Advertisement

ಭಾರತ ಸಂವಿಧಾನ -ಪರಿಸರ ಸಂರಕ್ಷಣೆ

12:32 AM Jun 19, 2024 | Team Udayavani |

ನಮ್ಮ ವಿಶಾಲ ಭಾರತ ಉತ್ತರದಲ್ಲಿ ಹಿಮಗಿರಿ, ಪೂರ್ವ, ಪಶ್ಚಿಮದಿಂದ ಆವರಿಸಿಕೊಂಡ ಸಮುದ್ರ ಹಾಗೂ ದಕ್ಷಿಣದಿಂದ ಆವೃತ್ತವಾದ ಹಿಂದೂ ಮಹಾ ಸಾಗರದಿಂದ ಕೂಡಿದ ನಿಸರ್ಗ ರಮಣೀಯ ದೇವ ಭೂಮಿ. ಹಿಮಾಲಯದಿಂದ ಹುಟ್ಟಿ ಅಗಾಧ ಜೀವ ರಾಶಿಗಳಿಗೆ ಸಸ್ಯ ಸಾಮ್ರಾಜ್ಯಕ್ಕೆ ನೀರುಣಿಸುತ್ತಾ ಸಮುದ್ರ ಸೇರುವ ಉತ್ತರ ಭಾಗದ ಸಿಂಧೂ, ಜಮ್ಮುತಾವಿ, ರಾವಿಯಿಂದ ಹಿಡಿದು ಗಂಗಾ, ಯಮುನಾ, ಬ್ರಹ್ಮಪುತ್ರದಂತಹ ನೂರಾರು ಸಣ್ಣ ಹಾಗೂ ಬೃಹತ್‌ ನದಿಗಳು ಒಂದೆಡೆ, ವಿಂಧ್ಯಾ, ಸಾತು³ರ ಬೆಟ್ಟ, ಪಶ್ಚಿಮ ಹಾಗೂ ಪೂರ್ವ ಘಟ್ಟಗಳಲ್ಲಿ ಪುಟ್ಟ ಗಾತ್ರ ದಲ್ಲಿ ಹುಟ್ಟಿ ಸಮುದ್ರಗಳ ಒಡಲು ಸೇರುವ ಕೃಷ್ಣಾ, ಗೋದಾ ವರಿ, ಕಾವೇರಿ, ವೈಗೈ, ತಾಮ್ರ ಪರ್ಣಿಯ ವರೆಗಿನ ನದಿ, ಉಪ ನದಿಗಳ ನಿಸರ್ಗದತ್ತ ಸೌಂದರ್ಯದ ದಕ್ಷಿಣದ ನೆಲ ಹೊಂದಿದ ನಾಡು ನಮ್ಮದು “ಸಮುದ್ರ ವಸನೇ ದೇವಿ, ಪರ್ವತ ಸ್ತನ ಮಂಡಲೇ’ ಎಂಬುದಾಗಿ ಯುಗ ಯುಗಾಂತರಗಳಿದ ಸ್ತುತಿಸಲ್ಪಟ್ಟ ದೇಶ ನಮ್ಮದು. ಭಾರತ ಮಾತೆಯ ಹಸುರು-ಬಸಿರು ಹಾಗೂ ಪ್ರಕೃತಿ ದತ್ತ ಚೆಲುವನ್ನು ಯಥಾವತ್ತಾಗಿ ಉಳಿಸುವ ಹಾಗೂ ನಿಸರ್ಗದ ಸಂಪತ್ತನ್ನು ಉಳಿಸಿಕೊಳ್ಳುವಲ್ಲಿಯೂ ಸಂವಿ ಧಾನ ಜನಕರ ಆಶಯ.

