Advertisement

ವಿವಿಧ ವಸತಿ ಯೋಜನೆಯಡಿ ಮನೆ ನಿರ್ಮಾಣ

11:37 AM Aug 31, 2019 | Team Udayavani |

ಹಾವೇರಿ: ವಿವಿಧ ವಸತಿ ಯೋಜನೆಯಡಿ ಮಂಜೂರಾದ ಮನೆಗಳನ್ನು ನೆರೆಯಿಂದ ನೆಲೆ ಕಳೆದುಕೊಂಡ ನಿರಾಶ್ರಿತರಿಗೆ ಆದ್ಯತೆ ಮೇರೆಗೆ ಕೊಡುವಂತೆ ಸರ್ಕಾರದಿಂದ ಆದೇಶ ಹೊರಡಿಸಲಾಗುವುದು ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

Advertisement

ಶುಕ್ರವಾರ ಜಿಲ್ಲಾಡಳಿತ ಭವನದಲ್ಲಿ ನಡೆಸಿದ ನೆರೆ ನಿರ್ವಹಣೆ ಕುರಿತು ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಬಸವ, ಅಂಬೇಡ್ಕರ್‌, ರಾಜೀವಗಾಂಧಿ ಸೇರಿದಂತೆ ವಿವಿಧ ವಸತಿ ಯೋಜನೆಯಡಿ ಸಾವಿರಾರು ಮನೆಗಳು ಮಂಜೂರಾತಿ ಹಂತದಲ್ಲಿವೆ. ಅಂಥ ಮನೆಗಳನ್ನು ನೆರೆ, ಅತಿವೃಷ್ಟಿ ನಿರಾಶ್ರಿತ ಕುಟುಂಬಗಳಿಗೆ ವಿಶೇಷ ಆದ್ಯತೆ ಮೇರೆಗೆ ಕೊಟ್ಟರೆ ಅಂಥವರಿಗೆ ಸೂಕ್ತ ಪರಿಹಾರ ಒದಗಿಸಿದಂತಾಗುತ್ತದೆ. ಈ ದಿಸೆಯಲ್ಲಿ ಆದೇಶ ಹೊರಡಿಸಲು ಸರ್ಕಾರ ಮಟ್ಟದಲ್ಲಿ ಚರ್ಚಿಸಿ ನಿರ್ದೇಶನ ನೀಡಲಾಗುವುದು ಎಂದರು.

ಅತಿವೃಷ್ಟಿಯ ತೀವ್ರತೆ ಮನವರಿಕೆ ಮಾಡಿಕೊಡಿ:

ಮುಖ್ಯಮಂತ್ರಿ ಬಿ.ಎಸ್‌. ಯೂಡಿಯೂರಪ್ಪ ಜಿಲ್ಲೆಯ ಅತಿವೃಷ್ಟಿ, ನೆರೆ ಪೀಡಿತ ಪ್ರದೇಶಗಳನ್ನು ಪರಿಶೀಲಿಸಲು ಆ. 31ರಂದು ಜಿಲ್ಲೆಗೆ ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ಅಧಿಕಾರಿಗಳು ಜಿಲ್ಲೆಯಲ್ಲಿ ಆಗಿರುವ ನೆರೆ ಹಾಗೂ ಅತಿವೃಷ್ಟಿಯ ತೀವ್ರತೆ ಮನವರಿಕೆ ಮಾಡಿಕೊಡುವ ಜತೆಗೆ ಎಷ್ಟು ಪ್ರಮಾಣದ ಹಾನಿಯಾಗಿದೆ. ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಲು ಎಷ್ಟು ಅನುದಾನ ಬೇಕಾಗುತ್ತದೆ. ಎಷ್ಟು ಗ್ರಾಮಗಳನ್ನು ಸ್ಥಳಾಂತರ ಮಾಡಬೇಕಾಗುತ್ತದೆ. ಎಷ್ಟು ಕಡೆ ತಡೆಗೋಡೆ ನಿರ್ಮಿಸಬೇಕಾಗುತ್ತದೆ. ಪರಿಹಾರ ಎಷ್ಟು ಕೊಡಬೇಕಾಗುತ್ತದೆ ಎಂಬುದನ್ನು ನಿಖರವಾಗಿ ತಿಳಿಸಬೇಕು ಎಂದು ನಿರ್ದೇಶನ ನೀಡಿದರು.

