Advertisement

ರಾಜಾಶ್ರಯ ನೀಡದ ಸರಕಾರ; ಸಂಕಷ್ಟದಲ್ಲಿ ಗೋಪಾಲಕರು

09:31 AM May 16, 2022 | Team Udayavani |

ಬೆಳ್ತಂಗಡಿ: ಗೋ ಸಂರಕ್ಷಣೆ ಭಾರತೀಯ ಆಸ್ಮಿತೆ ಎಂಬಂತೆ ಸರಕಾರ ಗೋ ರಕ್ಷಣೆಗೆ ಕಟಿ ಬದ್ಧವೇನೋ ಆಗಿದೆ. ಆದರೆ ನಿರಾಶ್ರಿತ ಗೋವುಗಳ ಸಂರಕ್ಷಣೆಗೆ ಮುಂದಾಗಿರುವ ರಾಜ್ಯದ ಅದೆಷ್ಟೋ ಗೋಶಾಲೆಗಳು ಮಾತ್ರ ಸರಕಾರದಿಂದ ನಿರೀಕ್ಷಿತ ಅನುದಾನ ಸಿಗದೆ ಇತ್ತ ದಾನಿಗಳ ನೆರವಿಗೆ ಕೈಚಾಚುತ್ತಾ ಸೊರಗುತ್ತಿವೆ.

Advertisement

ಕಳೆಂಜದಲ್ಲಿ ಶಬರಿಮಲೆ ಪರಿಸರದ ಗೋಪಾಲಕೃಷ್ಣ ನಾಯರ್‌ ಮಾಲಕತ್ವದಲ್ಲಿದ್ದ ಸುಮಾರು 4 ಎಕ್ರೆ ನೀರಾಶ್ರಯವಿರುವ ಕೃಷಿ ಭೂಮಿಯನ್ನು ದಾನ ರೂಪದಲ್ಲಿ ನೀಡಲು ಮುಂದಾಗಿದ್ದರು. ಅದಾಗ ಸ್ವಾಮಿ ಶ್ರೀ ವಿವೇಕಾನಂದ ಸೇವಾಶ್ರಮ ಟ್ರಸ್ಟ್‌ ನಡಿ ಗೋ ಶಾಲೆಯೊಂದು ಆರಂಭಿಸುವ ಚಿಂತನೆಗೆ ಹಿಂದೂ ಸಂಘ ಟಕರು ಮುಂದಾಗಿದ್ದರು.

ಮನೆ ಮಂದಿಗೆ ಸಾಕಲಾಗದ, ಅನಾಥ, ರಸ್ತೆಯಲ್ಲಿ ಅಪಘಾತ ಆದ ದನ, ಬೀಡಾಡಿ ದನಗಳು, ಅಕ್ರಮ ಗೋ ಸಾಗಾಟದಲ್ಲಿ ಪೊಲೀಸರು ವಶ ಪಡಿಸಿಕೊಂಡ ಗೋವುಗಳ ರಕ್ಷಣೆಗಾಗಿ ಸರಿಯಾದ ವ್ಯವಸ್ಥೆ ಯಿಲ್ಲದ ಕಾರಣ ಟ್ರಸ್ಟ್‌ ಸಭೆ ಸೇರಿ ಗೋವುಗಳ ರಕ್ಷಣೆಗೆ ಚಿಂತನೆ ನಡೆಸಿತ್ತು.

ಜತೆಗೆ ಪಾಲನೆಗಾಗಿ ಗೋ ಶಾಲೆಯೊಂದನ್ನು ಪ್ರಾರಂಭಿಸುವ ನಿರ್ಣಯಕ್ಕೆ ಬಂದ ಹಿನ್ನೆಲೆ ಪರಿಣಾಮವಾಗಿ 2020ರ ಮೇ 29ರಂದು ನಂದಗೋಕುಲ ಗೋಶಾಲೆ ಪ್ರಾರಂಭಗೊಂಡಿತು.

