Advertisement

ರಾಜ್ಯದ ಸರ್ಕಾರಿ ನೌಕರ ವರ್ಗಕ್ಕೆ ಸಿಹಿ ಸುದ್ದಿ ಕೊಟ್ಟ ಸಿಎಂ ಬೊಮ್ಮಾಯಿ

08:33 PM Sep 06, 2022 | Team Udayavani |

ಬೆಂಗಳೂರು: ರಾಜ್ಯದ ಸರ್ಕಾರಿ ನೌಕರ ವರ್ಗಕ್ಕೆ ಸಿಹಿ ಸುದ್ದಿ ಕೊಟ್ಟಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸರ್ಕಾರಿ ನೌಕರರಿಗೆ ವೇತನ ಮತ್ತಿತರ ಭತ್ಯೆಗಳನ್ನು ಪರಿಷ್ಕರಿಸಲು ಇದೇ ಅಕ್ಟೋಬರ್‌ ತಿಂಗಳಲ್ಲಿ ಏಳನೇ ವೇತನ ಆಯೋಗವನ್ನು ರಚಿಸಲಾಗುವುದು ಎಂದು ಘೋಷಿಸಿದ್ದಾರೆ.

Advertisement

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಹಯೋಗದಲ್ಲಿ ಮಂಗಳವಾರ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಆಯೋಜಿಸಲಾಗಿದ್ದ ಪ್ರಥಮ ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಮತ್ತು ರಾಜ್ಯಮಟ್ಟದ “ಸರ್ವೋತ್ತಮ ಸೇವಾ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಮುಖ್ಯಮಂತ್ರಿಯವರು ಈ ಘೋಷಣೆ ಮಾಡಿದರು.

ಸರ್ಕಾರಿ ನೌಕರರ ನ್ಯಾಯಯುತ ಬೇಡಿಕೆಗಳ ಬಗ್ಗೆ ಸರ್ಕಾರ ಯಾವತ್ತೂ ಸಕಾರಾತ್ಮಕ ಸ್ಪಂದನೆ ಹೊಂದಿದೆ. ಈಗಾಗಲೇ ಸರ್ಕಾರಿ ನೌಕರರಿಗೆ ಹಲವು ಯೋಜನೆ, ಸೌಲಭ್ಯಗಳನ್ನು ಜಾರಿಗೆ ತರಲಾಗಿದೆ. ಆರೋಗ್ಯ ಸಂಜೀವಿನಿ ಯೋಜನೆ ಮಾಡಿದ್ದೇವೆ. ವೇತನ-ಭತ್ಯೆಗಳ ಪರಿಷ್ಕರಣೆ ಸದ್ಯದಲ್ಲೇ ಆಗಲಿದೆ. ಅದಕ್ಕಾಗಿ ಅಕ್ಟೋಬರ್‌ನಲ್ಲಿ ಏಳನೇ ವೇತನ ಆಯೋಗ ರಚಿಸಲಾಗುವುದು ಎಂದು ಸಿಎಂ ಭರವಸೆ ನೀಡಿದರು.

ಕರ್ನಾಟಕ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌.ಷಡಾಕ್ಷರಿ ಮಾತನಾಡಿ, ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ರಾಜ್ಯ ಸರ್ಕಾರಿ ನೌಕರರಿಗೆ ಅನುಕೂಲವಾಗುವ 19 ಆದೇಶಗಳನ್ನು ಹೊರಡಿಸಿದ್ದಾರೆ. ಕೇಂದ್ರ ಸರ್ಕಾರದ ನಾಗರಿಕ ಸೇವಾ ದಿನಾಚರಣೆ ಹೊರತುಪಡಿಸಿದರೆ ಬೇರಾವುದೇ ರಾಜ್ಯ ಸರ್ಕಾರ ತನ್ನ ನೌಕರರ ದಿನಾಚರಣೆ ಆಚರಿಸುತ್ತಿರುವುದು ನಮ್ಮ ಕರ್ನಾಟಕದಲ್ಲಿ ಮಾತ್ರ ಎಂದರು.

ಅಲ್ಲದೆ, ಕೂಡಲೇ ಏಳನೇ ವೇತನ ಆಯೋಗವನ್ನು ಘೋಷಿಸಿ ರಾಜ್ಯ ಸರ್ಕಾರಿ ನೌಕರರಿಗೆ ಮತ್ತು ಅವರ ಕುಟುಂಬದ ಎಲ್ಲಾ ಸದಸ್ಯರಿಗೆ ನೆರವಾಗುವಂತೆ ಹಾಗೂ ಕೊಡುಗೆ ಆಧಾರಿತ ನೂತನ ಪಿಂಚಣಿ ಯೋಜನೆ ರದ್ದು ಪಡಿಸಿ ಹಳೆಯ ಪಿಂಚಣಿ ಯೋಜನೆಯನ್ನು ಅನುಷ್ಠಾನಗೊಳಿಸಿ ಹೊಸ ಪೀಳಿಗೆಯ ಎರಡೂವರೆ ಲಕ್ಷ ನೌಕರರ ಬಾಳಲ್ಲಿ ಬೆಳಕು ಮೂಡಿಸುವಂತೆ ಸಿ.ಎಸ್‌.ಷಡಾಕ್ಷರಿ ಅವರು ಮುಖ್ಯಮಂತ್ರಿಯವರಲ್ಲಿ ಬೇಡಿಕೆ ಇಟ್ಟರು. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಯವರು ಅಕ್ಟೋಬರ್‌ನಲ್ಲಿ 7ನೇ ವೇತನ ಆಯೋಗ ರಚಿಸುವುದಾಗಿ ಭರವಸೆ ಕೊಟ್ಟರು.

