ಕೋಳಿ ಕಣ್ಣು (ಕೆಂಗಣ್ಣು/ ಮದ್ರಾಸ್ ಐ) ಹಾವಳಿ ನಿಯಂತ್ರಿಸಲು ಸ್ವಯಂ ಆಸಕ್ತಿಯಿಂದ ಪ್ರತ್ಯೇಕವಾಗಿರುವುದು (ಐಸೊಲೇಶನ್) ಉತ್ತಮ ಪರಿಹಾರವಾಗಿದೆ ಎಂದು ಮಣಿಪಾಲ ಕೆಎಂಸಿ ಮತ್ತು ಕಸ್ತೂರ್ಬಾ ಆಸ್ಪತ್ರೆಯ ನೇತ್ರ ವಿಭಾಗದ ಯುನಿಟ್ ಹೆಡ್ ಮತ್ತು ಪ್ರಾಧ್ಯಾಪಕಿ ಡಾ| ಸುಲತಾ ಭಂಡಾರಿ ಸಲಹೆ ನೀಡಿದ್ದಾರೆ.
ಕೋಳಿ ಕಣ್ಣು ಕಾಯಿಲೆ ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ಕಾಯಿಲೆಯನ್ನು ತಡೆಗಟ್ಟುವ ಬಗ್ಗೆ “ಉದಯವಾಣಿ’ ವತಿಯಿಂದ ಮಂಗಳವಾರ ಮಣಿಪಾಲದ ಕೇಂದ್ರ ಕಚೇರಿಯಲ್ಲಿ ಆಯೋಜಿಸಲಾದ ಫೋನ್ ಇನ್ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡು ಜನರ ಸಂದೇಹಗಳಿಗೆ ಉತ್ತರಿಸಿ ಸೂಕ್ತ ಮಾರ್ಗದರ್ಶನ ನೀಡಿದರು. ಅವರು ನೀಡಿದ ಅಭಿಪ್ರಾಯಗಳು ಇಂತಿವೆ:
ಕೆಂಗಣ್ಣು ಲಕ್ಷಣಗಳು
ಕೆಂಗಣ್ಣು ಎಂದರೆ ಕಣ್ಣಿನ ಬಿಳಿ ಭಾಗ ಕೆಂಪಾಗುವ ಕಾಯಿಲೆಯಾಗಿದೆ. ಈ ವೇಳೆ ಕಣ್ಣಿನಲ್ಲಿ ನೀರು ಬರುವುದು, ರೆಪ್ಪೆ ಯಲ್ಲಿ ಊತ, ಕಣ್ಣಿನಲ್ಲಿ ಹಿಕ್ಕು, ಕಿವಿಯ ಹತ್ತಿರ ನೋವು, ಕಣ್ಣು ತೆರೆಯಲು ಕಷ್ಟವಾ ಗುವಂತಹ ಸಮಸ್ಯೆಗಳು ಉದ್ಭವಿಸುತ್ತವೆ. ಬಿಸಿಲು ನೋಡಲು ಆಗದಿರುವುದು, ಚಚ್ಚು ವಂತಾಗುತ್ತದೆ. ಈ ಸಮಸ್ಯೆ ಗಂಭೀರವಾದರೆ ಕಣ್ಣಿನಲ್ಲಿರುವ ಕಪ್ಪು ಭಾಗದಲ್ಲಿಯೂ ಸಣ್ಣ ಸಣ್ಣ ಚುಕ್ಕೆಗಳು ಕಾಣಿಸಿಕೊಂಡು ದೃಷ್ಟಿದೋಷವೂ ಉಂಟಾಗಬಹುದು.