Advertisement

ಪರಿಸರ ರಕ್ಷಣೆ ಎಲ್ಲರ ಜವಾಬ್ದಾರಿ

ಭಾರತ ಸಂವಿಧಾನ ತನ್ನ 42ನೇ ವಿಭಾಗ ರಾಜ್ಯ ನಿರ್ದೇಶಕ ತತ್ವಗಳಿಗೆ (Directive Principles of state Policy) ಮೀಸಲಾಗಿಟ್ಟಿದೆ. ಇಲ್ಲಿನ 47ನೇ ವಿಧಿ ಸಾರ್ವಜನಿಕ ಆರೋಗ್ಯ (public health)ವನ್ನು ಜೋಪಾನವಾಗಿ ಕಾಪಿಡುವ ಜವಾಬ್ದಾರಿಯನ್ನು ಸಮಗ್ರ ರಾಜ್ಯವ್ಯವಸ್ಥೆಗೆ (ಸಂವಿಧಾನದಲ್ಲಿ ‘state’ ಎಂಬುದಾಗಿ ಉಲ್ಲಖ) ವಹಿಸಿಕೊಟ್ಟಿದೆ. ತನ್ಮೂಲಕ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಸಂಪೂರ್ಣ ಪೂರಕ ಪರಿಸರವನ್ನು ಒದಗಿಸುವ ಹೊಣೆಯನ್ನು ಸರಕಾರೀ ವ್ಯವಸ್ಥೆಯ ಹೆಗಲೇರಿಸಿದೆ. ಸ್ವತ್ಛ ಪರಿಸರ, ಮಾಲಿನ್ಯ ರಹಿತ ಗಾಳಿ, ಶುದ್ಧ ಕುಡಿಯುವ ನೀರು, ಇವೆಲ್ಲವನ್ನೂ ಯಥಾವತ್ತಾಗಿ ಒದಗಿಸುವ ಕರ್ತವ್ಯ ಸರಕಾರಿ ವ್ಯವಸ್ಥೆಗೆ ನೀಡಲಾಗಿದೆ. ಇನ್ನೊಂದೆಡೆ ಬದುಕುವ ಹಕ್ಕು (Right to Life) ಎಂಬ 21ನೇ ವಿಧಿಯ ಮೂಲಭೂತ ಹಕ್ಕಿನ ವ್ಯಾಪ್ತಿಯನ್ನೂ ಸರ್ವೋನ್ನತ ನ್ಯಾಯಾಲಯ ಹಿರಿದುಗೊಳಿಸುತ್ತಾ “ಸುಯೋಗ್ಯ ಪರಿಸರ, ಸಂರಕ್ಷಿತ ನದಿಗಳು, ಅರಣ್ಯಗಳು, ಸಮುದ್ರ ಕಿನಾರೆ, ಸ್ವತ್ಛ ಗಾಳಿ..’ ಒಳಗೊಂಡಿದೆ ಎಂಬುದಾಗಿ ಉಲ್ಲೇಖೀಸಿದೆ. ಈ ತೆರನಾಗಿ ಸಾಂವಿಧಾನಿಕ ಆಶಯದ ಬೆಳಕಿನಲ್ಲಿ ಎಂ.ಸಿ. ಮೆಹ್ತಾ ಮೊಕದ್ದಮೆ (1997)ಯಂತಹ ಹತ್ತು ಹಲವು ಸಂದರ್ಭಗಳಲ್ಲಿ ಧೃಡೀಕರಿಸಿ ಸುಪ್ರೀಂ ಕೋರ್ಟ್‌ ಪರಿಸರ ನಾಶದ ವಿರುದ್ಧ ರಕ್ಷಣಾತ್ಮಕ ವ್ಯೂಹ ರಚಿಸಿದೆ.

