Advertisement

ಜಿಲ್ಲೆಯಲ್ಲಿ ಇಕೋ ಎಸ್‌ಟಿಪಿ ಘಟಕ ನಿರ್ಮಾಣ

10:40 AM Aug 14, 2023 | Team Udayavani |

ರಾಮನಗರ: ಜಿಲ್ಲೆಯ ಪ್ರಮುಖ ಧಾರ್ಮಿಕ ಕ್ಷೇತ್ರ ಎನಿಸಿರುವ ರೇವಣ್ಣ ಸಿದ್ದೇಶ್ವರ ಬೆಟ್ಟದ ತಪ್ಪಲಿನಲ್ಲಿ  ನೈಸರ್ಗಿಕ ವಿಧಾನದಿಂದ ಕೊಳಚೆ ನೀರನ್ನು ಶುದ್ಧೀಕರಿ ಸುವ ಇಕೋ ಎಸ್ಟಿಪಿ ಘಟಕ ನಿರ್ಮಾಣಗೊಳ್ಳುತ್ತಿದೆ.

Advertisement

ಹೌದು, ರಾಜ್ಯದಲ್ಲೇ ಇದೇ ಮೊದಲೆನಿಸುವ ವಿನೂತನ ತ್ಯಾಜ್ಯ ನೀರಿನ ಸಂಸ್ಕರಣಾ ಘಟಕ ಇದಾಗಿದ್ದು, ಹಸುವಿನ ಪಚನನ ಕ್ರಿಯೆಯನ್ನು ಆಧಾರವಾಗಿರಿಸಿಕೊಂಡು ನಿರ್ಮಿಸಿರುವ ಈ ಘಟಕ ಯಾವುದೇ ಯಂತ್ರದ ಬಳಕೆ ಇಲ್ಲದೆ, ಗುರುತ್ವ ಶಕ್ತಿಯನ್ನು ಆಧರಿಸಿ ನೈಸರ್ಗಿಕವಾಗಿ ಮಲಿನ ನೀರನ್ನು ಶುದ್ಧೀಕರಿಸಲಿರುವುದು ವಿಶೇಷ.

ಒನ್‌ಟೈಮ್‌ ಇನ್ವೆಷ್ಟ್ ಮೆಂಟ್‌:  ರಾಮನಗರ ತಾಲೂಕಿನ ಹುಲಿಕೆರೆ ಗುನ್ನೂರು ಗ್ರಾಪಂ ವ್ಯಾಪ್ತಿಯ ರೇವಣ್ಣ ಸಿದ್ದೇಶ್ವರಬೆಟ್ಟ ತಪ್ಪಲಿನಲ್ಲಿ ಸುಮಾರು 35 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಳುತ್ತಿರುವ ಇಕೋ ಎಸ್‌ಟಿಪಿ ಘಟಕ, ಶೂನ್ಯ ನಿರ್ವಹಣೆಯನ್ನು ಹೊಂದಿದೆ. ಒಂದು ಬಾರಿ ನಿರ್ಮಾಣ ಕಾರ್ಯ ಪೂರ್ಣಗೊಂಡ ಬಳಿಕ ಯಾವುದೇ ಯಂತ್ರ, ಇಂಧನ ಗಳ ಬಳಕೆಯಿಲ್ಲದೆ ನಿರಂತರವಾಗಿ ಮಲಿನ ನೀರನ್ನು ಬಳಕೆ ಯೋಗ್ಯ ನೀರಾಗಿ ಪರಿವರ್ತಿಸಲಿದೆ. ಇನ್ನು ಈ ಘಟಕ 35 ಸಾವಿರ ಲೀಟರ್‌ ಸಾಮರ್ಥ್ಯ ಹೊಂದಿದ್ದು, 35 ಸಾವಿರ ಲೀಟರ್‌ ಮಲಿನ ನೀರನ್ನು 3 ದಿನ(72 ತಾಸು) ಗಳಲ್ಲಿ ಶುದ್ಧೀಕರಿಸಿ ಕೊಡಲಿದೆ.

ಹಸುವಿನ ದೇಹದ ರೀತಿ ವಿನ್ಯಾಸ: ರಾಜ್ಯದಲ್ಲಿ ಇದೇ ಮೊದಲಬಾರಿಗೆ ನಿರ್ಮಾಣ ಮಾಡುತ್ತಿದೆ ಎನ್ನಲಾದ ಇಕೋ ಎಸ್‌ಟಿಪಿ ಘಟಕ ಹಸುವಿನ ದೇಹದ ಪಚನನ ಕ್ರಿಯೆಯ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದೆ. ಹಸು ಹೇಗೆ ಆಹಾರವನ್ನು ಸೇವಿಗೆ ಅದನ್ನು ವಿಸರ್ಜಿಸುತ್ತದೋ ಅದೇ ರೀತಿ ಘಟಕ ಮಲಿನ ನೀರನ್ನು ಶುದ್ಧ ನೀರಾಗಿ ಪರಿವರ್ತಿಸುತ್ತದೆ.