ಸವಾಲುಗಳು ಹಲವಾರು

Advertisement

3 ದನಗಳಿಂದ ಆರಂಭಗೊಂಡ ಪಶು ಪಾಲನೆ ಯಾತ್ರೆ ಇಂದು 300ಕ್ಕೂ ಅಧಿಕ ಹಸುಗಳನ್ನು ಹೊಂದಿದೆ. ಸರಕಾರದಿಂದ ಜಿಲ್ಲಾಧಿಕಾರಿಗಳ ಮೂಲಕ ಮೈಸೂರಿನ ಟಿಂಜರ ಪೋಲ್‌ ಆಶ್ರಮ ದಡಿ 3 ವರ್ಷ ತಲಾ 1 ಲಕ್ಷ ರೂ., 1.90 ಲಕ್ಷ ರೂ., 1.50 ಲಕ್ಷ ರೂ. ಬಿಟ್ಟರೆ ಬೇರಾವ ಅನುದಾನ ಲಭಿಸಿಲ್ಲ. ಆದರೆ ನಂದಗೋಕುಲ ಟ್ರಸ್ಟ್‌ ಗೆ ಮಾಸಿಕ 3ರಿಂದ 4 ಲಕ್ಷ ರೂ. ವೆಚ್ಚ ತಗಲುತ್ತಿದೆ. ಸದ್ಯಕ್ಕೆ ಟ್ರಸ್ಟ್‌ ನ ಸದಸ್ಯರು, ದಾನಿಗಳ ನೆರವಿಂದ 70 ಲಕ್ಷ ರೂ. ಅಧಿಕ ಮೊತ್ತ ಸಾಲವಾಗಿ ಪಡೆದು ಗೋಶಾಲೆ ನಡೆಸಿದೆ. ಕಳೆದ ಮೂರು ವರ್ಷಗಳಲ್ಲಿ ಒಟ್ಟಾರೆ 1.13 ಕೋ.ರೂ. ವ್ಯಯಿಸಿದೆ. ದನಗಳಿಂದ 25 ಲೀ. ಹಾಲು ದೊರೆ ಯುತ್ತಿದ್ದು ಹಾಲು ಸೊಸೈಟಿಗೆ ನೀಡಲಾಗುತ್ತಿದೆ. ಅದರ ಹೊರತಾಗಿ ಗೋಶಾಲೆಗೆ ಯಾವುದೇ ಆದಾಯ ಮೂಲಗಳಿಲ್ಲ. ಗೋವುಗಳಿಗಾಗಿ ಹುಲ್ಲು, ಬೈಹುಲ್ಲು, ಹಿಂಡಿ, ಜೋಳ ನೀಡುವ ‘ಗೋಗ್ರಾಸ’ ಯೋಜನೆ ರೂಪಿಸಿರುವುದು ವಿಶೇಷ.

ಬಿರುಗಾಳಿಗೆ ನಲುಗಿದ ಆಶ್ರಮ

2022 ಮಾರ್ಚ್‌ 18 ಗೋಶಾಲೆಯ ಪಾಲಿಗೆ ಕರಾಳ ದಿನ. ಭಾರಿ ಬಿರುಗಾಳಿ, ಮಳೆಯ ಆರ್ಭಟಕ್ಕೆ ಗೋಶಾಲೆಯ ಚಾವಣಿಯ ಸಿಮೆಂಟ್‌ ಶೀಟ್‌ ಹಾರಿ 7 ಲಕ್ಷ ರೂ. ನಷ್ಟ ಅಂದಾಜಿಸಲಾಗಿತ್ತು. ಇದೀಗ ಛಾವಣಿಗೆ ಹೊಸದಾಗಿ ಶೀಟ್‌ ಅಳವಡಿಸಿ ಗೋವುಗಳಿಗೆ ರಕ್ಷಣೆ ಒದಗಿಸಲಾಗಿದೆ.

ಟ್ರಸ್ಟ್‌ನಲ್ಲಿ ಅಧ್ಯಕ್ಷರಾಗಿ ಡಾ| ಎಂ.ಎಂ. ದಯಾಕರ್‌, ಕಾರ್ಯದರ್ಶಿಯಾಗಿ ಸುಬ್ರಹ್ಮಣ್ಯ ಕುಮಾರ್‌ ಅಗರ್ತ, ಟ್ರಸ್ಟಿಗಳಾಗಿ ಗೋಪಾಲಕೃಷ್ಣ ನಾಯರ್‌, ಹರೀಶ್‌ ಪೂಂಜ, ಭಾಸ್ಕರ ಧರ್ಮಸ್ಥಳ, ನವೀನ ನೆರಿಯ, ಡಾ| ಮುರಳಿಕೃಷ್ಣ ಇರ್ವತ್ರಾಯ, ರಮೇಶ್‌ ಪ್ರಭು ಮತ್ತು ಕಶೆಕೋಡಿ ಸೂರ್ಯನಾರಾಯಣ ಭಟ್‌ ಮೊದಲಾದವರಿದ್ದು ಗೋಶಾಲೆಯಲ್ಲಿ 8 ಮಂದಿ ಖಾಯಂ ಸಿಬಂದಿಗಳಿದ್ದು, ಒಂದು ಕುಟುಂಬ ವಾಸ್ತವ್ಯವಿದ್ದು ಇಡೀ ದಿನ ಗೋವುಗಳ ಪಾಲನೆ ಉಸ್ತುವಾರಿ ನೋಡಿಕೊಳ್ಳುತ್ತಿದೆ.

