Advertisement

ಅಯೋಧ್ಯೆಯಲ್ಲೂ ಕರ್ನಾಟಕ ಛತ್ರ ನಿರ್ಮಾಣ: ಸಚಿವೆ ಶಶಿಕಲಾ ಜೊಲ್ಲೆ

04:36 PM Aug 09, 2022 | Team Udayavani |

ಮಂತ್ರಾಲಯ/ ಬೆಂಗಳೂರು: ಕರ್ನಾಟಕ ರಾಜ್ಯದ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಅಯೋಧ್ಯೆಯಲ್ಲಿ ಕರ್ನಾಟಕ ಛತ್ರ ನಿರ್ಮಾಣಕ್ಕೆ ಸ್ಥಳಾವಕಾಶ ನೀಡುವಂತೆ ಉತ್ತರಪ್ರದೇಶ ರಾಜ್ಯದೊಂದಿಗೆ ಪತ್ರ ವ್ಯವಹಾರ ನಡೆಸಲಾಗುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಚರ್ಚಿಸಲಾಗುವುದು ಎಂದು ಮುಜರಾಯಿ, ಹಜ್‌ ಮತ್ತು ವಕ್ಫ್‌ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

Advertisement

ಇಂದು ಮಂತ್ರಾಲಯದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಕರ್ನಾಟಕ ಛತ್ರದ ಕಟ್ಟಡವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ಬಿಜೆಪಿ ಸರಕಾರ ರಾಜ್ಯದ ಧಾರ್ಮಿಕ ಕೇಂದ್ರಗಳನ್ನು ಅಭಿವೃದ್ದಿಗೊಳಿಸುವ ನಿಟ್ಟಿನಲ್ಲಿ ಹೆಚ್ಚಿನ ಮಹತ್ವ ನೀಡುತ್ತಿದೆ. ಕಳೆದ 10 ವರ್ಷಗಳಲ್ಲೇ ಅತಿ ಹೆಚ್ಚು ಅನುದಾನವನ್ನ ನಮ್ಮ ಇಲಾಖೆಗೆ ನೀಡಲಾಗಿದೆ. ರಾಜ್ಯದಿಂದ ಹೊರರಾಜ್ಯಕ್ಕೆ ತೆರಳುವ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಹೊರರಾಜ್ಯಗಳಲ್ಲೂ ಕರ್ನಾಟಕ ಛತ್ರಗಳ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ಬಿಡುಗಡೆಗೊಳಿಸಲಾಗಿದೆ. ಕೆಲವು ದಿನಗಳ ಹಿಂದೆ ಕೇರಳ ರಾಜ್ಯದ ಶಬರಿಮಲೆಯಲ್ಲಿ ಕರ್ನಾಟಕ ಛತ್ರ ನಿರ್ಮಾಣಕ್ಕಾಗಿ 5 ಕೋಟಿ, ಮಹರಾಷ್ಟ್ರ ರಾಜ್ಯದ ಪಂಡರಾಪುರದಲ್ಲಿ ಛತ್ರಕ್ಕಾಗಿ 3 ಕೋಟಿ ಮಂತ್ರಾಲಯದಲ್ಲಿ ಛತ್ರಗಳ ಅಭಿವೃದ್ದಿಗಾಗಿ 4 ಕೋಟಿ ರೂಪಾಯಿಗಳನ್ನು ನೀಡಲಾಗಿದೆ. ಈ ಹಿಂದೆ ತಿರುಮಲದಲ್ಲಿ ಕರ್ನಾಟಕ ಭವನ ನಿರ್ಮಾಣಕ್ಕೆ 232 ಕೋಟಿ ರೂಪಾಯಿಗಳ ಬೃಹತ್‌ ಅನುದಾನ ನೀಡಲಾಗಿದ್ದು, ನಿರ್ಮಾಣ ಕಾರ್ಯ ಭರದಿಂದ ಸಾಗಿದೆ ಎಂದರು.

ಇದನ್ನೂ ಓದಿ:ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿದ ಬಿಹಾರ ಸಿಎಂ ನಿತೀಶ್; ಆರ್ ಜೆಡಿ, ಜೆಡಿಯು ಸರ್ಕಾರ ರಚನೆ

ಇಂದು ಮಂತ್ರಾಲಯದಲ್ಲಿ ನೂತನವಾಗಿ ನಿರ್ಮಿಸಲಾಗಿರುವ 50 ಕೊಠಡಿಗಳ ಛತ್ರವನ್ನು ಲೋಕಾರ್ಪಣೆಗೊಳಿಸಲಾಗಿದೆ. ಹಳೆಯ ಕಟ್ಟಡವನ್ನು ಅಭಿವೃದ್ದಿಗೊಳಿಸುವ ನಿಟ್ಟಿನಲ್ಲಿ 4 ಕೋಟಿ ರೂಪಾಯಿಗಳ ಅನುದಾನ ಬಿಡುಗಡೆಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಮಂತ್ರಾಲಯದಲ್ಲಿ ರಾಜ್ಯದ ಯಾತ್ರಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ರಾಜ್ಯ ಸರಕಾರದ ವತಿಯಿಂದ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಸಹಕಾರ ನೀಡಲಾಗುವುದು ಎಂದರು.

