Advertisement

ಕಾಡಿನಲ್ಲಿ ಮಂಗಗಳ ನಿರಂತರ ಸಾವು

02:30 PM Dec 26, 2018 | |

ಸಾಗರ: ತಾಲೂಕಿನ ಅರಳಗೋಡು ಗ್ರಾಪಂ ವ್ಯಾಪ್ತಿಯ ಕಾಡಿನಲ್ಲಿ ನಿರಂತರವಾಗಿ ಮಂಗಗಳು ಸಾಯುತ್ತಿರುವ ಪ್ರಕರಣಗಳು ನಡೆಯುತ್ತಿದ್ದು ಸ್ಥಳೀಯ ಜನರನ್ನು ಆತಂಕದ ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ. ಆದರೆ ಶಾಸಕ ಎಚ್‌. ಹಾಲಪ್ಪ ಅವರ ನಿರ್ದೇಶನ ಸರ್ಕಾರಿ ಇಲಾಖೆಗಳನ್ನು ಚುರುಕಾಗಿ ಕೆಲಸ ಮಾಡುವಂತೆ ಮಾಡಿರುವುದು ಜನರ ಭಯವನ್ನು ತುಸು ಕಡಿಮೆ ಮಾಡಿದೆ. ಈ ನಡುವೆ ಸೋಮವಾರ ಹಾಗೂ ಮಂಗಳವಾರ ಕೂಡ ಕಾಡಿನಲ್ಲಿ ಒಂದೊಂದು ಮಂಗ ಸತ್ತು ಬಿದ್ದಿರುವುದು ಬೆಳಕಿಗೆ ಬಂದಿದೆ. ರೋಗಕ್ಕೆ ಯಾವುದೇ ಮಾನವ ಜೀವ ಹಾನಿಯಾದ ಘಟನೆ ಈವರೆಗೆ ನಡೆದಿಲ್ಲ.

Advertisement

ಈವರೆಗೆ ಅರಳಗೋಡು ಭಾಗದ ವಾಟೆಮಕ್ಕಿ, ಜೆಗಳ, ನೆಲಮಕ್ಕಿ, ಬಣ್ಣುಮನೆ ಭಾಗದಲ್ಲಿ 24 ಮಂಗಗಳು ಸಾವನ್ನಪ್ಪಿರುವುದು ಮಂಗನ ಕಾಯಿಲೆಯ ವೈರಸ್‌ ಈ ಭಾಗದಲ್ಲಿ ಇರುವುದನ್ನು ಖಚಿತಪಡಿಸಿದೆ. ನ. 24ರಂದು ಜೆಗಳದ ಪದ್ಮಾವತಿ ಎಂಬುವವರಲ್ಲಿ ಕಾಣಿಸಿದ ಜ್ವರದಲ್ಲಿ ಶಂಕಿತ ಕೆಎಫ್‌ಡಿ ವೈರಸ್‌ ಕಾಣಿಸಿದೆ. ಶಿವಮೊಗ್ಗದ ಎನ್‌ಸಿವಿಆರ್‌ ಪರೀಕ್ಷೆಯಲ್ಲಿ ಧನಾತ್ಮಕ ಫಲಿತಾಂಶ ಬಂದರೂ ಪುಣೆಯ ಪ್ರಯೋಗಾಲಯದ ವಿಡಿಎಲ್‌ ಟೆಸ್ಟ್‌ನಲ್ಲಿ ವೈರಾಣು ಕಾಣಿಸಲಿಲ್ಲ. ಆದರೆ ಇಲ್ಲಿನ 8 ಶಂಕಿತ ಪ್ರಕರಣಗಳಲ್ಲಿ ಎರಡರಲ್ಲಿ ಮಾತ್ರ ಸ್ಪಷ್ಟ ರೋಗ ಲಕ್ಷಣ ಕಾಣಿಸಿದೆ.

