ಕಲಘಟಗಿ: ಪ್ರಜಾರಾಜ್ಯದ ಮುಖೇನ ಯಾವೊಂದೂ ರಾಷ್ಟ್ರವ್ಯಾಪಿ ದಂಗೆ ಹಾಗೂ ಸೈನ್ಯ ಕ್ರಾಂತಿಗೆ ಅವಕಾಶ ನೀಡದೇ ಸಂವಿಧಾನ ಬದ್ಧವಾಗಿ ನಡೆಸುವ ಬಹುದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ನಮ್ಮದಾಗಿದೆ ಎಂದು ಶಾಸಕ ಸಿ.ಎಂ. ನಿಂಬಣ್ಣವರ ಹೇಳಿದರು.
ಪಟ್ಟಣದ ಗುಡ್ ನ್ಯೂಸ್ ಸಂಸ್ಥೆಯ ಮೈದಾನದಲ್ಲಿ ಜರುಗಿದ ಸಾರ್ವಜನಿಕ ಗಣರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಷ್ಟ್ರೀಯ ಎಲ್ಲ ಸಮಸ್ಯೆಗಳಿಗೂ ಪರಿಹಾರ ಒದಗಿಸುವ ಅತಿದೊಡ್ಡ ಲಿಖೀತ ಸಂವಿಧಾನ ನಮ್ಮದಾಗಿದೆ. ಸರ್ವರಿಗೂ ಸಮಾನತೆಯಿಂದ ಬಾಳುವ ಹಕ್ಕುಗಳ ಜೊತೆಗೆ ಕರ್ತವ್ಯವನ್ನೂ ನೀಡಿದ್ದು ರಾಷ್ಟ್ರವ್ಯಾಪಿಯಾಗಿ ಎಲ್ಲರೂ ಭಾವೈಕ್ಯತೆಯಿಂದ ಬಾಳುವಂತಾಗಿದೆ ಎಂದರು.
ತಹಶೀಲ್ದಾರ್ ಯಲ್ಲಪ್ಪ ಗೊಣೆಣ್ಣನವರ ಧ್ವಜಾರೋಹಣ ನೆರವೇರಿಸಿದರು. ಪ್ರತಿವರ್ಷ ಪಟ್ಟಣದ ಮಧ್ಯವರ್ತಿಯಲ್ಲಿನ ಮಾದರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಆಚರಿಸುತ್ತಿದ್ದ ಸಾರ್ವಜನಿಕ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಈ ಬಾರಿ ಗುಡ್ನ್ಯೂಸ್ ಸಂಸ್ಥೆಯ ಮೈದಾನದಲ್ಲಿ ಆಯೋಜಿಸಲಾಗಿತ್ತು.
ಶಾಸಕ ಸಿ.ಎಂ. ನಿಂಬಣ್ಣವರ, ತಹಶೀಲ್ದಾರ್ ಯಲ್ಲಪ್ಪ ಗೊಣೆಣ್ಣನವರ, ಉಮಾದೇವಿ ತೆರೆದ ಜೀಪಿನಲ್ಲಿ ಸಂಚರಿಸಿ ಗೌರವ ವಂದನೆ ಸ್ವೀಕರಿಸಿದರು. ಪಥಸಂಚಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ಸರ್ಕಾರಿ ಬಾಲಕಿಯರ ಪ್ರೌಢಶಾಲಾ ವಿದ್ಯಾರ್ಥಿಗಳು ಸಂಗೀತ ಶಿಕ್ಷಕ ಗೋಪಾಲ ಭಾಗವತ ಅವರೊಡಗೂಡಿ ನಾಡಗೀತೆ ಹಾಗೂ ರೈತಗೀತೆ ಪ್ರಸ್ತುತಪಡಿಸಿದರು. ಸಿಪಿಐ ಶ್ರೀಶೈಲ ಕೌಜಲಗಿ, ತಾಪಂ ಇಒ ಶಿವಪುತ್ರಪ್ಪ ಮಠಪತಿ, ಪಪಂ ಮುಖ್ಯಾಧಿಕಾರಿ ವೈ.ಜಿ. ಗದ್ದಿಗೌಡರ ಇನ್ನಿತರರಿದ್ದರು.