ಅಯೋಧ್ಯೆಯಲ್ಲಿ ಕರ್ನಾಟಕ ಛತ್ರ: ಕರ್ನಾಟಕ ರಾಜ್ಯದ ಯಾತ್ರಾರ್ಥಿಗಳಿಗೆ ಅನುಕೂಲಕ ಮಾಡಿಕೊಡುವ ನಿಟ್ಟಿನಲ್ಲಿ ಅಯೋಧ್ಯೆಯಲ್ಲಿ ಕರ್ನಾಟಕ ಛತ್ರ ನಿರ್ಮಾಣಕ್ಕೆ ಸ್ಥಳಾವಕಾಶ ನೀಡುವಂತೆ ಕೋರಿ ಉತ್ತರ ಪ್ರದೇಶದ ಅಧಿಕಾರಿಗಳೊಂದಿಗೆ ಪತ್ರವ್ಯವಹಾರ ನಡೆಸಲಾಗುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಉತ್ತರಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿನ ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ್‌ ಅವರೊಂದಿಗೆ ಈ ಬಗ್ಗೆ ಚರ್ಚಿಸಲಾಗುವುದು. ಒಟ್ಟಾರೆಯಾಗಿ ಹೊರ ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲೂ ನಮ್ಮ ರಾಜ್ಯದ ಜನರಿಗೆ ಅನುಕೂಲ ಮಾಡಿಕೊಡಲು ಎಲ್ಲಾ ರೀತಿಯ ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.

Advertisement

50 ಕೊಠಡಿಗಳ ನೂತನ ಕಟ್ಟಡ: 4 ಕೋಟಿ ರೂಪಾಯಿಗಳ ಅನುದಾನದಲ್ಲಿ 50 ಕೊಠಡಿಗಳ ಕರ್ನಾಟಕ ಛತ್ರ ನಿರ್ಮಾಣವಾಗಿದೆ. 40 ಡಿಲಕ್ಸ್‌ ಹಾಗೂ 10 ವಿಐಪಿ ಕೊಠಡಿಗಳಿದ್ದು, ಮುಜರಾಯಿ ಇಲಾಖೆಯ ವತಿಯಿಂದ ನೀಡಲಾಗಿರುವ 54 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಪಿಠೋಪಕರಣಗಳನ್ನು ಒದಗಿಸಲಾಗಿದೆ. ಛತ್ರಗಳ ಅಭಿವೃದ್ದಿಗೆ ಜುಲೈ 23, 2022 ರಂದು 4 ಕೋಟಿ ರೂಪಾಯಿಗಳ ಹೆಚ್ಚುವರಿ ಅನುದಾನ ಒದಗಿಸಲಾಗಿದ್ದು, ಸದ್ಯದಲ್ಲೇ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

ಕರ್ನಾಟಕ ರಾಜ್ಯದಿಂದಲೇ ಅತಿ ಹೆಚ್ಚು ಯಾತ್ರಾರ್ಥಿಗಳು ಆಗಮಿಸುವ ಮಂತ್ರಾಲಯಕ್ಕೆ ಕರ್ನಾಟಕ ಸರಕಾರ ಬಹಳಷ್ಟು ಸಹಕಾರ ನೀಡಿದೆ. 30 ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಕರ್ನಾಟಕ ಛತ್ರ ಶಿಥಿಲವಾಗಿತ್ತು. ಇದನ್ನು ಮನಗೊಂಡ ಕರ್ನಾಟಕ ಸರಕಾರ 4 ಕೋಟಿ ರೂಪಾಯಿಗಳ ವೆಚ್ಚದಲ್ಲಿ 50 ಕೊಠಡಿಗಳ ನೂತನ ಛತ್ರವನ್ನು ನಿರ್ಮಿಸಿದೆ. ಈ ಬಾರಿಯ ರಾಯರ ಆರಾಧನೆಯ ಸಂಧರ್ಭದಲ್ಲಿ ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ಆಗಮಿಸುವ ನಿರೀಕ್ಷೆಯಿದ್ದು, ನೂತನ ಕಟ್ಟಡದಿಂದ ಬಹಳಷ್ಟು ಅನುಕೂಲವಾಗಲಿದೆ ಎಂದು ಮಂತ್ರಾಲಯದ ಸುಭುದೇಂದ್ರ ತೀರ್ಥ ಪಾದಂಗಳವರು ಹೇಳಿದರು.

ಈ ಸಂಧರ್ಭದಲ್ಲಿ ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಾದ ರೋಹಿಣಿ ಸಿಂಧೂರಿ, ಮಂತ್ರಾಲಯ ಕರ್ನಾಟಕ ಛತ್ರದ ವ್ಯವಸ್ಥಾಪಕರಾದ ತ್ರಿವೇಣಿ ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next