Advertisement

ಫೆಬ್ರವರಿಯೊಳಗೆ ನೀರಿನ ಸಂಪರ್ಕ ಕಲ್ಪಿಸಿ

09:32 AM Jul 10, 2021 | Team Udayavani |

ದಾವಣಗೆರೆ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 24/7 ಮಾದರಿಯಲ್ಲಿ ಪ್ರತಿ ಮನೆಗೆ ಶುದ್ಧ ಕುಡಿಯುವ ನೀರು ಒದಗಿಸುವ ಜಲಸಿರಿ ಯೋಜನೆಯಡಿ 97,589 ಮನೆಗಳಿಗೆ ಫೆಬ್ರವರಿ ವೇಳೆಗೆ ನೀರಿನ ಸಂಪರ್ಕ ಕಲ್ಪಿಸಬೇಕು ಎಂದು ಸಂಸದ ಡಾ| ಜಿ.ಎಂ. ಸಿದ್ದೇಶ್ವರ ಸುಯೆಜ್‌ ಪ್ರಾಜೆಕ್ಟ್ ಕಂಪನಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

Advertisement

ಶುಕ್ರವಾರ ಜಿಎಂಐಟಿ ಸಭಾಂಗಣದಲ್ಲಿ ನಡೆದ ಜಲಸಿರಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಳೆದ 4 ವರ್ಷದಲ್ಲಿ ಈವರೆಗೆ ಕೇವಲ ಶೇ.56 ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಮುಂದಿನ ಫೆಬ್ರವರಿಗೆ ಗುತ್ತಿಗೆ ಅವಧಿ ಮುಗಿಯಲಿದೆ. ಇನ್ನುಳಿದಿರುವ ಸಮಯದಲ್ಲಿ ಶೇ.44 ರಷ್ಟು ಕಾಮಗಾರಿ ಪೂರ್ಣಗೊಳಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಕೆಲಸ ಮಾಡಲಿಕ್ಕೆ ಆಗುವುದಿಲ್ಲ ಎಂದಾದರೆ ಯಾಕೆ ಗುತ್ತಿಗೆ ಪಡೆಯಬೇಕು ಎಂದು ತರಾಟೆಗೆ ತೆಗೆದುಕೊಂಡರು.

ಜಲಸಿರಿ ಯೋಜನೆಯಡಿ 681.92 ಕೋಟಿ ವೆಚ್ಚದಲ್ಲಿ 18 ಓವರ್‌ ಹೆಡ್‌ ಟ್ಯಾಂಕ್‌ಗಳನಿರ್ಮಾಣ ಹಾಗೂ 97,589 ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಿ, 8 ವರ್ಷಗಳ ಕಾಲ ನಿರ್ವಹಣೆ ಮಾಡುವ ಕಾಮಗಾರಿ ಗುತ್ತಿಗೆ ನೀಡಲಾಗಿದೆ. ಅನುದಾನ ಬಿಡುಗಡೆಯಲ್ಲಿ ಯಾವುದೇ ತೊಂದರೆ ಉಂಟಾಗಿಲ್ಲ. 97,589 ಮನೆಗಳಲ್ಲಿ 22,409 ಮನೆಗಳಿಗೆ ಮಾತ್ರ ಸಂಪರ್ಕ ನೀಡಲಾಗಿದೆ. ಓವರ್‌ಹೆಡ್‌ ಟ್ಯಾಂಕ್‌ಗಳು ಸಹ ಪೂರ್ಣಗೊಂಡಿಲ್ಲ. ನಿಗದಿತ ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸದಿದ್ದರೆ ನಿಯಮಾನುಸಾರ 20 ರಿಂದ 30 ಕೋಟಿ ವರೆಗೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದರು.

ನೀರಿನ ಸಂಪರ್ಕ ಒದಗಿಸುವ ಕೆಲಸ ಮಾಡುವಾಗ ಹಾಲಿ ಇರುವಂತಹ ನಲ್ಲಿ, ಯುಜಿಡಿ ಪೈಪ್‌ ಒಡೆದು ಹಾಕಲಾಗುತ್ತದೆ. ಎಷ್ಟೇ ಹೇಳಿದರೂ ದುರಸ್ತಿ ಮಾಡುವುದೇ ಇಲ್ಲ. ಹಾಗಾಗಿ ವಾರ್ಡ್‌ನಲ್ಲಿ ನೀರು ಪೂರೈಸಲು ಕಷ್ಟ ಆಗುತ್ತಿದೆ ಎಂದು ಮಾಜಿ ಮೇಯರ್‌ ಉಮಾ ಪ್ರಕಾಶ್‌ ಆಕ್ರೋಶ ವ್ಯಕ್ತಪಡಿಸಿದರು. ಒಂದರೆಡು ದಿನಗಳಲ್ಲಿ ದುರಸ್ತಿ ಮಾಡಿಕೊಡಬೇಕು ಎಂದು ಸಂಸದ ಡಾ| ಜಿ.ಎಂ. ಸಿದ್ದೇಶ್ವರ, ಸ್ಮಾರ್ಟ್‌ಸಿಟಿ ಯೋಜನೆ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ ಸೂಚಿಸಿದರು.

ಸಭೆಯಲ್ಲಿ ಎಲ್ಲ ಕೆಲಸಗಳನ್ನು ನಿಗದಿತ ಅವಧಿಯಲ್ಲಿ ಮಾಡಿಕೊಡುತ್ತೇವೆ ಎಂದು ಅಧಿಕಾರಿಗಳು, ಇಂಜಿನಿಯರ್‌ ಒಪ್ಪಿಕೊಳ್ಳುತ್ತಾರೆ.ಸಭೆಯಿಂದ ಹೊರ ಹೋದ ತಕ್ಷಣಕ್ಕೆ ಮರೆತೇ ಬಿಡುತ್ತಾರೆ. ಹಾಗಾಗಿ ಕಾಮಗಾರಿ ತ್ವರಿತಗತಿಯಲ್ಲಿ ನಡೆಯುತ್ತಿಲ್ಲ ಎಂದು ಸ್ಮಾರ್ಟ್‌ಸಿಟಿ ಯೋಜನೆ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ ತಿಳಿಸಿದರು.

Advertisement

ಜಿಲ್ಲಾಧಿಕಾರಿ ಮಹಾಂತೇಶ್‌ ಜಿ. ಬೀಳಗಿ ಮಾತನಾಡಿ, ಜಲಸಿರಿ ಯೋಜನೆಯಡಿ ನಿರೀಕ್ಷಿತ ಪ್ರಮಾಣ, ವೇಗದಲ್ಲಿ ಕೆಲಸಗಳು ನಡೆಯುತ್ತಿಲ್ಲ. ಇನ್ನು ಮುಂದೆ ಪ್ರತಿ ತಿಂಗಳು ಪರಿಶೀಲನಾ ಸಭೆ ನಡೆಸಲಾಗುವುದು ಎಂದರು.

ಮೇಯರ್‌ ಎಸ್‌.ಟಿ. ವೀರೇಶ್‌, ಆಯುಕ್ತ ವಿಶ್ವನಾಥ ಪಿ. ಮುದಜ್ಜಿ ,ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ಕಾರ್ಯಪಾಲಕ ಅಭಿಯಂತರ ಮಂಜುನಾಥ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next