Advertisement

ಆತ್ಮಸಾಕ್ಷಿಗೆ ತಕ್ಕಂತೆ ಕೆಲಸ ಮಾಡಿ: ಇದಕ್ಕೂ ಮೊದಲು ಮಾತನಾಡಿದ ಮುಖ್ಯಮಂತ್ರಿಗಳು, ಸರ್ಕಾರಿ ನೌಕರರು ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಬೇಕು. ಆಗ ಈ ರಾಜ್ಯ ಸುಭಿಕ್ಷವಾಗಲು ಸಾಧ್ಯ. ಪ್ರಜಾಪ್ರಭುತ್ವದಲ್ಲಿ ಕಾರ್ಯಾಂಗ ಪಾತ್ರ ಬಹಳ ಪ್ರಮುಖವಾದದ್ದು. ಕಾರ್ಯಾಂಗ ಚೆನ್ನಾಗಿ ಕೆಲಸ ಮಾಡಿದರೆ ನಾಡಿನ ಅಭಿವೃದ್ಧಿ ಆಗುತ್ತದೆ ಎಂದರು.

ಸರ್ವೋತ್ತಮ ಪ್ರಶಸ್ತಿ ಪ್ರದಾನ: ಇದೇ ವೇಳೆ ಮುಖ್ಯಮಂತ್ರಿಯವರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಜಂಟಿ ನಿರ್ದೇಶಕ ಡಿ.ಪಿ.ಮುರುಳೀಧರ ಸೇರಿ ವಿವಿಧ ಇಲಾಖೆಗಳ 30 ಸರ್ಕಾರಿ ನೌಕರರಿಗೆ ತಲಾ ಐವತ್ತು ಸಾವಿರ ರೂ.ನಗದು ಒಳಗೊಂಡ ರಾಜ್ಯ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಮಾಡಿದರು. ಜೊತೆಗೆ ಆರೋಗ್ಯ ಸಂಜೀವಿನಿ ನಗದು ರಹಿತ ವೈದ್ಯಕೀಯ ಸೇವಾ ಯೋಜನೆಗೆ ಚಾಲನೆ ನೀಡಿದರು. ಪ್ರಶಸ್ತಿ ಪುರಸ್ಕೃತರ ಪರವಾಗಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಸಂಪುಟ ಶಾಖೆಯ ಉಪ ಕಾರ್ಯದರ್ಶಿ ಆರ್‌.ಚಂದ್ರಶೇಖರ್‌ ಅವರು ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಆಡಳಿತ ಸುಧಾರಣಾ ವಿಭಾಗದ ಅಧೀನ ಕಾರ್ಯದರ್ಶಿ ಬಿ.ಎಸ್‌.ಲಕ್ಷ್ಮಣ್‌ ಅವರನ್ನು ಮುಖ್ಯಮಂತ್ರಿ ಗೌರವಿಸಿದರು.

ಸಮಾರಂಭದಲ್ಲಿ ಕಂದಾಯ ಸಚಿವ ಆರ್‌.ಅಶೋಕ್‌, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್‌. ಮಂಜುನಾಥ ಪ್ರಸಾದ್‌, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕಾರ್ಯದರ್ಶಿ ಪಿ. ಹೇಮಲತಾ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌. ಷಡಾಕ್ಷರಿ ಉಪಸ್ಥಿತರಿದ್ದರು.

ಗೋರಕ್ಷಣೆಗೆ ಮನವಿ
ಸರ್ಕಾರಿ ನೌಕರರು, ವಿಶೇಷವಾಗಿ ಪತ್ರಾಂಕಿತ ಎ ಮತ್ತು ಬಿ ಗುಂಪಿನ ನೌಕರರು ಪುಣ್ಯ ಕೋಟಿ ಯೋಜನೆಯಡಿ 11 ಸಾವಿರ ರೂಪಾಯಿ ನೀಡಿ, ಗೋವುಗಳನ್ನು ದತ್ತು ಪಡೆದು, ಗೋ ಸಂರಕ್ಷಣೆ ಮಾಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇದೇ ವೇಳೆ ಮನವಿ ಮಾಡಿದರು.

ಸಂಘದ ಸ್ವಾಗತ
ಸರ್ಕಾರಿ ನೌಕರರ ವೇತನ ಮತ್ತು ಭತ್ಯೆಗಳ ಪರಿಷ್ಕರಣೆಗೆ ಅಕ್ಟೋಬರ್‌ ತಿಂಗಳಲ್ಲಿ ಏಳನೇ ವೇತನ ಆಯೋಗ ರಚಿಸುವುದಾಗಿ ಘೋಷಿಸಿದ ಮುಖ್ಯಮಂತ್ರಿಯವರ ಹೇಳಿಕೆಯನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌.ಷಡಾಕ್ಷರಿ ಅವರು ಸ್ವಾಗತಿಸಿ, ಮುಖ್ಯಮಂತ್ರಿಯವರಿಗೆ ಧನ್ಯವಾದ ಅರ್ಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next