ಕುಕ್ಕೇಡಿ: ಕಳೆದ ನಾಲ್ಕೂವರೆ ವರ್ಷಗಳ ಸಿದ್ದರಾಮಯ್ಯ ಸರಕಾರದ ಸಾಧನೆ, ಕಾಂಗ್ರೆಸ್ ಪಕ್ಷದ ತತ್ವ ಆದರ್ಶಗಳನ್ನು ಮನೆಮನೆಗೆ ತಲುಪಿಸುವ ಕೆಲಸ ಕಾರ್ಯಕರ್ತರಿಂದ ಆಗಬೇಕು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 130 ಸ್ಥಾನಗಳನ್ನು ಪಡೆದು ಸ್ಪಷ್ಟ ಬಹುಮತ ಪಡೆಯಲಿದೆ. ಅದಕ್ಕೆ ಗ್ರಾಮ ಸಮಿತಿ ಪದಾಧಿಕಾರಿಗಳು ಶ್ರಮಿಸಬೇಕು ಎಂದು ಕರ್ನಾಟಕ ಪ್ರಾದೇಶಿಕ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಪ್ರಧಾನ ಕಾರ್ಯದರ್ಶಿ ಎಂ.ಎಸ್. ಮಹಮ್ಮದ್ ಹೇಳಿದರು.
ರವಿವಾರ ಬೆಳ್ತಂಗಡಿ ತಾಲೂಕಿನ ಕಾರ್ಯ ಕರ್ತರ ಸಭೆ ಹಾಗೂ ಕುಕ್ಕೇಡಿ- ನಿಟ್ಟಡೆ ಕಾಂಗ್ರೆಸ್ ಗ್ರಾಮಸಮಿತಿ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಬಿಜೆಪಿಗರು ಕೋಮುದ್ವೇಷದ ರಾಜಕಾರಣ ಮಾಡುತ್ತಿದ್ದಾರೆ, ಅವರ ಅಪಪ್ರಚಾರದ ನೈತಿಕತೆ, ಎದೆಗಾರಿಯನ್ನು ನಾವು ಚುನಾವಣೆ ಮೂಲಕ ಎದುರಿಸಲು ಸನ್ನದ್ಧ ರಾಗಿದ್ದೇವೆ. ವಿವಿಧ ಹಗರಣಗಳಲ್ಲಿ ಸಿಲುಕಿಕೊಂಡು ಜೈಲಿಗೆ ಹೋಗಿ ಬಂದಿರುವ ಯಡಿಯೂರಪ್ಪನವರ ನಾಯಕತ್ವ ಬಿಜೆಪಿಯ ದುರಂತ ಎಂದರು.
ಜಿಲ್ಲಾ ಕಾಂಗ್ರೆಸ್ ಸದಸ್ಯ ಸುಂದರ ಗೌಡ ಇಚ್ಚಿಲ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾಂಗ್ರೆಸ್ ಸಮಿತಿ ವಕ್ತಾರ ಕೆ.ಕೆ. ಸಾಹುಲ್ ಹಮೀದ್ ಮಾತನಾಡಿ, ಕಾಂಗ್ರೆಸ್‌ನ ಮನೆಮನೆಗೆ ಭೇಟಿ ಕಾರ್ಯಕ್ರಮದಿಂದ ರಾಜ್ಯದಲ್ಲಿ ವಿಶಿಷ್ಟ ಸಂಚಲನ ಮೂಡಿದೆ. 