Advertisement
ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ನಡುವೆ ಇರುವ ಎತ್ತರಿಸಿದ ಪಾದಚಾರಿ ಮಾರ್ಗದಿಂದ ಮೆಟ್ರೋ ನಿಲ್ದಾಣಕ್ಕೆ ನೇರವಾಗಿ ಸಂಪರ್ಕ ಕಲ್ಪಿಸಬೇಕು ಎನ್ನುವುದು ಪ್ರಯಾಣಿಕರ ಬಹುದಿನಗಳ ಬೇಡಿಕೆ ಆಗಿತ್ತು. ಸುಮಾರು ಒಂದೂವರೆ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಈ ಸ್ಕೈವಾಕ್‌ನಿಂದ ಸುಮಾರು 30 ಸಾವಿರಕ್ಕೂ ಅಧಿಕ ಪ್ರಯಾಣಿಕರಿಗೆ ಅನುಕೂಲ ಆಗಲಿದೆ.
Related Articles
Advertisement
ಬಿಎಂಟಿಸಿ ಬಸ್ ನಿಲ್ದಾಣದ ಯಾವುದೇ ಮೂಲೆಯಿಂದ ಎತ್ತರಿಸಿದ ಸೇತುವೆ ಏರಿ, 20ನೇ ಪ್ಲಾಟ್ ಫಾರಂ ಎದುರು ಇಳಿಯಬೇಕು. ಅಲ್ಲಿಂದ ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್‌ಗಳ ನಿರ್ಗಮಿಸಲು ಇರುವ ಎರಡೂ ರಸ್ತೆಗಳನ್ನು ದಾಟಿ, ಸಾರ್ವಜನಿಕ ಶೌಚಾಲಯದ ಮುಂದೆಹಾದು ಮೆಟ್ರೋ ನಿಲ್ದಾಣ ತಲುಪಬೇಕು. ಇನ್ನು ಉತ್ತರ ಕರ್ನಾಟಕದ ಕಡೆಗೆ ತೆರಳುವ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಬಂದಿಳಿಯುವ ಪ್ರಯಾಣಿಕರು ಕೂಡ ಮೆಟ್ರೋ ನಿಲ್ದಾಣಕ್ಕೆ ಬರಬೇಕಾದರೆ ಇದೇ ರೀತಿಯ ಸಾಹಸ ಮಾಡಬೇಕಾದ ಸ್ಥಿತಿ ಈಗ ಇದೆ. ನೂತನ ಸ್ಕೈವಾಕ್‌ನಿಂದ ಈ ಸಮಸ್ಯೆ ತಪ್ಪಲಿದೆ.
ಆದರೆ, ಇನ್ನೂ ಸ್ಕೈವಾಕ್‌ನಲ್ಲಿ ಪ್ರಯಾಣಿಕರಿಗೆ ಬಿಸಿಲು, ಮಳೆ ರಕ್ಷಣೆಗಾಗಿ ಶೆಲ್ಟರ್ ಅಳವಡಿಸಬೇಕು. ಬೀದಿ ದೀಪಗಳ ಅಳವಡಿಕೆ ಕೆಲಸ ಬಾಕಿ ಇದೆ. ಮೆಟ್ರೋ ನಿಲ್ದಾಣಕ್ಕೆ ತೆರಳಲು ಸೂಕ್ತ ಸೂಚನಾ ಫಲಕಗಳ ಅಳವಡಿಕೆಯೂ ಆಗಬೇಕಿದೆ. ಬಿಎಂಆರ್‌ಸಿ ಈ ಸ್ಕೈವಾಕ್ ನಿರ್ಮಾಣ ಮಾಡಿದೆ.
ಇದ್ದೂ ಇಲ್ಲದಂತಾದ ಸುರಂಗ ಮಾರ್ಗ: ಚಿಕ್ಕ ಲಾಲ್‌ಬಾಗ್‌ನಿಂದ ಗೋಪಾಲಪುರಕ್ಕೆ ಸಂಪರ್ಕ ಕಲ್ಪಿಸುವ ಮೆಟ್ರೋ ಸುರಂಗ ಮಾರ್ಗದ ಪ್ರವೇಶದ್ವಾರ ಬಹುತೇಕ ಮುಚ್ಚಿರುತ್ತದೆ. ಹಾಗಾಗಿ, ಇದು ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ. ಫೆಬ್ರವರಿಯಲ್ಲೇ ಈ ಅಂಡರ್‌ಪಾಸ್ ಸೇವೆಗೆ ಮುಕ್ತಗೊಂಡಿದ್ದು, ನೇರವಾಗಿ ಗೋಪಾಲಪುರಕ್ಕೆ ಸಂಪರ್ಕ ಕಲ್ಪಿಸುತ್ತದೆ. ಆದರೆ, ಆ ಭಾಗದಲ್ಲಿರುವ ಮೆಟ್ರೋ ನಿಲ್ದಾಣದ ಪ್ರವೇಶ ದ್ವಾರ ಯಾವಾಗಲೂ ಬೀಗ ಹಾಕಿರುತ್ತದೆ. ಹಾಗಾಗಿ, ಇದ್ದೂ ಇಲ್ಲದಂತಾಗಿದೆ. ಈ ಬಗ್ಗೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
* ವಿಜಯಕುಮಾರ ಚಂದರಗಿ