ನಾಲ್ಕು ಗುಂಡಿಗಳಿದ್ದು, ಮೂರು ಗುಂಡಿಗಳು ಭೂಮಿಯೊಳಗೆ ಇದ್ದರೇ, ಒಂದು ಮಾತ್ರ ಹೊರ ಭಾಗದಲ್ಲಿ ಕಾರ್ಯನಿರ್ವಹಿಸಲಿದೆ.  ಮೇಲ್ಭಾಗದ ಲ್ಲಿರುವ  ಗುಂಡಿಯ ಮೂಲಕ ಕೊಳಚೆ ನೀರನ್ನು ಘಟಕದ ಒಳಕ್ಕೆ ಹಾಯಿಸಲಾಗುತ್ತದೆ. ಮೊದಲನೆ ಹಂತದಲ್ಲಿ ನೀರನ್ನು ಸಂಗ್ರಹಿಸಿ ಅದರಲ್ಲಿನ ಭಾರವಾದ ತ್ಯಾಜ್ಯಗಳು ಕೆಳಭಾಗದಲ್ಲಿ ಸಂಗ್ರಹವಾಗುವಂತೆ ನೋಡಿಕೊಳ್ಳಲಾಗುತ್ತದೆ. ನಂತರ ನೀರಿನಲ್ಲಿರುವ ಹಗುರವಾದ ಕಲ್ಮಶಗಳು ಸೋಸಿಹೋಗುವಂತೆ ಮಾಡಲಾಗುವುದು. ಮೂರನೇ ಗುಂಡಿಯಲ್ಲಿ ನೀರಿನಲ್ಲಿನ ಹಾನಿಕಾರಿಯ ಬ್ಯಾಕ್ಟೀರಿಯಾ ಹಾಗೂ ಇನ್ನಿತರ ಅಳಿದುಳಿದ ಕಲ್ಮಶಗಳು ಸೋಸಿಹೋಗಲಿದ್ದು, ಈ ಎಲ್ಲಾ ಹಂತವನ್ನು ದಾಟಿನ ನಂತರ ಶುದ್ಧೀಕರಿಸಿದ ನೀರು ಹೊರಬರಲಿದೆ. ಹೊರಗೆ ಬಂದ ಸಂಸ್ಕರಿತ ನೀರನ್ನು  ಕೃಷಿ ಮತ್ತು ತೋಟ ಗಾರಿಕೆ ಚಟುವಟಿಕೆಗಳಿಗೆ ಬಳಕೆ ಮಾಡಬಹುದಾಗಿದೆ. ಈಘಟಕದಿಂದ ಹೊರಬರುವ ನೀರು ನೂರಕ್ಕೆ ನೂರಷ್ಟು ಬಳಕೆಗೆ ಯೋಗ್ಯವಾಗಿರುತ್ತದೆ ಎಂಬುದು ಪಂಚಾಯತ್‌ರಾಜ್‌ ಇಲಾಖೆ ಅಧಿಕಾರಿಗಳ ವಿವರಣೆಯಾಗಿದೆ.

Advertisement

ಈ ಘಟಕದಲ್ಲಿ ನೀರು ಒಂದು ಹಂತದಿಂದ ಮತ್ತೂಂದು ಹಂತಕ್ಕೆ ಗುರುತ್ವಾಕರ್ಷಣೆಯ ಮೂಲಕ ಹಾಯ್ದು ಹೋಗಲಿದ್ದು, ಇದಕ್ಕೆ ಯಾವುದೇ ಇಂಧನ ಶಕ್ತಿ ಬಳಕೆ ಮಾಡುವುದಿಲ್ಲ ವಾದ ಕಾರಣ ಪರಿಸರ ಸ್ನೇಹಿ ವಿಧಾನದಲ್ಲಿ ಸಂಸ್ಕರಣೆ ಗೊಳ್ಳಲಿದೆ.

ವಾಸನೆ ರಹಿತ, ಸುರಕ್ಷಿತ:

ಬೃಹತ್‌ ಇಕೋ ಎಸ್‌ಟಿಪಿ ಘಟಕ ನೂರಕ್ಕೆ ನೂರಷ್ಟು ಸುರಕ್ಷಿತವಾಗಿದ್ದು, ಈ ಘಟಕ ಭೂಮಿಯ ಒಳಭಾಗದಲ್ಲಿ ಕಾರ್ಯನಿರ್ವಹಿಸುವುದರಿಂದ ಹೊರಭಾಗಕ್ಕೆ ಯಾವುದೇ ವಾಸನೆ ಬರುವುದಿಲ್ಲ. ಇನ್ನು ಇದರ ಮೇಲ್ಭಾಗದಲ್ಲಿ ಉದ್ಯಾನವನ ನಿರ್ಮಿಸಲು ಪಂಚಾಯತ್‌ ರಾಜ್‌ ಇಲಾಖೆ ಉದ್ದೇಶಿಸಿದ್ದು, ಮೇಲ್ಭಾಗದಿಂದ ನೋಡುವವರಿಗೆ ಇಂತಹುದೊಂದು ಘಟಕ ಇದೆ ಎಂದು ಯಾರಿಗೂ ತಿಳಿಯುವುದಿಲ್ಲ. ಇನ್ನು ಸಂಪೂರ್ಣ ಮುಚ್ಚಿರುವ ಕಾರಣ ಇದು ಸುರಕ್ಷಿತವೂ ಆಗಿದೆ.

ನೈಸರ್ಗಿಕವಾಗಿ ಮಲಿನ ನೀರನ್ನು ಶುದ್ಧೀಕರಿಸುವ ಇಕೋ ಎಸ್‌ಟಿಪಿ ಘಟಕ ಮಾದರಿ ಘಟಕವಾಗಿದ್ದು, ಈ ಘಟಕದ ಕಾರ್ಯವೈಖರಿಯನ್ನು ಪರಿಗ ಣಿಸಿ, ಮುಂದಿನ ದಿನಗಳಲ್ಲಿ ಜಿಲ್ಲೆಯ ಇತ ರೆಡೆ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು.-ದಿಗ್ವಿಜಯ್‌ ಬೋಡ್ಕೆ, ಸಿಇಒ, ಜಿಪಂ, ರಾಮನಗರ.   

ಸು.ನಾ.ನಂದಕುಮಾರ್‌

 

Advertisement

Udayavani is now on Telegram. Click here to join our channel and stay updated with the latest news.

Next