1976ರ 42ನೇ ತಿದ್ದುಪಡಿಯ ಮೂಲಕ 48(ಎ) ಎಂಬ ನೂತನ ವಿಧಿ ಸೇರ್ಪಡೆಗೊಂಡಿತು. ತನ್ಮೂಲಕ “ಅರಣ್ಯ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ, ಅಂತೆಯೇ ಕಾಡು ಪ್ರಾಣಿಗಳನ್ನು ಉಳಿಸಿ ಬೆಳೆಸಲು ಸರಕಾರ (state) ಯತ್ನಿಸತಕ್ಕದ್ದು’ ಎಂಬ ಮಾರ್ಗಸೂಚಿಯನ್ನು  ನಮ್ಮ ಸಂವಿಧಾನದಲ್ಲಿ ಸ್ಪಷ್ಟವಾಗಿ ಪಡಿಮೂಡಿ ಸಲಾಯಿತು.  ತನ್ಮೂಲಕ ಬ್ರಿಟಿಷ್‌ ಶಾಹಿತ್ವದ ದಿನಗಳಲ್ಲಿ ಸ್ವತ್ಛಂದ ಬೇಟೆ ಆಡುವ ಶೋಕಿ ಹಾಗೂ ಕಾಡು ಪ್ರಾಣಿಗಳನ್ನು ಹಿಂಸಿಸುವ ಹಾಗೂ ಸಂತತಿ ನಾಶದ ಪಥವನ್ನು ಸಮಗ್ರವಾಗಿ ಇಲ್ಲವಾಗಿಸುವ ಯತ್ನಕ್ಕೆ ಕೈ ಹಾಕಿತು. ಇದೇ 42ನೇ ತಿದ್ದುಪಡಿ ಸೃಜಿಸಿದ ಐV  -ಎ. ವಿಭಾಗದ 51(ಎ)ಯ  ತುಂಬಿನಿಂತ 11 ಮೂಲ ಭೂತಕರ್ತವ್ಯಗಳಲ್ಲಿ ಒಂದು ನೇರವಾಗಿ ಪ್ರಾಕೃತಿಕ ಸಂರಕ್ಷಣೆಯನ್ನೇ ಎತ್ತಿ ಹಿಡಿಯುವಂತಹುದು. ಒಂದೆಡೆ ಪರಿಸರ ಸಂರಕ್ಷಣೆಗೆ ಸರಕಾರೀ ವ್ಯವಸ್ಥೆ ಯತ್ನಿಸುವಂತೆಯೇ ಇನ್ನೊಂದೆಡೆ ಸಮಸ್ತ ಪ್ರಜಾ ಸಮೂಹ ಈ ನಿಟ್ಟಿನಲ್ಲಿ ಪರಿಶ್ರಮ ವಹಿಸಬೇಕೆಂದು 51 (ಎ) ವಿಧಿಯ (ಜಿ) ಉಪವಿಧಿ ಸ್ಪಷ್ಟ ವಾಗಿ ಸಾರುತ್ತದೆ. “ಅರಣ್ಯ ಸಂರಕ್ಷಣೆ ಹಾಗೂ ಅಭಿವೃದ್ಧಿ, ಸರೋವರ, ನದಿಗಳ ಸಂರಕ್ಷಣೆ, ವನ್ಯಜೀವಿಗಳನ್ನು ಉಳಿಸುವಲ್ಲಿ’ ಪ್ರತೀ ನಾಗರಿಕನೂ ಕರ್ತವ್ಯ ಬದ್ಧನಾಗಬೇಕು ಎಂಬು ದಾಗಿ ಈ ಮೂಲಭೂತ ಕರ್ತವ್ಯ ಎಚ್ಚರಿಸುತ್ತದೆ.

ಹಲವು  ಕಾಯಿದೆ, ಕಾನೂನುಗಳ ಜಾರಿ

Advertisement

ನಮ್ಮ ಸಂವಿಧಾನದ ಉನ್ನತ ಆಶಯ ಪ್ರತಿಫ‌ಲಿಸುವಂತೆ ಪರಿಸರ ಸಂರಕ್ಷಣೆ ಸರಕಾರಿ ವ್ಯವಸ್ಥೆ ಹಾಗೂ ಸಾರ್ವಜನಿಕ ಜವಾಬ್ದಾರಿಯಾಗಿ ಮೂಡಿ ಬಂದಿದೆ. ಮಣ್ಣು, ನೀರು, ಗಾಳಿ, ಬೆಳಕು- ಇವೆಲ್ಲ ದೈವದತ್ತ. ನಮ್ಮ ಸಸ್ಯಶ್ಯಾಮಲೆ ಎನಿಸಿದ ಭಾರತದ ಪಾಲಿಗೆ ಇವೆಲ್ಲವೂ ಸಮೃದ್ಧವಾಗಿದೆ. ಅದರ ಸುಯೋಗ್ಯ ಬಳಕೆ, ಇತಿ ಮಿತಿ ಎಲ್ಲವನ್ನೂ ಯಥಾವತ್ತಾಗಿ ಬಳಸಿ, ನಾವೂ ಬೆಳೆಯಬೇಕು ಎನ್ನುವುದು ಸಂವಿಧಾನದ ಅಂತರ್ಗತ ವಾಣಿ. ಈ ಸಾಮೂಹಿಕ ಜವಾಬ್ದಾರಿಗೆ ಪೂರಕವಾದ ಅರಣ್ಯ ಸಂರಕ್ಷಣ ಕಾಯಿದೆ, ವನ್ಯಜೀವಿಗಳ ರಕ್ಷಣ ಕಾನೂನು. ಜಲಮಾಲಿನ್ಯದ ವಿರುದ್ಧ ಕಾಯಿದೆಗಳು, ಸ್ವತ್ಛಗಾಳಿಯ ಬಗೆಗೆ ಸರಕಾರಿ ಕಾನೂನುಗಳು ಸಾಕಷ್ಟು ಕೇಂದ್ರ ಹಾಗೂ ರಾಜ್ಯಗಳಿಂದ ಜಾರಿಗೆ ಬಂದಿದೆ. ಬ್ರಿಟಿಷ್‌ ಕಾಲದ 1860ರ  ಇಂಡಿಯನ್‌ ಪೀನಲ್‌ ಕೋಡ್‌ನ‌ ನೀರು ಸಂರಕ್ಷಣ ಭಾಗವನ್ನು, 1937ರ ಭಾರತ ಅರಣ್ಯ ಸಂರಕ್ಷಣ ಕಾಯಿದೆಯನ್ನು 1947ರ ಬಳಿಕವೂ ಮುಂದುವರಿಸಲಾಗಿದೆ. ಅದೇ ರೀತಿ 1972ರ ಪ್ರಾಣಿ ಸಂಕುಲ ರಕ್ಷಣ ಕಾಯಿದೆ, 1974ರ ನೀರು ಮಾಲಿನ್ಯ ತಡೆ ಹಾಗೂ ನಿಯಂತ್ರಣ ಕಾಯಿದೆ, 1981ರ ಗಾಳಿ (ನಿಯಂತ್ರಣ ಹಾಗೂ ಮಾಲಿನ್ಯ ತಡೆ) ಕಾಯಿದೆ, 1986 (ಪರಿಸರ ಸಂರಕ್ಷಣ ಕಾಯಿದೆ)- ಇವೆಲ್ಲ ಈ ದಿಕ್ಕಿನಲ್ಲಿ ಭಾರತದ ಸುಂದರ ಪ್ರಗತಿಪರ ಹೆಜ್ಜೆಗಳು. ಅದೇ ರೀತಿ ರಾಷ್ಟ್ರೀಯ ಉದ್ಯಾನಗಳು (National Parks) ಮೀಸಲು ಕಾಡುಗಳು(Reserve Forests), ರಕ್ಷಿತ ಅರಣ್ಯಗಳು (Protected Forests) ಹಾಗೂ ಅಭಯಾರಣ್ಯಗಳು (Sanctuaries). ಹೀಗೆ ನಾಲ್ಕು ವಿಧಗಳಲ್ಲಿ “ಕಾಡು ಉಳಿಸಿ, ನಾಡು ಬೆಳೆಸಿ’ ಯೋಚನೆಗಳು ಯೋಜನೆ ಗಳಾಗಿ ಹೊರ ಹೊಮ್ಮಿವೆ.