ಓರ್ವ ಗಂಭೀರ: ಈ ರೋಗಕ್ಕೆ ತುತ್ತಾದ ಎರಡು ಪ್ರಕರಣಗಳಲ್ಲಿ ವಾಟೆಮಕ್ಕಿಯ ಮಹದೇವ್‌ ಅವರಿಗೆ ನೀಡಿದ ಚಿಕಿತ್ಸೆ ಫಲಕಾರಿಯಾಗಿದ್ದು ಅವರು ಗ್ರಾಮಕ್ಕೆ ಮರಳಿ ಕೆಲಸ ನಿರ್ವಹಿಸುವಷ್ಟು ಸಮರ್ಥರಾಗಿದ್ದಾರೆ. ಆದರೆ ಮಂಡವಳ್ಳಿಯ ಪಾರ್ಶ್ವನಾಥ್‌ ಅವರಿಗೆ ಡಿ. 21ರಂದು ಕಾಣಿಸಿದ ಕಾಯಿಲೆ ತೀವ್ರ ಸ್ವರೂಪವನ್ನು ಕಂಡಿದ್ದು ಸದ್ಯ ಅವರು ಮಣಿಪಾಲ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಸ್ಥಿತಿ ಗಂಭೀರವಾಗಿಯೇ ಮುಂದುವರಿದಿದೆ.

ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ತಾಲೂಕು ಆರೋಗ್ಯಾಧಿಕಾರಿ ಡಾ| ಮುನಿ ವೆಂಕಟರಾಜು, ನವೆಂಬರ್‌ ನಲ್ಲಿ ರೋಗ ಕಾಣಿಸಿದ ತಕ್ಷಣದಿಂದಲೇ ತಾಲೂಕು ಆರೋಗ್ಯ ಇಲಾಖೆ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಹೆಚ್ಚಿನ ಅಪಾಯಕ್ಕೆ ತುತ್ತಾಗಬಹುದು ಎಂದು ಪರಿಗಣಿಸಿರುವ ಈ ಭಾಗದ 1954 ಜನರಲ್ಲಿ 1495 ಜನರಿಗೆ ನ. 28ರಂದು ಲಸಿಕೆ ಹಾಕಲಾಗಿದೆ. ಮತ್ತೆ ಈ ತಿಂಗಳ 29ರಂದು ಎರಡನೇ ಸುತ್ತಿನ ಮುಂಜಾಗ್ರತಾ ಲಸಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಜನರ ಸಹಕಾರದೊಂದಿಗೆ ಆರು ವರ್ಷ ದಾಟಿದ ಎರಡು ಸಾವಿರ ಜನರನ್ನು ತಲುಪಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಲಸಿಕೆಯನ್ನು ತೆಗೆದುಕೊಂಡ ನಂತರದ 30 ಸೆಕೆಂಡ್‌ ಸಮಯದಲ್ಲಿ ವಿಪರೀತ ನೋವಾಗುವುದರಿಂದ ಜನ ಲಸಿಕೆ ಪಡೆಯಲು ಹಿಂಜರಿಯುತ್ತಾರೆ. ಆದರೆ ಇದರಿಂದ ಯಾವುದೇ ಅಡ್ಡ ಪರಿಣಾಮಗಳಾಗುವುದಿಲ್ಲ. ಮೊದಲ 30 ಸೆಕೆಂಡ್‌ ನಂತರ ಯಾವುದೇ ನೋವು ಮರುಕಳಿಸುವುದಿಲ್ಲ. ರೋಗಗ್ರಸ್ತ ಮಂಗನ ರಕ್ತ ಹೀರುವ ಉಣ್ಣಿ ಮನುಷ್ಯನನ್ನು ಕಚ್ಚಿದಾಗ ವೈರಸ್‌ ಪ್ರಸರಿಸುತ್ತದೆ. ಈ ರೋಗ ಮಂಗ ಹಾಗೂ ಮಾನವರಿಗೆ ಮಾತ್ರ ಬರುತ್ತದೆ. ಉಣ್ಣಿ ಜಾನುವಾರು, ನಾಯಿ ಮೊದಲಾದ ಪ್ರಾಣಿಗಳಿಗೆ ಕಚ್ಚಿದರೂ ಅವಕ್ಕೆ ರೋಗ ಬರುವುದಿಲ್ಲ. ಆದರೆ ಅವು ಉಣ್ಣಿಗಳನ್ನು ಕಾಡಿನಿಂದ ನಾಡಿಗೆ ತರಬಹುದು. ಈ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಉಣ್ಣಿ ಕಚ್ಚದಂತೆ ಹಚ್ಚುವ ಸೈಫರ್‌ ಮೆಥ್ರಿನ್‌ ಉಣ್ಣೆನಾಶಕವನ್ನು ಸರ್ಕಾರ ಸರಬರಾಜು ಮಾಡಿದ್ದು, ಬುಧವಾರದಿಂದ ಈ ಭಾಗದಲ್ಲಿ ವ್ಯಾಪಕವಾಗಿ ವಿತರಿಸಲಾಗುತ್ತದೆ ಎಂದು ಪಶು ಸಂಗೋಪನಾ ಇಲಾಖೆಯ ಸಾಗರದ ಸಹಾಯಕ ನಿರ್ದೇಶಕ ಡಾ| ಎನ್‌.ಎಚ್‌. ಶ್ರೀಪಾದರಾವ್‌ ತಿಳಿಸಿದರು.

