Advertisement

ಕಾಂಗ್ರೆಸ್ಸಿಗರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ: ಸಿಎಂ ಬೊಮ್ಮಾಯಿ

10:57 AM May 08, 2023 | Team Udayavani |

ಹುಬ್ಬಳ್ಳಿ: ನಮ್ಮ ವಿರುದ್ಧ ಭ್ರಷ್ಟಾಚಾರ ಆರೋಪಕ್ಕೆ ಚುನಾವಣಾ ಆಯೋಗ ಮುಂದೆ ಸಾಕ್ಷಿ ನೀಡದವರು, ಭ್ರಷ್ಟಾಚಾರ ಸೇರಿದಂತೆ ವಿವಿಧ ಹಗರಣಗಳ ಕೇಸ್ ಹೊಂದಿದವರು ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಹೊಂದಿದ್ದಾರೆಯೇ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾಂಗ್ರೆಸ್ಸಿಗೆ ಟಾಂಗ್ ನೀಡಿದರು.

Advertisement

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಹಣವನ್ನು ರೈತರಿಗೆ ಹಂಚುತ್ತೇವೆ ಎಂಬ ಕಾಂಗ್ರೆಸ್ ವರಿಷ್ಠರ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿ, ಕಾಂಗ್ರೆಸ್ ನವರು ಹೇಳುವ ಮಾತುಗಳನ್ನು ಮಾಧ್ಯಮದವರಾಗಿ ನೀವು ನಂಬಿ ನಮಗೆ ಪ್ರಶ್ನೆ ಕೇಳುತ್ತೀರಲ್ಲ ಎಂದರಲ್ಲದೆ, ಕಾಂಗ್ರೆಸ್ ಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಸಣ್ಣ ನೈತಿಕತೆ ಇದೆಯೇ ಎಂಬುದನ್ನು ಆ ಪಕ್ಷದ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದರು.

ಚುನಾವಣೆ ಸಂದರ್ಭದಲ್ಲಿ ಆದಾಯ ತೆರಿಗೆ ಇಲಾಖೆ ದಾಳಿಯ ಬಗ್ಗೆ ಪ್ರತಿಕ್ರಿಯಿಸಿ, ಪ್ರತಿ ಜಿಲ್ಲೆಯಲ್ಲಿಯೂ ಐಟಿ ಇಲಾಖೆ ತನ್ನದೇ ಸಂಪರ್ಕ ಹೊಂದಿದ್ದು ಎಲ್ಲಿ ಮಾಹಿತಿ ಬರುತ್ತದೆಯೋ ಅಲ್ಲಿ ದಾಳಿ ಮಾಡುವುದು ಸಹಜ ಪ್ರಕ್ರಿಯೆ.  ಕೇವಲ ಕಾಂಗ್ರೆಸ್ ನವರಷ್ಟೇ ಅಲ್ಲ ಕೆಲವು ಕಡೆ ಬಿಜೆಪಿಯವರ ಮೇಲು ದಾಳಿ ನಡೆದಿದೆ ಎಂದರು.

ಕಾಂಗ್ರೆಸ್ ನವರು ಅನುಕಂಪ ಗಿಟ್ಟಿಸಿಕೊಳ್ಳಲು ಐಟಿ ದಾಳಿ ನಡೆಲಿದೆ ಎಂದು ಮೊದಲೇ ಹೇಳಿಕೆ ನೀಡುತ್ತಿದ್ದಾರೆ ಎಂ.ಬಿ. ಪಾಟೀಲ್, ಲಕ್ಷ್ಮಿ ಹೆಬ್ಬಾಳ್ಕರ್ ರಂತವರು ಹೇಳಿಕೆ ನೀಡಿ ಅನುಕಂಪ ಗಿಟ್ಟಿಸಿಕೊಳ್ಳುವ ಬದಲು ತಪ್ಪು ಮಾಡದಂತೆ ನೋಡಿಕೊಳ್ಳಲಿ ಎಂದು ಸಲಹೆ ನೀಡಿದರು.

ವೀರಶೈವ ಮಹಾಸಭಾ ಯಾವುದೇ ಪಕ್ಷಕ್ಕೆ ಬೆಂಬಲ ನೀಡುವ ಕಾರ್ಯ ಮಾಡುತ್ತಿಲ್ಲ. ಅದೊಂದು ಸಮುದ್ರ ಇದ್ದಂತೆ, ಚುನಾವಣಾ ಸಂದರ್ಭದಲ್ಲಿ ವೀರಶೈವರ ಹೆಸರಿನಲ್ಲಿ ವೇದಿಕೆ ಇನ್ನಿತರ ಸಂಘಟನೆಗಳು ಹುಟ್ಟಿಕೊಂಡು ಏನೇನೋ ಹೇಳಿ ನೀಡಿ ಬಿಡುತ್ತವೆ ಎಂದರು.

Advertisement

ರಾಜ್ಯದ್ಯಂತ ಅಂತಿಮ ಹಂತದ ಚುನಾವಣಾ ಪ್ರಚಾರ ನಡೆದಿದ್ದು ಪಕ್ಷದ ಹಲವು ನಾಯಕರು ಆಯಾ ಕ್ಷೇತ್ರದಲ್ಲಿ ಪ್ರಚಾರದಲ್ಲಿ ತೊಡಗಿದ್ದು 224 ವಿಧಾನಸಭಾ ಕ್ಷೇತ್ರಗಳಲ್ಲಿ ಅಂತಿಮ ಹಂತದ ಪ್ರಚಾರವನ್ನು ವ್ಯವಸ್ಥಿತವಾಗಿ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ಹಿಂದಿನ ಚುನಾವಣೆಗಳಲ್ಲಿಯೂ ಪ್ರಚಾರಕ್ಕೆ ಬಂದಿದ್ದು, ಈ ಬಾರಿಯೂ ಪ್ರಚಾರಕ್ಕೆ ಆಗಮಿಸಿದ್ದಾರೆ. ಕರ್ನಾಟಕದೊಂದಿಗೆ ಅವರು ಭಾವನಾತ್ಮಕ ಸಂಬಂಧವನ್ನು ಹೊಂದಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next