Advertisement

ಬಹುಕಾಲದ ಬೇಡಿಕೆ ಈಡೇರಿಕೆ: ಮಣದೂರು ಹಾಣಜಿಗೆ ಕಾಲುವೆ ಸಹಿತ ಸೇತುವೆ ನಿರ್ಮಾಣ

08:47 AM Jan 12, 2022 | Team Udayavani |

ಶಿರಸಿ: ಶತಮಾನಗಳಾಚೆಯ‌ ಬೇಡಿಕೆಯಾಗಿದ್ದ ಶಿರಸಿ ತಾಲೂಕಿನ ಸಾಲಕಣಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಣದೂರು ಹಾಣಜಿಗೆ ಈಗ ಮೊದಲಿನ ಸಮಸ್ಯೆಗಳಿಲ್ಲ. ಮಳೆ ಬಂದರೆ,‌ಮಳೆಗಾಲ‌   ಎರಡು ತಿಂಗಳಾದರೂ‌ ರಸ್ತೆಯಲ್ಲಿ ನೀರು ಹರಿವ ತಾಪತ್ರಯ ಇಲ್ಲ!

Advertisement

ಏಕೆಂದರೆ, ಈಗ ಜಿಲ್ಲೆಯ ಮೊದಲ ಡೆಕ್ ಸ್ಲಾಬ್, ಆರ್ ಸಿಸಿ ಡ್ರೈನ್, ಕಾಂಕ್ರೀಟ್ ರಸ್ತೆ ಆಗಿದೆ.  ಹಾಗಾಗಿ‌ ಹಲವು ಗ್ರಾಮಗಳ‌ ಸಂಪರ್ಕ, ಪಕ್ಕದ ಶಾಲೆ, ಕಾಲೇಜು, ಸೊಸೈಟಿಗಳು‌ ಇನ್ನಷ್ಟು ಸಮೀಪ.

ಮಾದರಿ ಕಾಮಗಾರಿ:

ಹಾಗೆ ನೋಡಿದರೆ, ಈ‌ ಹಾಣಜಿ‌ ಸಮಸ್ಯೆಯೇ ವಿಶಿಷ್ಟ. ಎಲ್ಲ ಸರಕಾರಗಳು ಮಾಡೋಣ ಎನ್ನುತ್ತಿದ್ದರು‌. ಎರಡೂ ಕಡೆಯ ಗುಡ್ಡ, ನಡುವೆ ರಸ್ತೆ ಮೇಲೆ 100 ಮೀಟರ್ ದೂರ ನೀರೋ‌ನೀರು. ಓಮಿನಿ ತಂದರೂ ಪಕ್ಕಕ್ಕೆ ಒತ್ತುವಷ್ಟು‌ ಒತ್ತಡ ಇರುತ್ತಿತ್ತು.

ಈ‌‌ ಸಮಸ್ಯೆ ನೀಗಿಸಿದ್ದೇ ಈ ವಿಶಿಷ್ಟ ಸೇತುವೆ. ಈ ಮೂರೂ ಕಾಮಗಾರಿಗಳು ಬೇರೆ ಬೇರೆ ಅಲ್ಲ. ಎಲ್ಲವೂ ಒಂದೇ! ಮೂರು ಮಾದರಿಯ ಕೆಲಸದಿಂದ ಒಂದು ಸಮಸ್ಯೆ ಈಡೇರಿಸುವಂತೆ ಆಗಿದೆ.

Advertisement

ಹತ್ತಾರು ಗ್ರಾಮಕ್ಕೆ ಸಂಪರ್ಕ:

ಸಾಲಕಣಿಯಿಂದ ದೇವನಳ್ಳಿ, ಯಾಣ ಭಾಗಕ್ಕೆ ಸಂಪರ್ಕ ಕಲ್ಪಿಸುವ ಈ ಮಾರ್ಗ ಇರೋದು ೧೦.೬ ಕಿಮಿಯಷ್ಟು ದೂರ. ಆದರೆ, ಈ ರಸ್ತೆ ಅಭಿವೃದ್ದಿ ಆಗಬೇಕಿದ್ದರೆ ಈ ಹಾಣಜಿ ಸಮಸ್ಯೆ ಈಡೇರಲೇ ಬೇಕಿತ್ತು.

ಎರಡೂ ಕಡೆಯ ಗುಡ್ಡದ ತಗ್ಗಿನಲ್ಲಿ ಅಡಿಕೆ ತೋಟದ ನಡುವೆ ರಸ್ತೆ, ರಸ್ತೆ ಎಂದರೆ ಹಳ್ಳ. ಹಳ್ಳ ರಸ್ತೆ ಎರಡೂ ಒಂದೇ ಆಗಿದ್ದೇ ಸಮಸ್ಯೆಗೆ ಕಾರಣವಾಗಿತ್ತು. ನಿತ್ಯ ಐನೂರಕ್ಕೂ ಅಧಿಕ ವಾಹನ ಓಡಾಟ ಮಾಡುವ ದಾರಿಯಲ್ಲಿ ಮಳೆ ಬಂದರೆ ದಾಟುವಂತೆಯೇ ಇರಲಿಲ್ಲ!

ಸ್ಪೀಕರ್ ಜತೆಯಾದರು:

ಈ ಸಮಸ್ಯೆ ಇತ್ಯರ್ಥ ಮಾಡಿ,‌ದೇವನಳ್ಳಿ, ಸಾಲಕಣಿ ಜೋಡಿಸಲು ಸ್ಪೀಕರ್ ವಿಶ್ವೇಶ್ವರ ಹೆಗಡೆ‌ ಕಾಗೇರಿ ಹೆಗಲು ನೀಡಿದರು. ಇಲಾಖೆಯ ಅನುಮೋದನೆಯ ಜೊತೆಗೇ ಇಲ್ಲಿ‌ ಕಾಮಗಾರಿ ಆರಂಭಿಸಲೂ ಸೂಚಿಸಿದರು.

