Advertisement

ಆರು ತಿಂಗಳಲ್ಲಿ ಕೊಡಗು ಸಂತ್ರಸ್ಥರಿಗೆ ಮನೆ ನಿರ್ಮಾಣ

12:28 PM Dec 07, 2018 | Team Udayavani |

ಬೆಂಗಳೂರು: ಅತಿವೃಷ್ಟಿಯಿಂದ ಮನೆ ಕಳೆದುಕೊಂಡು ನಿರಾಶ್ರಿತರಾದ ಕೊಡಗಿನ 840 ಕುಟುಂಬಗಳಿಗೆ ಗೃಹ ಮಂಡಳಿ ವತಿಯಿಂದ 6 ತಿಂಗಳಲ್ಲಿ ಹೊಸ ಮನೆ ಗಳನ್ನು ನಿರ್ಮಾಣ ಮಾಡಿಕೊಡಲಾಗುವುದು ಎಂದು ಪ್ರವಾಸೋದ್ಯಮ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್‌ ಹೇಳಿದ್ದಾರೆ.

Advertisement

ಈ ಕುರಿತು ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು ಜಿಲ್ಲೆಯಲ್ಲಿ ಪ್ರವಾಹದಿಂದ 20 ಜನ ಪ್ರಾಣ ಕಳೆದುಕೊಂಡಿದ್ದು, 144 ಜಾನುವಾರುಗಳು ಜೀವ ಕಳೆದುಕೊಂಡಿವೆ. 37,48 ಮನೆ ಗಳಿಗೆ ಹಾನಿ, ಕಾಫಿ, ತೋಟಗಾರಿಕೆಯ 1,306 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ
ಹಾನಿಯಾಗಿದ್ದು, ಒಟ್ಟು 1,928.29 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಹೇಳಿದರು.

ಕೊಡಗಿನಲ್ಲಿ ಪ್ರವಾಹ ಬಂದು 110 ದಿನಗಳಲ್ಲಿಯೇ ರಾಜ್ಯ ಸರ್ಕಾರ ಸಂತ್ರಸ್ಥರಿಗೆ ಹೊಸ ಮನೆಗಳನ್ನು ನಿರ್ಮಾಣ ಮಾಡಿ ಕೊಡಲು ತೀರ್ಮಾನಿಸಿದ್ದು, ಶುಕ್ರವಾರ ಭೂಮಿ ಪೂಜೆ ನೆರವೇರಿಸಲಾಗುತ್ತಿದೆ. ನಿರಾಶ್ರಿತರು ತಾವು ಬಯಸಿದ ಸ್ಥಳಗಳಲ್ಲಿ ಮನೆ ನಿರ್ಮಾಣ ಮಾಡಿಕೊಡಲು
ಸರ್ಕಾರ ತೀರ್ಮಾನಿಸಿದೆ. ಜಿಲ್ಲೆಯ ಐದು ಸ್ಥಳಗಳಲ್ಲಿ ಬಡಾವಣೆ ನಿರ್ಮಾಣ ಮಾಡಲು ಜಿಲ್ಲಾಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದು, 31.63 ಕೋಟಿ ರೂ. ವೆಚ್ಚದಲ್ಲಿ ಬಡಾವಣೆ, ರಸ್ತೆ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಲು ಹಣ ಮಂಜೂರು ಮಾಡಲಾಗಿದೆ.

ಮನೆ ಕಳೆದುಕೊಂಡಿರುವ ಪ್ರತಿ ಕುಟುಂಬಕ್ಕೂ ಒಂದು ನಿವೇಶನ ಹಾಗೂ 9.85 ಲಕ್ಷ ರೂ. ವೆಚ್ಚದಲ್ಲಿ ಡಬಲ್‌ ಬೆಡ್‌ ರೂಮ್‌ ಮನೆ ನಿರ್ಮಾಣ ಮಾಡಿಕೊಡಲಾಗುತ್ತಿದೆ. ಇಷ್ಟೊಂದು ದೊಡ್ಡ ಮಟ್ಟದ ಪರಿಹಾರ ನೀಡಿರುವುದು ದೇಶದಲ್ಲಿಯೇ ಇದೇ ಮೊದಲು ಎಂದು ಹೇಳಿದರು.

ರಾಜ್ಯ ಸರ್ಕಾರ ಪರಿಹಾರ ಕ್ರಮ ಕೈಗೊಂಡಿರುವ ಬಗ್ಗೆ ಕೆಲವರು ಆಕ್ಷೇಪ ಎತ್ತಿದ್ದಾರೆ. ಕೊಡಗಿನ ಪ್ರವಾಹ ಪೀಡಿತರಿಗೆ ಕೇಂದ್ರ ಸರ್ಕಾರ ಎಷ್ಟು ಪರಿಹಾರ ನೀಡಿದೆ ಎನ್ನುವುದನ್ನು ಬಿಜೆಪಿಯವರು ಗಮನಿಸ ಬೇಕು. ಮನೆಯ ಪೀಠೊಪಕರಣ ಹಾನಿಯಾಗಿರುವುದಕ್ಕೆ ತಲಾ 50 ಸಾವಿರ ರೂಪಾಯಿ ಪರಿಹಾರ ನೀಡಲಾಗಿದೆ. ಕೇಂದ್ರ ಸರ್ಕಾರದ ನಿಯಮದಂತೆ ಬೆಳೆ ಪರಿಹಾರ ನೀಡಿದರೆ ಸಾಲುವುದಿಲ್ಲ ಎಂದು ಹೆಚ್ಚಿನ ಪರಿಹಾರ ನೀಡಲು ಮುಖ್ಯ ಮಂತ್ರಿ ಕುಮಾರಸ್ವಾಮಿ ತೀರ್ಮಾನಿಸಿದ್ದಾರೆ. ಭೂ ಕುಸಿತದಿಂದ ತೊಂದರೆಗೊಳಗಾದವರಿಗೂ ಪರಿಹಾರ ನೀಡುವ ಕುರಿತು ಚರ್ಚೆ ನಡೆದಿದೆ ಎಂದು ಸಾ.ರಾ. ಮಹೇಶ್‌ ಹೇಳಿದರು.

Advertisement

ಇನ್ನೂ ಕೆಲವು ಜನರು ಮನೆ ಕಳೆದುಕೊಂಡಿರುವುದಾಗಿ ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಂಡಿದ್ದಾರೆ. ಈ ಕುರಿತಂತೆಯೂ ಪರಿಶೀಲನೆ ನಡೆಸಲಾಗುತ್ತಿದೆ. ಕೊಡಗಿನ ಪ್ರವಾಸೋದ್ಯಮ ಮತ್ತೆ ಚೇತರಿಸಿಕೊಳ್ಳು ತ್ತಿದ್ದು, ಜಿಲ್ಲೆಯ ಪ್ರವಾಸೋದ್ಯಮ ಉತ್ತೇ ಜನಕ್ಕೆ ಇಲಾಖೆ ವತಿಯಿಂದ ಯೋಜನೆಗಳನ್ನು ಹಾಕಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

85 ಕೋಟಿ ರೂ. ಅನುದಾನ ಬಿಡುಗಡೆ ಕೊಡಗಿನಲ್ಲಿ ಪ್ರವಾಹ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಲು ವಿವಿಧ  ಇಲಾಖೆಗಳಿಂದ 85 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ.ದಾನಿಗಳು ಕಳುಹಿಸಿರುವ ಆಹಾರ ಪದಾರ್ಥ ಹಾಗೂ ಇತರೆ ಸಾಮಗ್ರಿ ಸಂಗ್ರಹಕ್ಕೆ ದಾಸ್ತಾನು ಕೇಂದ್ರ ತೆರೆಯಲಾಗಿದೆ. ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ ಸಂಭವಿಸಬಹುದಾದ ಸ್ಥಳಗಳನ್ನು ಗುರುತಿಸುವುದು ಹಾನಿಯ ಬಗ್ಗೆ ಸಮಗ್ರ ವರದಿ ನೀಡಲು ತಜ್ಞರ ತಂಡ ರಚನೆ ಮಾಡಲಾಗಿದ್ದು, ಜನವರಿಯಲ್ಲಿ ಸಮಗ್ರ ವರದಿ ಸಲ್ಲಿಸಲಿದ್ದಾರೆ ಎಂದು ಸಚಿವ ಸಾ.ರಾ.ಮಹೇಶ್‌ ಹೇಳಿದರು.

ಜಿಆರ್‌ಐ ಹೈದರಾಬಾದ್‌ ಸಂಸ್ಥೆ ವತಿಯಿಂದ ಭೂ ಕಂಪನ ಮಾಪನ ಯಂತ್ರವನ್ನು ಜಿಲ್ಲೆಯ ಗಾಳಿಬೀಡು ಮತ್ತು ಭಾಗಮಂಡಲ ಗ್ರಾಮಗಳಲ್ಲಿ ಅಳವಡಿಸಲಾಗಿದ್ದು, ಮಾಹಿತಿ ಪಡೆಯಲಾಗುತ್ತಿದೆ. ನಿರಾಶ್ರಿತರ ಆಸಕ್ತಿಗೆ ಅನುಗುಣವಾಗಿ ಕರಕುಶಲ ವಸ್ತುಗಳ ತಯಾರಿಕೆಗೆ ತರಬೇತಿ ನೀಡಲಾಗುತ್ತಿದ್ದು, ಅವರು ತಯಾರಿಸಿದ ವಸ್ತುಗಳನ್ನು ಮಹಿಳಾ ಮತ್ತು ಮಕ್ಕಳ ಇಲಾಖೆ ಮೂಲಕ ಮಾರಾಟ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೇ ನಿರಾಶ್ರಿತರು ತಮ್ಮ ಸ್ವಗ್ರಾಮಗಳಿಗೆ ಹೋಗಿ ಬರಲು ಉಚಿತ ಬಸ್‌ ಪಾಸ್‌ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next