Advertisement

ಅಧಿಕಾರಿಗಳ ಮಧ್ಯೆ ಸಮನ್ವಯತೆ ಅಗತ್ಯ: ಮುಖ್ಯಮಂತ್ರಿಯವರ ಈ ಭೇಟಿ ಮೂಲಕ ಜಿಲ್ಲೆಗೆ ಇನ್ನಷ್ಟು ಹೆಚ್ಚಿನ ಅನುದಾನ ದೊರಕಿಸಿಕೊಳ್ಳುವ ರೀತಿಯಲ್ಲಿ ನಿಖರ ಹಾಗೂ ಸ್ಪಷ್ಟ ಮಾಹಿತಿಯನ್ನು ಅಧಿಕಾರಿಗಳು ಮುಖ್ಯಮಂತ್ರಿಯವರ ಎದುರು ತೆರೆದಿಡಬೇಕು. ನೆರೆ ಹಾನಿ ಕುರಿತ ಮಾಹಿತಿಯನ್ನು ಕಿಂಚಿತ್ತೂ ಲೋಪವಾಗದಂತೆ ಅಪ್‌ಲೋಡ್‌ ಮಾಡಬೇಕು. ಈ ಸಂದರ್ಭದಲ್ಲಿ ಮಾಹಿತಿ ಸಂಗ್ರಹಿಸಿದ ಅಧಿಕಾರಿಗಳು, ತಾಂತ್ರಿಕ ಅಧಿಕಾರಿಗಳು ಸಮನ್ವಯತೆ ಸಾಧಿಸಿ, ತಪ್ಪಾಗದಂತೆ ನೋಡಿಕೊಳ್ಳಬೇಕು. ಈ ಮಾಹಿತಿಯನ್ನು ಎರಡ್ಮೂರು ಹಂತದಲ್ಲಿ ಹಿರಿಯ ಅಧಿಕಾರಿಗಳು ಸಹ ಪರಿಶೀಲಿಸಿಯೇ ಮಾಹಿತಿ ರವಾನೆ ಮಾಡಬೇಕು ಎಂದು ಸೂಚನೆ ನೀಡಿದರು.

ಸರ್ಕಾರ ನೆರೆ ಪರಿಹಾರಕ್ಕಾಗಿ 20 ಕೋಟಿ ರೂ. ಬಿಡುಗಡೆ ಮಾಡಿದ್ದು ನೆರೆ ಪರಿಹಾರ ಕಾರ್ಯ ಯಾವ ಕಾರಣಕ್ಕೂ ನಿಲ್ಲಬಾರದು. ನಿರಂತರವಾಗಿ ನಡೆಯಬೇಕು. ಈ ಕಾರ್ಯದಲ್ಲಿ ಯಾವ ಅಧಿಕಾರಿಯೂ ನಿರ್ಲಕ್ಷ ್ಯ ತೋರಬಾರದು ಎಂದರು.

ಗೊಬ್ಬರ ತರಿಸಲು ಕ್ರಮ: ಜಿಲ್ಲೆಯಲ್ಲಿ ಯೂರಿಯಾ ಗೊಬ್ಬರ ಕೊರತೆ ಇದೆ ಎಂಬ ಬಗ್ಗೆ ಮಾಹಿತಿ ಬಂದಿದ್ದು, ಕೃಷಿ ಅಧಿಕಾರಿಗಳು ಈ ವಿಚಾರದಲ್ಲಿ ಉದಾಸೀನ ತೋರಬಾರದು. ಎಷ್ಟು ಬೇಡಿಕೆ ಇದೆ. ಎಷ್ಟು ದಾಸ್ತಾನಿದೆ ಹಾಗೂ ಎಷ್ಟು ಕೊರತೆ ಇದೆ ಎಂಬ ಮಾಹಿತಿ ಈಗಲೇ ನೀಡಿ. ಸಂಬಂಧಪಟ್ಟ ಇಲಾಖೆ, ಸಚಿವರೊಂದಿಗೆ ಮಾತನಾಡಿ ಗೊಬ್ಬರ ತರಿಸುವ ವ್ಯವಸ್ಥೆ ಮಾಡುವುದಾಗಿ ಸಚಿವರು ಭರವಸೆ ನೀಡಿದರು.

ಸಭೆಯಲ್ಲಿ ಶಾಸಕರಾದ ಸಿ.ಎಂ. ಉದಾಸಿ, ನೆಹರು ಓಲೇಕಾರ, ವಿರುಪಾಕ್ಷಪ್ಪ ಬಳ್ಳಾರಿ, ವಿ.ಪ. ಸದಸ್ಯ ಎಸ್‌.ವಿ. ಸಂಕನೂರ, ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಹಾಗೂ ಇತರ ಹಿರಿಯ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next