ಗುತ್ತಿಗೆದಾರ ರಮೇಶ ನಾಯಕ, ಅಧಿಕಾರಿಗಳಾದ ಕೃಷ್ಣಾ ರೆಡ್ಡಿ,‌ ಎಸ್ ಉಮೇಶ, ರಾಮಲಿಂಗೇಶ ಅವರ ತಂಡ‌ ಕೆಲಸ‌ ಆರಂಭಿಸಿತು. ಸ್ಥಳೀಯರ ವಿಶ್ವಾಸ, ಮಾರ್ಗದರ್ಶನದಲ್ಲಿ ಕೆಲಸ ಶುರುವಾಯಿತು. ಸ್ಥಳೀಯರಿಬ್ಬರು ಹೆಚ್ಚುವರಿ ಜಾಗವನ್ನೂ ನೀಡಿದರು. 1.20 ಮೀಟರ್ ಎತ್ತರ, 1.80 ಮೀಟರ್ ಅಗಲ, 125 ಮೀಟರ್ ಉದ್ದದ ಸೇತುವೆ, ಒಟ್ಟೂ 230 ಮೀ.ಉದ್ದದ ರಸ್ತೆ ನಿರ್ಮಾಣ ಆಯಿತು.

ಈ ಸೇತುವೆ ರಸ್ತೆ ವಿಶೇಷತೆ ಅಂದರೆ ರಸ್ತೆ ಅರ್ಧ ಪಾರ್ಶ್ವ ಹಾಗೂ ಉಳಿದರ್ಧ ಹಾಣಜಿಯ ನೀರು ಹೋಗುತ್ತದೆ. ಅದರ ಮೇಲೆ ಸ್ಲಾಬ್ ಹಾಕಿದ ಪರಿಣಾಮ  ಐದು ಕಡೆ ಕೆಳಗಿನ ಇಳಿಯಲು ಕಬ್ಬಿಣದ ಬಾಗಿಲೂ ಇಡಲಾಗಿದೆ. ಇಡೀ‌ ಕಾಮಗಾರಿ ಕೇವಲ ಆರು ತಿಂಗಳಲ್ಲಿ  ಮುಗಿದಿದೆ.

ಲೋಕಾರ್ಪಣೆಯೂ ಆಯ್ತು:

120 ಲಕ್ಷ ರೂ. ಮೊತ್ತದಲ್ಲಿ 5054 ಜಿಲ್ಲಾ ‌ಮುಖ್ಯ ರಸ್ತೆ ಹೆಡ್ ನಲ್ಲಿ ಕಾಮಗಾರಿ‌ ಮಾಡಲಾಗಿದೆ. ಮಂಗಳವಾರ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಉದ್ಘಾಟಿಸಿ ಲೋಕಾರ್ಪಣೆಗೊಳಿಸಿದರು.

ಈ ವೇಳೆ ಅಧಿಕಾರಿಗಳಾದ ಕೃಷ್ಣಾ ರೆಡ್ಡಿ, ಎಸ್.ಉಮೇಶ, ರಾಮಲಿಂಗ, ಪ್ರಮುಖರಾದ ನರಸಿಂಹ ಬಕ್ಕಳ, ಪಂಚಾಯತ್ ಅಧ್ಯಕ್ಷ ತಿಮ್ಮಯ್ಯ ಹೆಗಡೆ, ಜಿ.ಎನ್ ಹೆಗಡೆ‌ ಮುರೇಗಾರ, ರವಿ ಹಳದೋಟ ಇತರರು ಇದ್ದರು.

ಸೇತುವೆ‌ ಮೇಲೆ ಪೂಜೆ ಸಂಭ್ರಮ! :  ಮಂಗಳವಾರ ಸ್ಪೀಕರ್ ಕಾಗೇರಿ ಅವರು ಸೇತುವೆ ಉದ್ಘಾಟನೆ ನಡೆಸಲು ಆಗಮಿಸುವ ವೇಳೆಗೇ  ಗ್ರಾಮಸ್ಥರು ಸೇತುವೆ ಮೇಲೆ ಸತ್ಯಗಣಪತಿ‌ಕಥಾ ವೃತ ಕೂಡ ನಡೆಸಿದರು. ಗ್ರಾಮಸ್ಥರು ಸಂಭ್ರಮದಲ್ಲಿ ಪಾಲ್ಗೊಂಡಿದ್ದು, ಸವಿ ಭೋಜನ‌ ಕೂಡ ಸವಿದರು.

ಈ ಭಾಗದ‌ ಬಹುಕಾಲದ ಬೇಡಿಕೆ. ಜಿಲ್ಲೆಯಲ್ಲೇ ವಿಶಿಷ್ಟವಾಗಿ ನಡೆಸಲಾದ ಕಾಮಗಾರಿ. ನಿತ್ಯ ಸಾವಿರಾರು ಜನರಿಗೆ ಅನುಕೂಲ ಆಗಲಿದೆ. ಇನ್ನು ಈ ಮಾರ್ಗದಲ್ಲಿ ಬಾಕಿ ಉಳಿದ ಅಭಿವೃದ್ದಿ ಕೂಡ ಮಾಡಬೇಕಿದೆ. -ವಿಶ್ವೇಶ್ವರ ಹೆಗಡೆ ಕಾಗೇರಿ, ಸ್ಪೀಕರ್ 

 

-ರಾಘವೇಂದ್ರ ಬೆಟ್ಟಕೊಪ್ಪ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next