Advertisement

ಒಂಟಿ ಸಲಗ ದಾಳಿಗೆ ಅರಣ್ಯಾಧಿಕಾರಿ ಮಣಿಕಂಠನ್‌ ಬಲಿ

06:00 AM Mar 04, 2018 | |

ಮೈಸೂರು: ವಿಶ್ವ ವನ್ಯಜೀವಿ ದಿನಾಚರಣೆಯಂದೇ ಕಾಡಾನೆ ದಾಳಿಗೆ ಹಿರಿಯ ಅರಣ್ಯಾಧಿಕಾರಿಯೊಬ್ಬರು ಬಲಿಯಾಗಿದ್ದಾರೆ.
ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ನಿರ್ದೇಶಕರಾದ ಐಎಫ್ಎಸ್‌ ಅಧಿಕಾರಿ ಎಸ್‌.ಮಣಿಕಂಠನ್‌ (46) ಕರ್ತವ್ಯ ನಿರತರಾಗಿದ್ದಾಗ ಹಠಾತ್‌ ಎರಗಿದ ಆನೆ ದಾಳಿಗೆ ಬಲಿಯಾದವರು.

Advertisement

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಡಿ.ಬಿ.ಕುಪ್ಪೆ ವಲಯದ ಕಬಿನಿ ಹಿನ್ನೀರು ಪ್ರದೇಶದಲ್ಲಿ ಶುಕ್ರವಾರ ಬೆಂಕಿ ಬಿದ್ದು ಕೆಲ ಪ್ರದೇಶ ಸುಟ್ಟು ಹೋಗಿತ್ತು. ಇದರ ತನಿಖೆ ಸಲುವಾಗಿ ಸ್ಥಳ ಪರಿಶೀಲನೆಗೆ ತೆರಳಿದ್ದ ಮಣಿಕಂಠನ್‌, ಸುಮಾರು 10ಕ್ಕೂ ಹೆಚ್ಚು ಸಿಬ್ಬಂದಿ ಜತೆಗೆ ಕಾಕನಕೋಟೆ ಬೀಟ್‌ ಸಮೀಪದ ಕಾಟಿ ಕುಂಟೆ ಕೆರೆ ಬಳಿಯ ಕಾಲುದಾರಿಯಲ್ಲಿ ನಡೆದು ಹೋಗುತ್ತಿದ್ದಾಗ ಒಂಟಿ ಸಲಗವೊಂದು ಹಠಾತ್‌ ದಾಳಿ ಮಾಡಿದೆ. 

ಆನೆ ದಾಳಿಯಿಂದ ಕಂಗಾಲಾದ ಸಿಬ್ಬಂದಿ ಓಡತೊಡಗಿದಾಗ ಮಣಿಕಂಠನ್‌ ಕೆಳಗೆ ಬಿದ್ದಿದ್ದಾರೆ. ಕೆಳಗೆ ಬಿದ್ದ ಮಣಿಕಂಠನ್‌ ಅವರ ದೇಹದ ಮೇಲೆ ಒಂಟಿ ಸಲಗ ಕಾಲಿಟ್ಟು ದಂತದಿಂದ ತಿವಿದು ಗಂಭೀರ ಗಾಯಗೊಳಿಸಿದೆ. ಮಣಿಕಂಠನ್‌ ಆನೆ ದಾಳಿಗೆ ಸಿಲುಕಿದ್ದರಿಂದ ಭಯಭೀತರಾಗಿ ಚೆಲ್ಲಾಪಿಲ್ಲಿಯಾಗಿದ್ದ ಸಿಬ್ಬಂದಿ ಕೂಗಿಕೊಂಡಿದ್ದರಿಂದ ಆನೆ ಅವರನ್ನು ಬಿಟ್ಟು ಓಡಿದೆ. ಬಳಿಕ ಸ್ಥಳಕ್ಕೆ ತೆರಳಿದ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದ ಮಣಿಕಂಠನ್‌ ಅವರನ್ನು ಎಚ್‌.ಡಿ.ಕೋಟೆ ಸಾರ್ವಜನಿಕ ಆಸ್ಪತ್ರೆಗೆ ತರುವ ಮಾರ್ಗ ಮಧ್ಯೆ ಕೊನೆ ಉಸಿರೆಳೆದಿದ್ದಾರೆ.

ಒಂಟಿ ಸಲಗದ ಹಠಾತ್‌ ದಾಳಿಯಿಂದ ತಪ್ಪಿಸಿಕೊಳ್ಳಲು ದಿಕ್ಕಾಪಾಲಾಗಿ ಓಡುವ ವೇಳೆ ಕೆಳಗೆ ಬಿದ್ದು ಹಲವು ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೂ ಗಾಯಗಳಾಗಿವೆ. ಎಚ್‌.ಡಿ.ಕೋಟೆ ಸಾರ್ವಜನಿಕ ಆಸ್ಪತ್ರೆಗೆ ಸಂಸದ ಆರ್‌.ಧ್ರುವನಾರಾಯಣ, ದಕ್ಷಿಣ ವಲಯ ಐಜಿಪಿ ವಿಪುಲ್‌ ಕುಮಾರ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ ಭೇಟಿ ನೀಡಿದ್ದರು.

ಬಳಿಕ ಮೃತದೇಹವನ್ನು ಮೈಸೂರು ವೈದ್ಯಕೀಯ ಕಾಲೇಜಿನ ಶವಾಗಾರಕ್ಕೆ ತಂದು ಮರಣೋತ್ತರ ಪರೀಕ್ಷೆ ನಡೆಸಲಾಯಿತು.
2001ರ ಬ್ಯಾಚ್‌ನ ಕರ್ನಾಟಕ ಕೇಡರ್‌ನ ಎಸ್‌.ಮಣಿಕಂಠನ್‌ ಮೂಲತಃ ತಮಿಳುನಾಡಿನವರು. ಕಳೆದ ಎರಡು ವರ್ಷಗಳಿಂದ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಹುಲಿ ಯೋಜನೆ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದಕ್ಕೂ ಮೊದಲು ಅವರು ಬಳ್ಳಾರಿಯಲ್ಲಿ ಡಿಎಫ್ಒ ಆಗಿ ಕರ್ತವ್ಯ ನಿರ್ವಹಿಸಿದ್ದರು.

Advertisement

ಸರ್ಕಾರ ಸಂತಾಪ: ಮಣಿಕಂಠನ್‌ ನಿಧನಕ್ಕೆ ಸರ್ಕಾರ ಸಂತಾಪ ವ್ಯಕ್ತಪಡಿಸಿದ್ದು, ಮೃತರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸುವಂತೆ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಧೀನ ಕಾರ್ಯದರ್ಶಿ ಆರ್‌.ಎಸ್‌.ಶಿವಕುಮಾರ್‌ ಅಧಿಸೂಚನೆ ಹೊರಡಿಸಿದ್ದಾರೆ. ಮಣಿಕಂಠನ್‌ ಮೃತದೇಹವನ್ನು ಮೈಸೂರಿನ ಅಶೋಕಪುರಂನಲ್ಲಿರುವ ಅರಣ್ಯಭವನದಲ್ಲಿರಿಸಿ ಸಕಲ ಸರ್ಕಾರಿ ಗೌರವ ಸಲ್ಲಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next