Advertisement

ಸೋಮವಾರ ಅರಳಗೋಡಿನಲ್ಲಿ ಶಾಸಕ ಹಾಲಪ್ಪ ನಡೆಸಿದ ಸಭೆ ಸಂದರ್ಭದಲ್ಲಿ ಸಾವನ್ನಪ್ಪಿದ ಮಂಗಗಳ ಕುರಿತು ಮಾಹಿತಿ ನೀಡಿದವರಿಗೆ ಪಂಚಾಯತ್‌ ಬಾಬತ್ತಿನಿಂದ 200 ರೂ.ಗಳ ಪ್ರೋತ್ಸಾಹ ಧನ ನೀಡುವ ಪ್ರಸ್ತಾಪ ಕೇಳಿಬಂದಿದೆ. ಈ ನಡುವೆ ಅರಣ್ಯ ಇಲಾಖೆಯವರಿಗೂ ಆರೋಗ್ಯ ಇಲಾಖೆ ತರಬೇತಿ ನೀಡಿದೆ. ಜಿಲ್ಲಾ ಆರೋಗ್ಯ ಶಿಕ್ಷಣ ಇಲಾಖೆ ಸಹಕಾರದಿಂದ ಪ್ರೊಜೆಕ್ಟರ್‌, ಭಿತ್ತಿಪತ್ರ ಮೊದಲಾದವುಗಳ ಮೂಲಕ ಜನಜಾಗೃತಿ ಮೂಡಿಸುವ ಪ್ರಯತ್ನ ಬಿರುಸುಗೊಂಡಿದೆ. ಈ ಭಾಗದ ಶಾಲೆ, ಅಂಗನವಾಡಿಗಳಿಗೆ ಮೂವರು ವೈದ್ಯರ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿ ತೆರಳಿ ಮುನ್ನೆಚ್ಚರಿಕೆ ಕ್ರಮಗಳನ್ನು ಮನದಟ್ಟು ಮಾಡಿಕೊಡಲಿದ್ದಾರೆ.

