ಬೆಳಗಾವಿ: ಅಥಣಿ ತಾಲೂಕಿನ ಅತ್ಯಂತ ಪ್ರಮುಖವಾದ 1500 ಕೋಟಿ ವೆಚ್ಚದ ಬೃಹತ್ ಏತ ನೀರಾವರಿ ಯೋಜನೆಯನ್ನು ಬೆಳಗಾವಿ ಜಿಲ್ಲೆಗೆ ಕೊಡುವ ಮೂಲಕ ಲಕ್ಷ್ಮಣ ಸವದಿ ಅವರಿಗೆ ಕೊಟ್ಟ ಭರವಸೆ ಈಡೇರಿಸಿದ್ದೇವೆ ಎಂದು ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಟ್ಟಲಗಿಯ (ಅಮ್ಮಾಜೇಶ್ವರಿ) ಏತ ನೀರಾವರಿ ಯೋಜನೆಯನ್ನು ಉದ್ಘಾಟಿಸಿ ಮಾತನಾಡಿ, ಕೇಂದ್ರದ ಹಾಲಿ ಸರ್ಕಾರ ಮತ್ತು ರಾಜ್ಯದಲ್ಲಿ ಈ ಹಿಂದೆ ಇದ್ದ ಬಿಜೆಪಿ ಸರ್ಕಾರ ರಾಜ್ಯದ ಯಾವ ನೀರಾವರಿ ಯೋಜನೆಗಳಿಗೂ ಬೆಂಬಲ ನೀಡಲಿಲ್ಲ. ಕೃಷ್ಣ ಮೇಲ್ದಂಡೆ, ಮಹದಾಯಿ, ಭದ್ರಾ ಮೇಲ್ದಂಡೆ, ಮೇಕೆದಾಟು ಯೋಜನೆಗಳಿಗೆ ಕೇಂದ್ರ ಒಂಚೂರು ಸಹಕಾರ ನೀಡುತ್ತಿಲ್ಲ ಎಂದರು.
ನಿಮ್ಮ ಬದುಕಿಗೆ ಆಸರೆ ಆಗುತ್ತಿರುವ, ಕುಟುಂಬದ ಕಷ್ಟಗಳಿಗೆ ಸ್ಪಂದಿಸುವ ಕಾರ್ಯಕ್ರಮ ಕೊಡುತ್ತಿರುವ ನಾವು ಬೇಕೋ-ದೇವರ ಹೆಸರಲ್ಲಿ ನಿಮ್ಮ ಭಾವನೆ ಕೆರಳಿಸಿ ನಿಮ್ಮ ಬದುಕಿಗೆ ವಂಚಿಸುತ್ತಿರುವ ಬಿಜೆಪಿ ಬೇಕಾ? ನಿಮ್ಮ ಹೃದಯವನ್ನು ಕೇಳಿಕೊಳ್ಳಿ. ನಿಮ್ಮ ಹೃದಯ ಹೇಳಿದವರಿಗೆ ಮತ ಹಾಕಿ ಎಂದು ಕರೆ ನೀಡಿದರು.
ನಾಡಿನ ಬಡವರ, ಮಧ್ಯಮ ವರ್ಗದವರ ಕೊಳ್ಳುವ ಶಕ್ತಿಯನ್ನು ಹೆಚ್ಚಿಸಿದ್ದೇವೆ. ಆದರೆ ಬಿಜೆಪಿ ಇದನ್ನು ವಿರೋಧಿಸುತ್ತಿದೆ. ನಾಡಿನ ನಾಲ್ಕೂವರೆ ಕೋಟಿ ಫಲಾನುಭವಿಗಳನ್ನು ಬಿಜೆಪಿ ಅವಮಾನಿಸುತ್ತಿದೆ. ನಿಮ್ಮನ್ನು ಅವಮಾನಿಸುವವರನ್ನು ಕ್ಷಮಿಸಬೇಡಿ ಎಂದರು.
ಇದೆ ವೇಳೆ ಲಕ್ಷ್ಮಣ ಸವದಿ ಅವರಿಗೆ ಸದ್ಯದಲ್ಲೇ ಒಳ್ಳೆಯ ಭವಿಷ್ಯ ಇದೆ ಎಂದರು.