ಹೊಸದಿಲ್ಲಿ: ದೇಗುಲದಲ್ಲಿ ಪೂಜೆ ಹೇಗೆ ಮಾಡಬೇಕು, ತೆಂಗಿನಕಾಯಿ ಹೇಗೆ ಒಡೆಯಬೇಕು, ಹೇಗೆ ಆರತಿ ಮಾಡಬೇಕು ಎಂಬ ವಿಚಾರದಲ್ಲಿ ಕೋರ್ಟ್ ಮಧ್ಯಪ್ರವೇಶ ಮಾಡುವುದಿಲ್ಲ…
– ಹೀಗೆಂದು ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅವರನ್ನು ಒಳಗೊಂಡ ನ್ಯಾಯಪೀಠ ಮಂಗಳವಾರ ಅಭಿಪ್ರಾಯಪಟ್ಟಿದೆ.
ತಿರುಪತಿ ಶ್ರೀ ವೆಂಕಟೇಶ್ವರ ದೇಗುಲದಲ್ಲಿ ಕ್ರಮಬದ್ಧವಾಗಿ ಪೂಜೆ ನಡೆಯುತ್ತಿಲ್ಲ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಇದೇ ವಿಚಾರಕ್ಕೆ ಸಂಬಂಧಿಸಿ ಅರ್ಜಿದಾರ ಆಂಧ್ರಪ್ರದೇಶ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಅದು ಕೂಡ ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿತ್ತು.
ದೇಗುಲದ ಆಡಳಿತಾತ್ಮಕ ವಿಚಾರಗಳಲ್ಲಿ ಲೋಪ, ದೇವರ ದರ್ಶನದಲ್ಲಿ ತಾರತಮ್ಯ ಇದ್ದರೆ ಮಾತ್ರ ಕೋರ್ಟ್ ಮಧ್ಯಪ್ರವೇಶಿಸಲು ಸಾಧ್ಯ ಎಂದು ಹೇಳಿ ನ್ಯಾಯಪೀಠವು ಅರ್ಜಿಯನ್ನು ಪುರಸ್ಕರಿಸಲು ನಿರಾಕರಿಸಿತು.
ಇದನ್ನೂ ಓದಿ:ಭೂಮಿ ಮರಳಿಸಿ: ಅರಣ್ಯ ಇಲಾಖೆಗೆ ಸೂಚನೆ
ಇದರ ಹೊರತಾಗಿಯೂ ಅರ್ಜಿದಾರ ಶ್ರೀವಾರಿ ದಾದಾ ಸಲ್ಲಿಸಿದ ಅರ್ಜಿಗೆ ಸ್ಪಂದಿಸಿದ ನ್ಯಾಯಪೀಠವು, ಅರ್ಜಿದಾರರ ಪ್ರಶ್ನೆಗೆ ಏಕೆ ಸಮರ್ಪಕ ಉತ್ತರ ನೀಡಿಲ್ಲ ಎಂದು ತಿರುಪತಿ ತಿರುಮಲ ದೇವಸ್ಥಾನಮ್ಸ್ (ಟಿಟಿಡಿ)ನನ್ನು ಪ್ರಶ್ನಿಸಿತು. ನ್ಯಾಯಪೀಠಕ್ಕೆ ಸಲ್ಲಿಸಲಾಗಿರುವ ಅಫಿದಾವಿತ್‌ನಲ್ಲಿ ಎಲ್ಲ ಅಂಶಗಳನ್ನೂ ವಿವರಿಸಲಾಗಿದೆ ಎಂದು ಟಿಟಿಡಿ ಪರ ವಕೀಲರು ಅರಿಕೆ ಮಾಡಿಕೊಂಡರು. ಅಂತಿಮವಾಗಿ ಉತ್ತರಿಸಲು ನ್ಯಾಯಪೀಠವು ಟಿಟಿಡಿಗೆ ಎಂಟು ವಾರಗಳ ಕಾಲ ಅವಕಾಶ ನೀಡಿದೆ.