ಆಡಳಿತದ ಕ್ರಮದಿಂದ ಭರವಸೆ:
ಸಮರೋಪಾದಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಮೂರು ಪಾಳಿಯ ವೈದ್ಯರ ಜೊತೆಗಿರುವ ಸುಮಾರು 25 ಜನರ ತಂಡಕ್ಕೆ ವಸತಿ, ಆಹಾರ ಸೌಲಭ್ಯಕ್ಕೆ ಸಹ ತಾಲೂಕು ಆಡಳಿತ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ದಿನಸಿಗಳನ್ನು ಒದಗಿಸಿ ಅಕ್ಷರ ದಾಸೋಹದ ಸಿಬ್ಬಂದಿಗಳ ಸಹಕಾರದಿಂದ ವೈದ್ಯ ತಂಡಕ್ಕೆ ಆಹಾರ ನೀಡುವಂತೆ ಶಾಸಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಗಮನ ಹರಿಸಿದ್ದಾರೆ. ಈ ನಡುವೆ ತಾಲೂಕು ಆರೋಗ್ಯ ಇಲಾಖೆಯಲ್ಲಿ ಮೂರು ಸಾವಿರ ಬಾಟಲ್‌ ಡಿಎಂಪಿ ಆಯಿಲ್‌ ಸಂಗ್ರಹಿವಿದೆ. ಇದನ್ನು ಮನೆಮನೆಗೆ ವಿತರಿಸಿ ಕಾಡಿಗೆ ತೆರಳುವಾಗ ಮೈಕೈಗೆ ಹಚ್ಚಿಕೊಳ್ಳಲು ಸೂಚಿಸಲಾಗುತ್ತಿದೆ. ಇನ್ನಷ್ಟು ಡಿಎಂಪಿ ಆಯಿಲ್‌ ತರಿಸಲು ಬೇಡಿಕೆ ಸಲ್ಲಿಸಲಾಗಿದೆ. ರೋಗದ ಆತಂಕದ ನಡುವೆಯೂ ತಾಲೂಕು ಆಡಳಿತ, ಅರಣ್ಯ, ಆರೋಗ್ಯ ಹಾಗೂ ಪಶು ಇಲಾಖೆಗಳು, ಶಾಸಕರು ಸ್ಪಂದಿಸಿರುವ ರೀತಿಯಿಂದ ಇಲ್ಲಿನ ಜನ ಸ್ವಲ್ಪ ಮಟ್ಟಿನ ನೆಮ್ಮದಿ ಕಾಣುತ್ತಿದ್ದಾರೆ.

ಗದರಿದ ಹಾಲಪ್ಪ
 ಸೋಮವಾರ ಅರಳಗೋಡಿನಲ್ಲಿ ಪರಿಸ್ಥಿತಿ ಪರಿಶೀಲನಾ ಸಭೆಯಲ್ಲಿ ಜಾನುವಾರುಗಳ ಉಣ್ಣಿ ತೊಡೆಯಲು ಅವಶ್ಯಕವಾದ ಉಣ್ಣೆ ನಾಶಕ ಲಿಕ್ವಿಡ್‌ ಸಂಗ್ರಹ ಇಲ್ಲ ಎಂಬುದನ್ನು ಅರಿತ ಶಾಸಕ ಎಚ್‌. ಹಾಲಪ್ಪ ಸ್ಥಳದಿಂದಲೇ ವೆಟರ್ನರಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳನ್ನು ಸಂಪರ್ಕಿಸಿದರು. ಈ ಲಿಕ್ವಿಡ್‌ನ್ನು ಸಾಗರಕ್ಕೆ ಒದಗಿಸಲು ಇನ್ನೊಂದು ವಾರ ಬೇಕಾಗುತ್ತದೆ ಎಂಬ ಉತ್ತರ ದೂರವಾಣಿಯಲ್ಲಿ ಸಿಕ್ಕಾಗ ಗದರಿದ ಹಾಲಪ್ಪ, ಆ ವೇಳೆಗೆ ಈ ಭಾಗದ ಜನರೆಲ್ಲ ಸತ್ತಿರುತ್ತಾರೆ. ಏನು ಮಾಡುತ್ತೀರೋ ಗೊತ್ತಿಲ್ಲ, ನಮಗೆ ತಕ್ಷಣ ಬೇಕು ಎಂದು ಸ್ಪಷ್ಟಪಡಿಸಿದರು. ಇದರಿಂದ ಎಚ್ಚೆತ್ತುಕೊಂಡ ಸರ್ಕಾರ ಕೇವಲ ನಾಲ್ಕು ಗಂಟೆಗಳಲ್ಲಿ 10 ಸಾವಿರ ರೂ. ಮೌಲ್ಯದ 10 ಲೀಟರ್‌ ಉಣ್ಣೆನಾಶಕವನ್ನು ಖರೀದಿಸಿ ಕಳುಹಿಸಿಕೊಟ್ಟಿತು. ಸಾಗರದಲ್ಲಿ ನಡೆದ ಪತ್ರಿಕಾಗೋಷ್ಠಿಯ ಸಂದರ್ಭದಲ್ಲಿ ನಾನು ಕೂಡ ಒಮ್ಮೆ ಮಂಗನ ಕಾಯಿಲೆಯ ಶಂಕಿತ ರೋಗಿಯಾಗಿದ್ದೆ. ನನ್ನ ಸಹೋದರ ಈ ಕಾಯಿಲೆಗೆ ತುತ್ತಾಗಿದ್ದರು ಎಂದು ನೆನಪಿಸಿಕೊಂಡಿದ್ದ ಹಾಲಪ್ಪ, ಮಂಗನ ಕಾಯಿಲೆಯಿಂದ ತೀವ್ರ ಅನಾರೋಗ್ಯಕ್ಕೊಳಗಾಗಿರುವ ಪಾರ್ಶ್ವನಾಥ್‌ ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆ ಸಾಗರಕ್ಕೆ ವಾಪಸ್‌ ಕಳುಹಿಸಿದ ಸಂದರ್ಭದಲ್ಲಿ ಸಾಗರದ ಆಸ್ಪತ್ರೆಗೆ ಭೇಟಿ ನೀಡಿ ತಕ್ಷಣ ಮಣಿಪಾಲ್‌ ಆಸ್ಪತ್ರೆಗೆ ದಾಖಲಾಗುವಂತೆ ಮಾಡಿದರು. ಈ ಸಂದರ್ಭದಲ್ಲಿ ಡಿಸಿ ಹಾಗೂ ಸಂಬಂಧಪಟ್ಟವರನ್ನು ಸಂಪರ್ಕಿಸಿ ವೆಂಟಿಲೇಟರ್‌ ಸಹಿತದ ಆ್ಯಂಬುಲೆನ್ಸ್‌ನಲ್ಲಿ ಉಚಿತವಾಗಿ ಅವರಿಗೆ ತೆರಳುವ ವ್ಯವಸ್ಥೆ ಮಾಡಿದ್ದು ಮೆಚ್ಚುಗೆಗೆ ಕಾರಣವಾಯಿತು. ರೋಗಿಯ ಮುಂದಿನ ಚಿಕಿತ್ಸೆಗೆ ಅವರು ಸ್ಥಳದಲ್ಲಿಯೇ ವೈಯಕ್ತಿಕ ಧನಸಹಾಯವನ್ನು ಕೂಡ ನೀಡಿದರು. ಓರ್ವ ಜನಪ್ರತಿನಿಧಿ ಸಾಮಾನ್ಯ ನಾಗರಿಕರ ನೆರವಿಗೆ ಬರುವುದು ನಮ್ಮ ಪ್ರಜಾಪ್ರಭುತ್ವದ ಕುರಿತಾದ ನಂಬಿಕೆಯನ್ನು ಗಟ್ಟಿಗೊಳಿಸುತ್ತದೆ ಎಂದು ಪ್ರತ್ಯಕ್ಷದರ್ಶಿಗಳೊಬ್ಬರು ಪತ್ರಿಕೆಗೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next