Advertisement

ಡ್ರಗ್ ‌ಹಿಂದೆಯೂ ಪಾಕ್‌-ಚೀನಾ ಕೈವಾಡ! ದೇಶದ ಯುವಜನರನ್ನುನಾಶ ಮಾಡಲು ಸಂಚು

03:41 PM Sep 17, 2020 | Nagendra Trasi |

ನವದೆಹಲಿ:ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿರುವ “ಡ್ರಗ್‌ ವಿವಾದ’ ಸಂಸತ್‌ ಅಧಿವೇಶನದಲ್ಲೂ ಪ್ರತಿಧ್ವನಿಸಿದೆ. ಅಧಿವೇಶನದ ಮೊದಲ ದಿನವೇ ಬಾಲಿವುಡ್‌ನ‌ “ಮಾದಕ’ ನಂಟು ಸದನದಲ್ಲಿ ಸದ್ದು ಮಾಡಿದೆ. ದೇಶದ ಯುವಜನರನ್ನು ನಾಶ ಮಾಡಲೆಂದು ಪಾಕಿಸ್ತಾನ ಹಾಗೂ ಚೀನಾ ಹೂಡಿರುವ ಸಂಚು ಇದು ಎಂದು ಬಿಜೆಪಿ ಸಂಸದ ರವಿ ಕಿಶನ್‌ ಆರೋಪಿಸಿದ್ದಾರೆ.

Advertisement

ಲೋಕಸಭೆಯಲ್ಲಿ ಡ್ರಗ್‌ ಪ್ರಕರಣ ಕುರಿತು ಪ್ರಸ್ತಾಪಿಸಿದ ಉತ್ತರಪ್ರದೇಶದ ಸಂಸದ ರವಿ ಕಿಶನ್‌, ಡ್ರಗ್‌ ಕಳ್ಳಸಾಗಣೆಯ ಸಮಸ್ಯೆ ಇತ್ತೀಚಿನ ದಿನಗಳಲ್ಲಿ
ಹೆಚ್ಚಳವಾಗಿದೆ. ಪಾಕ್‌ ಮತ್ತು ಚೀನಾದಿಂದ ಪಂಜಾಬ್‌ ಮತ್ತು ನೇಪಾಳದ ಮೂಲಕವಾಗಿ ದೇಶದೊಳಕ್ಕೆ ಡ್ರಗ್‌ ಸಾಗಿಸಲಾಗುತ್ತದೆ. ದೇಶದ ಯುವಜನರನ್ನು ಹಾಳು ಮಾಡುವ ವ್ಯವಸ್ಥಿತ ಷಡ್ಯಂತ್ರ ಇದಾಗಿದೆ ಎಂದು ಆರೋಪಿಸಿದ್ದಾರೆ.

ಜತೆಗೆ, ಸಿನಿಮಾ ಕ್ಷೇತ್ರದಲ್ಲೂ ಡ್ರಗ್‌ ವ್ಯಸನಿಗಳ ಸಂಖ್ಯೆ ಹೆಚ್ಚಾಗಿದೆ. ಕೂಡಲೇ ಸರ್ಕಾರವು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಂಡು, ನೆರೆರಾಷ್ಟ್ರಗಳ
ಸಂಚನ್ನು ಬಹಿರಂಗಪಡಿಸಬೇಕು ಎಂದೂ ಅವರು ಒತ್ತಾಯಿಸಿದ್ದಾರೆ. ಇದೇ ವೇಳೆ, ಸುಶಾಂತ್‌ ಸಿಂಗ್‌ ಸಾವಿನ ತನಿಖೆ ವೇಳೆ ಬಹಿರಂಗವಾಗಿರುವ ಡ್ರಗ್‌
ವಿವಾದದ ಕುರಿತು ತನಿಖೆ ನಡೆಸುತ್ತಿರುವ ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ(ಎನ್‌ಸಿಬಿ) ಬಗ್ಗೆಯೂ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ, ಎನ್‌ಸಿಪಿ ನಾಯಕಿ ಸುಪ್ರಿಯಾ ಸುಳೆ ಅವರು, ಸರ್ಕಾರವು ಸದ್ಯದ ಅತಿದೊಡ್ಡ ಸವಾಲುಗಳಾದ ನಿರುದ್ಯೋಗ ಮತ್ತು ಆರ್ಥಿಕತೆಯ ಕುರಿತು ಚರ್ಚಿಸಬೇಕು ಎಂದರೆ, ಶಿವಸೇನೆಯು ಜಿಎಸ್‌ಟಿ ಬಾಕಿ ಪಾವತಿ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದು ಕಂಡುಬಂತು.

ವಿಧೇಯಕಗಳ ಮಂಡನೆ: ಈ ನಡುವೆ, ದೇಶದ ಸಹಕಾರಿ ಬ್ಯಾಂಕುಗಳನ್ನು ಆರ್‌ಬಿಐ ಮೇಲ್ವಿಚಾರಣೆಗೆ ತರುವಂತಹ ಬ್ಯಾಂಕಿಂಗ್‌ ನಿಬಂಧನೆ ಕಾಯ್ದೆ ತಿದ್ದುಪಡಿ
ವಿಧೇಯಕ ವನ್ನೂ ಮಂಡನೆ ಮಾಡಲಾಯಿತು. ಆದರೆ, ಇದಕ್ಕೆ ಕಾಂಗ್ರೆಸ್‌, ಟಿಎಂಸಿ ಸೇರಿದಂತೆ ಪ್ರತಿಪಕ್ಷಗಳು ವಿರೋಧ ವ್ಯಕ್ತಪಡಿಸಿದವು. ಇನ್ನು, ಕೊರೊನಾ
ಹಿನ್ನೆಲೆಯಲ್ಲಿ ಒಂದು ವರ್ಷ ಕಾಲ ಸಂಸದರ ವೇತನವನ್ನು ಶೇ.30ರಷ್ಟು ಕಡಿತ ಮಾಡುವ ವಿಧೇಯಕವನ್ನು ಸಚಿವ ಪ್ರಹ್ಲಾದ್‌ ಜೋಷಿ ಮಂಡಿಸಿದರು.ಈನಡುವೆ, ಲಾಕ್‌ಡೌನ್‌ ಅವಧಿಯಲ್ಲಿ ಮೃತಪಟ್ಟ ವಲಸೆ ಕಾರ್ಮಿಕರ ಕುರಿತು ಯಾವುದೇ ದತ್ತಾಂಶ ಲಭ್ಯವಿಲ್ಲ ಎಂದು ಸರ್ಕಾರ ಹೇಳಿದೆ.

Advertisement

78 ಸಾವಿರ ಮಂದಿಯ ರಕ್ಷಣೆ: ಕೊರೊನಾ ಸಮಯದಲ್ಲಿ ರಾಷ್ಟ್ರೀಯ ಲಾಕ್‌ಡೌನ್‌ ಘೋಷಣೆ ಮಾಡುವ ಮೂಲಕ ಕೇಂದ್ರ ಸರ್ಕಾರ ದಿಟ್ಟ ನಿರ್ಧಾರ ಕೈಗೊಂಡಿತು. ಈ ನಿರ್ಧಾರದಿಂದಾಗಿ ಸುಮಾರು 14-29 ಲಕ್ಷ ಪ್ರಕರಣಗಳು ಹಾಗೂ 37-78 ಸಾವಿರ ಸಾವುಗಳನ್ನು ತಪ್ಪಿಸಿದಂತಾಗಿದೆ ಎಂದು ಕೇಂದ್ರ ಸಚಿವ ಹರ್ಷವರ್ಧನ್‌ ಲೋಕಸಭೆಗೆ ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next