ಬೆಂಗಳೂರು: ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧ ನಿರ್ಮಾಣವಾಗಿ 60 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅಕ್ಟೋಬರ್ 6 ಮತ್ತು 7 ರಂದು ಎರಡು ದಿನಗಳ ವಿಶೇಷ ಅಧಿವೇಶನ ನಡೆಸಲು ತೀರ್ಮಾನಿಸಿದೆ. ಈ ಕುರಿತು ಈಗಾಗಲೇ ಪೂರ್ವ ಸಿದ್ಧತೆ ಕಾರ್ಯಗಳು ನಡೆಯುತ್ತಿವೆ.
ಅಕ್ಟೋಬರ್ 6ರಂದು ಮೊದಲ ದಿನ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡುವ ಕಾರ್ಯಕ್ರಮವಿದೆ. ಅ. 7ರಂದು ವಿಧಾನಸಭೆ ನಿರ್ಮಾಣ ಹಾಗೂ ಇಲ್ಲಿಯವರೆಗೂ ನಡೆದು ಬಂದ ದಾರಿಯ ಕುರಿತು ಖ್ಯಾತ ಚಲನಚಿತ್ರ ನಿರ್ದೇಶಕರಾರ ಗಿರೀಶ್ ಕಾಸರವಳ್ಳಿ ಹಾಗೂ ಟಿ.ಎನ್ ಸೀತಾರಾಮ್ ಅವರು ಸಿದ್ಧಪಡಿಸಿರುವ ಸಾಕ್ಷ್ಯಚಿತ್ರಗಳ ಪ್ರದರ್ಶನ ನಡೆಯಲಿದೆ. ಇಡೀ ದಿನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದು ವಿಧಾನಸಭೆಯ ಸಚಿವಾಲಯದ ಮೂಲಗಳು ತಿಳಿಸಿವೆ.
ವಿಶೇಷ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡುವಂತೆ ರಾಷ್ಟ್ರಪತಿಗೆ ಪತ್ರ ಬರೆಯಲಾಗಿದೆ. ಬುಧವಾರ ಅಧಿವೇಶನದ ಕಾರ್ಯ ಕಲಾಪಗಳ ಕುರಿತು ಅಂತಿಮ ನಿರ್ಧಾರ ತೆಗೆದುಕೊಂಡು, ರಾಷ್ಟ್ರಪತಿಯವರನ್ನು ಅಧಿಕೃತವಾಗಿ ಭೇಟಿ ಮಾಡಲು ವಿಧಾನಸಭೆ ಅಧ್ಯಕ್ಷ ಕೆ.ಬಿ.ಕೋಳಿವಾಡ ಹಾಗೂ ವಿಧಾನ ಪರಿಷತ್ ಸಭಾಪತಿ ಶಂಕರಮೂರ್ತಿ ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
ವಿಧೇಯಕಗಳ ಚರ್ಚೆಗೆ ಬೇಡಿಕೆ: ಈಗಾಗಲೇ ಎಸ್ಸಿ, ಎಸ್ಟಿ ಸಮುದಾಯದ ನೌಕರರ ಬಡ್ತಿ ಮೀಸಲಾತಿ ಗೊಂದಲ ನಿವಾರಣೆಗೆ ವಿಶೇಷ ಕಾನೂನು ರೂಪಿಸಲು ವಿಶೇಷ ಅಧಿವೇಶನ ಕರೆಯಬೇಕೆಂಬ ಬೇಡಿಕೆ ಇದೆ. ಅಲ್ಲದೇ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ವಿಧೇಯಕ ಜಾರಿಗೊಳಿಸುವ
ಕುರಿತಂತೆಯೂ ವಿಶೇಷ ಅಧಿವೇಶನ ಕರೆಯಬೇಕೆಂದು ಆರೋಗ್ಯ ಸಚಿವ ರಮೇಶ್ ಕುಮಾರ್ ಮುಖ್ಯಮಂತ್ರಿಗೆ ಮನವಿ ಮಾಡಿದ್ದರು. ಆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ, ಅಧಿವೇಶನ ವಿಸ್ತರಿಸುವ ಕುರಿತಂತೆಯೂ ಬುಧವಾರದ ಸಭೆಯಲ್ಲಿ ಚರ್ಚೆ ನಡೆಸಲಾಗುವುದು ಎಂದು ತಿಳಿದು ಬಂದಿದೆ.