ಸಾರ್ವಜನಿಕರೆನಿಸಿದ ನಮ್ಮಲ್ಲಿಯೂ ಪರಿಸರ ಉಳಿಸುವಲ್ಲಿ ಪರಿಜ್ಞಾನ ಹಾಗೂ ಕಾರ್ಯಕ್ಷಮತೆ ಅತ್ಯಂತ ಪ್ರಾಮುಖ್ಯ. ಎಲ್ಲೆಂದರಲ್ಲಿ ಕಸ ಎಸೆದು ಮಾಲಿನ್ಯಗೊಳಿಸುವಿಕೆ, ಶಬ್ದಮಾಲಿನ್ಯ, ಹೊಗೆ ಉಗುಳುವ ಯಂತ್ರಗಳು ಹಾಗೂ ವಾಹನಗಳ ಮೂಲಕ ವಾಯುಮಾಲಿನ್ಯ ಮರಗಳನ್ನು ಅಗಾಧವಾಗಿ ಉರುಳಿಸಿ, ಹಸುರು-ಉಸಿರನ್ನು ಇಲ್ಲವಾಗಿಸುವಿಕೆ ಸಮುದ್ರ ಕಿನಾರೆಯನ್ನು ಮಲಿನಗೊಳಿಸುವಿಕೆ- ಹೀಗೆ ಮಾನವ ನಿರ್ಮಿತ “ಅಪರಾಧ’ಗಳಿಗೆ ವಿದಾಯ ಹೇಳಬೇಕಾಗಿದೆ. ಈ ನಮ್ಮ ಚೆಲುವ ಕನ್ನಡ ನಾಡು ಹಾಗೂ ವಿಶಾಲ ಭಾರತ ಮಾತ್ರವಲ್ಲ, ತಾಪಮಾನ ಏರುತ್ತಲೇ ಇರುವ  ಜಾಗತಿಕ ಪರಿಸರದ ಬಗೆಗೂ ಎಚ್ಚರ ವಹಿಸುವಿಕೆ ಇಂದಿನ ಹಾಗೂ ಮುಂದಿನ ಆವಶ್ಯಕತೆ.

ಡಾ| ಪಿ.ಅನಂತಕೃಷ್ಣ ಭಟ್‌, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next