ಬೆಂಗಳೂರು:ಬಿಜೆಪಿ ಸರಕಾರದ ಭ್ರಷ್ಟಾಚಾರ ವಿರುದ್ಧ ಗುರುವಾರ (ಮಾರ್ಚ್ 09) 2ಗಂಟೆಗಳ ಕಾಲದ ಕರ್ನಾಟಕ ಬಂದ್ ಕರೆಯನ್ನು ವಾಪಸ್ ಪಡೆದಿರುವುದಾಗಿ ಕೆಪಿಸಿಸಿ (ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ) ತಿಳಿಸಿದೆ.
ಇದನ್ನೂ ಓದಿ:ಭಾರತೀಯ ನೌಕಾಪಡೆಯ ಹೆಲಿಕಾಪ್ಟರ್ ಮುಂಬೈ ಕರಾವಳಿ ಪ್ರದೇಶ ಸಮೀಪ ತುರ್ತು ಸ್ಪರ್ಶ
ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಶಿಕ್ಷಣ ಸಂಸ್ಥೆಗಳು, ವಿದ್ಯಾರ್ಥಿಗಳು, ಪೋಷಕರ ಮನವಿ ಮೇರೆಗೆ ಬಂದ್ ಹಿಂಪಡೆಯಲಾಗಿದೆ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಮಾಹಿತಿ ನೀಡಿದೆ. ಮುಂದಿನ ಹೋರಾಟಕ್ಕೆ ಸಂಬಂಧಿಸಿದಂತೆ ಸ್ಕ್ರೀನಿಂಗ್ ಕಮಿಟಿ ಸಭೆ ಬಳಿಕ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ತಿಳಿಸಿದೆ.
ರಾಜ್ಯ ಬಿಜೆಪಿ ಸರಕಾರದ ಭ್ರಷ್ಟಾಚಾರ ಹಾಗೂ ಶೇ.40 ಕಮಿಷನ್ ವಿರುದ್ಧ ಮಾರ್ಚ್ 9ರಂದು ಬೆಳಗ್ಗೆ 9ರಿಂದ 11ಗಂಟೆವರೆಗೆ ಬಂದ್ ನಡೆಸುವಂತೆ ಕಾಂಗ್ರೆಸ್ ಕರೆ ಕೊಟ್ಟಿತ್ತು. ಅಲ್ಲದೇ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಗಳಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಬಲವಂತದ ಬಂದ್ ಮಾಡುವುದಿಲ್ಲ ಎಂದು ಕಾಂಗ್ರೆಸ್ ತಿಳಿಸಿತ್ತು.
ಏತನ್ಮಧ್ಯೆ ಕಾಂಗ್ರೆಸ್ ಪಕ್ಷದ 2ಗಂಟೆಗಳ ಕಾಲದ ಬಂದ್ ಕರೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿ, ಎಲ್ಲಿಯಾದರೂ ಈ ರೀತಿಯ ಬಂದ್ ಆಚರಣೆ ಕೇಳಿದ್ದೀರಾ? ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆ ನಡೆಯುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ಜನಸಾಮಾನ್ಯರ ಬದುಕಿನ ಜೊತೆ ಆಟವಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದರು.