Advertisement

Minister Rahim Khan; ಖಾತಾ ಇಲ್ಲದೆ ಮನೆ, ಕಟ್ಟಡ ನಿರ್ಮಾಣ ಸಕ್ರಮ; ಒಂದು ಬಾರಿಗೆ ಅವಕಾಶ

12:46 AM Aug 18, 2024 | Team Udayavani |

ಮಣಿಪಾಲ: ಸ್ಥಳೀಯ ಸಂಸ್ಥೆ ಅಥವಾ ಪ್ರಾಧಿಕಾರದಿಂದ ಪರವಾನಿಗೆ ಪಡೆಯದೆ ಮನೆ ಅಥವಾ ವಾಣಿಜ್ಯ ಕಟ್ಟಡ ನಿರ್ಮಿಸಿಕೊಂಡಿರುವ ವರಿಗೆ ಒಂದು ಬಾರಿಯ ಅವಕಾಶದ ರೀತಿಯಲ್ಲಿ ಶುಲ್ಕ ಸಹಿತ ಪರವಾನಿಗೆ ಒದಗಿಸಲು ಸರಕಾರ ನಿರ್ಧರಿಸಿದೆ. ಮುಂದಿನ 15 ದಿನಗಳಲ್ಲಿ ಈ ಬಗ್ಗೆ ಸರಕಾರಿ ಆದೇಶ ಹೊರಬೀಳಲಿದೆ ಎಂದು ಪೌರಾಡಳಿತ ಸಚಿವ ರಹೀಂ ಖಾನ್‌ ಹೇಳಿದರು.

Advertisement

ಉಡುಪಿ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿ ನಡೆದ ತಮ್ಮ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಅನೇಕರು ಎ-ಖಾತಾ, ಬಿ-ಖಾತಾ ಇಲ್ಲದೆ, ಸ್ಥಳೀಯ ಸಂಸ್ಥೆಗಳ ಅನುಮತಿ ಪಡೆಯದೆ ಬಡಾವಣೆ ಅಥವಾ ಜಾಗದಲ್ಲಿ ಮನೆ, ಕಟ್ಟಡ ನಿರ್ಮಿಸಿಕೊಂಡಿದ್ದಾರೆ. ಇವರೆಲ್ಲರಿಗೂ ಖಾತಾ ಸಹಿತ ಅಗತ್ಯ ಮೂಲಸೌಕರ್ಯ ಪಡೆಯಲು ಅನುಕೂಲವಾಗುವಂತೆ ಒಂದು ಬಾರಿಗೆ ಸಕ್ರಮ ಮಾಡಿಕೊಡಲು ಸಚಿವ ಸಂಪುಟದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆದೇಶವೂ ಬರಲಿದೆ. ಈ ವ್ಯವಸ್ಥೆ ಈಗಾಗಲೇ ಬಿಬಿಎಂಪಿಯಲ್ಲಿ ಜಾರಿಯಲ್ಲಿದ್ದು, ರಾಜ್ಯದ ಎಲ್ಲ ಸ್ಥಳೀಯ ಸಂಸ್ಥೆಗೂ ಅನ್ವಯಿಸಲಿದ್ದೇವೆ.

ಅಧಿಕಾರಿಗಳು ಇದನ್ನು ಸಮರ್ಪಕವಾಗಿ ಅನುಷ್ಠಾನ ಮಾಡುವಂತೆ ಸೂಚನೆ ನೀಡಲಾಗುವುದು. ಕರಾವಳಿ ಭಾಗದ 9/11 ಹಕ್ಕುಪತ್ರ ಸಮಸ್ಯೆಗೂ ಇದರಿಂದ ಮುಕ್ತಿ ಸಿಗಲಿದೆ ಎಂದರು.

ಸ್ವಸಹಾಯ ಸಂಘಗಳ ಮೂಲಕ ತೆರಿಗೆ ಸಂಗ್ರಹ
ಗ್ರಾಮೀಣ ಭಾಗದಲ್ಲಿ ತೆರಿಗೆ ಸಂಗ್ರಹ ಕಷ್ಟವಾಗಿರುವುದರಿಂದ ಸ್ವಸಹಾಯ ಗುಂಪು ಗಳ ಮೂಲಕ ತೆರಿಗೆ ಸಂಗ್ರಹಕ್ಕೆ ಸೂಚನೆ ನೀಡಿದ್ದೇವೆ. ಸಂಗ್ರಹವಾದ ಕರದಲ್ಲಿ ನಿಗದಿತ ಮೊತ್ತವನ್ನು ಸಂಗ್ರಹಣ ಶುಲ್ಕವನ್ನು ಸಂಘಗಳಿಗೆ ನೀಡಲಾಗುತ್ತದೆ. ಇದರಿಂದ ಸಂಘಗಳ ಬಲವರ್ಧನೆಯೂ ಆಗಲಿದೆ ಮತ್ತು ಸ್ಥಳೀಯ ಸಂಸ್ಥೆಗಳ ಕರ ಸಂಗ್ರಹವೂ ವ್ಯವಸ್ಥಿತವಾಗಿ ನಡೆಯಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next