35, 40 ವರ್ಷಗಳ ಹಿಂದೆ ದೇಶಕ್ಕೆ ಇದ್ದ ಬಡತನ ಇಂದು ನಿವಾರಣೆ ಆಗಿದೆ. ಇದಕ್ಕೆಲ್ಲ ಬಡವರ ಬಗ್ಗೆ ಕಾಳಜಿ ಇರುವ ಕಾಂಗ್ರೆಸ್ ಪಕ್ಷದ ಯೋಜನೆಗಳಿಂದ ಸಾಧ್ಯವಾಗಿದೆ. ಅಚ್ಛೇ ದಿನ್ ಹೆಸರಿನಲ್ಲಿ ದೇಶದ ಆರ್ಥಿಕತೆಯನ್ನು ದಿವಾಳಿ ಮಾಡಿದ ಪ್ರಧಾನಿ ಮೋದಿಯವರು ಕೋಟ್ಯಾಂತರ ಜನತೆಯ ನಂಬಿಕೆಯನ್ನೇ ಹುಸಿ ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಮತೆ, ಕರುಣೆಯ ಮನಸ್ಥಿತಿ ದೇಶದ ಕಟ್ಟಕಡೆಯ ವ್ಯಕ್ತಿಗೆ ಲಭಿಸುವಂತಹ ಯೋಜನೆ ಜಾರಿಗೆ ತರಲು ಸಾಧ್ಯವಾಗಿದೆ. ಬಡವರ ಪಾಲಿನ ಅಭಿವೃದ್ಧಿಯ ಕಲ್ಪನೆಯನ್ನು ಬಿಜೆಪಿ ಊಹಿಸಿಯೂ ಇರಲಿಲ್ಲ. ಬಡವರ ಉದ್ಧಾರಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬರಬೇಕಾಯಿತು ಎಂದರು.
ಜಿಲ್ಲಾ ಎಸ್‌ಸಿ ಘಟಕದ ಅಧ್ಯಕ್ಷ, ಸಮಾರಂಭದ ಆಯೋಜಕ ಶೇಖರ ಕುಕ್ಕೇಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಡಂಗಡಿ ತಾ.ಪಂ. ಸದಸ್ಯೆ ಸುಶೀಲಾ, ಕುಕ್ಕೇಡಿ ಗ್ರಾ.ಪಂ. ಅಧ್ಯಕ್ಷೆ ತೇಜಾಕ್ಷಿ, ಪ್ರಭಾಕರ ಶಾಂತಿಗೋಡು, ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯೆ ವಿಮಲಾ ಚಂದ್ರ ಕೋಟ್ಯಾನ್, ಕುಕ್ಕೇಡಿ ಗ್ರಾ.ಪಂ. ಉಪಾಧ್ಯಕ್ಷರು, ಸದಸ್ಯರು ಹಾಗೂ ಕುಕ್ಕೇಡಿ -ನಿಟ್ಟಡೆ ಗ್ರಾಮಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ನಿತೀಶ್ ಎಚ್. ಸ್ವಾಗತಿಸಿ, ಅಜಿತ್ ಕುಮಾರ್ ಜೈನ್ ವಂದಿಸಿದರು. ಅನೂಪ್ ಜೆ. ಪಾಯಸ್ ನಿರ್ವಹಿಸಿದರು.
ಬಂಗೇರ ಮತ್ತೂಮ್ಮೆ ಜಯಗಳಿಸಲಿ
ಸುದೀರ್ಘ ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದ ಶಾಸಕ ಕೆ. ವಸಂತ ಬಂಗೇರ ಅವರನ್ನು ಬಿಜೆಪಿ ನಾಯಕರೂ ಒಪ್ಪಿಕೊಂಡಿದ್ದಾರೆ. ಬೆಳ್ತಂಗಡಿ ತಾಲೂಕಿಗೆ ಮತ್ತೂಮ್ಮೆ ಕೋಟಿ ಕೋಟಿ ಮೊತ್ತದ ಅನುದಾನ ಬರಬೇಕಾದರೆ ವಸಂತ ಬಂಗೇರ ಅವರು ಮತ್ತೂಮ್ಮೆ ವಿಧಾನಸಭಾ ಚುನಾವಣೆಯಲ್ಲಿ ಜಯಗಳಿಸಬೇಕು.
–
ಎಂ.ಎಸ್. ಮಹಮ್ಮದ್, ಕೆಪಿಸಿಸಿ
ಪ್ರಧಾನ ಕಾರ್ಯದರ್ಶಿ