿಗ್ರಹವನ್ನು ಕೊಂಡೊಯ್ಯಲಾಗುತ್ತಿದ್ದು, ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು.  ಈ ಮೂಲಕ ಪ್ರತಿಷ್ಠಾಪನೆ ದಿನದಂದು ತೀತ್ವಾಲ್‌ಗೆ ಬರಲಾಗದವರಿಗೂ ದೇವಿಯ ದರ್ಶನ ಅವಕಾಶ ಒದಗಿಸಲಾಗುತ್ತಿದೆ ಎಂದಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next