ಧರ್ಮಸ್ಥಳದಿಂದ 1.50 ಲಕ್ಷ ರೂ. ನೆರವು

ನಂದಗೋಕುಲ ಗೋಶಾಲೆ ಗೋಬರ್‌ ಗ್ಯಾಸ್‌ ಉತ್ಪನ್ನ, ಗೋಅರ್ಕ, ವಿಭೂತಿ, ಧೂಪ, ಹಣತೆ, ಎರೆಹುಳ ಗೊಬ್ಬರ ತಯಾರಿಸಿ ಮುಂದಿನ ದಿನಗಳಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಳಿಸುವ ಗುರಿ ಹೊಂದಿದೆ. ಗೋಶಾಲೆಯ ಅಭಿವೃದ್ಧಿ ಕಾರ್ಯಗಳಿಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು 1.50 ಲಕ್ಷ ರೂ. ಆರ್ಥಿಕ ನೆರವು ನೀಡಿದ್ದಾರೆ. ಜಿಲ್ಲೆಯಲ್ಲಿ ಬೆರಳೆಣಿಕೆಯ ಗೋ ಶಾಲೆಗಳಿದ್ದು, ನೆರವಿಗೆ ಸರಕಾರ ಚಿಂತಿಸಬೇಕಿದೆ.

ನೆರವು ಅಗತ್ಯ

400 ದನಗಳನ್ನು ಸಾಕುವ ಯೋಜನೆ ಯಿದೆ. ಸರಕಾರಿ ವೈದ್ಯರು ಉಚಿತವಾಗಿ ಚಿಕಿತ್ಸೆ ನೀಡುತ್ತಿದ್ದಾರೆ. ಸರಕಾರದಿಂದ ಒಂದು ದನದ ಲೆಕ್ಕದಲ್ಲಿ ಬರುವ ಮೊತ್ತ ಸಾಲುತ್ತಿಲ್ಲ. ಪಶುವೈದ್ಯಕೀಯ ಪರಿವೀಕ್ಷಕರನ್ನು ಪ್ರತೀ ಗೋಶಾಲೆಗಳಿಗೆ ನೇಮಿಸಬೇಕು, ದನಗಳನ್ನು ಲಿಫ್ಟ್‌ ಮಾಡಲು ಯಂತ್ರ ನೀಡಬೇಕು. ಗೋಮಾಳ ಭೂಮಿ ಮೀಸಲಿರಿಸಬೇಕು. -ಡಾ| ಎಂ.ಎಂ.ದಯಾಕರ್, ಅಧ್ಯಕ್ಷರು, ಸ್ವಾಮಿ ಶ್ರೀ ವಿವೇಕಾನಂದ ಸೇವಾಶ್ರಮ ಟ್ರಸ್ಟ್‌

ಪರಿಶೀಲನೆ

ಸರಕಾರದಿಂದ ಪಶು ಇಲಾಖೆಯಡಿ ಸಿಗುವ ಅಗತ್ಯ ನೆರವನ್ನು ಗೋ ಶಾಲೆಗಳಿಗೆ ಒದಗಿಸಲಾಗುತ್ತಿದೆ. ಸರಕಾರ ಧನ ಸಹಾಯ ಹೆಚ್ಚಿಸುವ ಬಗ್ಗೆ ಪರಿಶೀಲನೆ ನಡೆಸುತ್ತಿದೆ -ಡಾ| ರವಿಕುಮಾರ್‌, ವೈದ್ಯಾಧಿಕಾರಿ, ಪಶು ಇಲಾಖೆ

ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next